Advertisement

Cabinet Meeting: ಕೋವಿಡ್‌ ಹಗರಣ: ತನಿಖೆಗೆ ಸಿಎಸ್‌ ನೇತೃತ್ವದ ಸಮಿತಿ

12:32 AM Sep 06, 2024 | Team Udayavani |

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ನಡೆದಿದೆ ಎನ್ನಲಾದ ಖರೀದಿ ಅಕ್ರಮ ಹಾಗೂ ದುರಾಡಳಿತದ ತನಿಖೆಗಾಗಿ ರಾಜ್ಯ ಸರಕಾರ ನೇಮಿಸಿದ್ದ ನ್ಯಾ| ಮೈಕಲ್‌ ಜೆ. ಕುನ್ಹಾ ಆಯೋಗದ ಮಧ್ಯಾಂತರ ವರದಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದು, ವರದಿಯ ವಿಸ್ತ್ರತ ಅಧ್ಯಯನಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹಾಗೂ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

Advertisement

ಸಿಎಂ ಸಿದ್ದರಾಮಯ್ಯನವರೇ ಖುದ್ದಾಗಿ ಈ ವರದಿ ವಿಚಾರವನ್ನು ಸಂಪುಟ ಸಭೆಯಲ್ಲಿ ಪ್ರಸ್ತಾವಿಸಿದರು. ಒಟ್ಟು 6 ಸಂಪುಟದಲ್ಲಿ ವರದಿ ಸಲ್ಲಿಕೆಯಾಗಿದ್ದು, ಇದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಕಷ್ಟು ಅಧ್ಯಯನ ನಡೆಸಬೇಕಿದೆ. ಹೀಗಾಗಿ ವಿಶ್ಲೇಷಣೆ ಮಾಡಿ ಮುಂದಿನ ಹೆಜ್ಜೆ ಇಡಲು ಹಿರಿಯ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಸುದ್ದಿಗಾರರ ಜತೆಗೆ ಮಾತನಾಡಿ, ಅಧ್ಯಯನ ವರದಿ ನೀಡುವುದಕ್ಕೆ ಅಧಿಕಾರಿಗಳಿಗೆ 1 ತಿಂಗಳು ಸಮಯಾವಕಾಶ ನೀಡಲಾಗಿದೆ. ಪೂರ್ಣ ವರದಿ ನೀಡುವುದಕ್ಕೆ ಕುನ್ಹಾ ಆಯೋಗಕ್ಕೆ ಮತ್ತೆ 6 ತಿಂಗಳು ಹೆಚ್ಚುವರಿ ಕೊಡಲಾಗಿದೆ ಎಂದರು.

ನೂರಾರು ಕೋಟಿ ಅವ್ಯವಹಾರ ಆಗಿರುವ ಬಗ್ಗೆ ನ್ಯಾಯಾಧೀಶರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಅದೇ ರೀತಿ ಕಡತ ಕಣ್ಮರೆ ಬಗ್ಗೆ ಪ್ರಸ್ತಾವವಾಗಿದೆ. ಹಲವು ದಾಖಲೆಗಳ ಬಗ್ಗೆ ಪದೇ ಪದೆ ಪತ್ರ ವ್ಯವಹಾರ ನಡೆಸಿದರೂ ಅಂದು ಆರೋಗ್ಯ ಹಾಗೂ ವೈದ್ಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಮಾಹಿತಿ ಒದಗಿಸಿಲ್ಲ ಎಂದರು. ಮಧ್ಯಾಂತರ ವರದಿಯನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸುವುದಕ್ಕೆ ಅವಕಾಶವಿದೆ. ಅಗತ್ಯ ಬಿದ್ದರೆ ಸದನದಲ್ಲಿ ಮಂಡಿಸುವುದಕ್ಕೆ ಅಥವಾ ವಿಶೇಷ ಅಧಿವೇಶನ ಕರೆಯುವುದಕ್ಕೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ನನ್ನ ಬಳಿ ಮಾಹಿತಿ ಇಲ್ಲ
ವರದಿಯಲ್ಲಿ ಡಾ| ಕೆ. ಸುಧಾಕರ್‌ ಸೇರಿ ಯಾವುದಾದರೂ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಉಲ್ಲೇಖವಿದೆಯೇ ಎಂಬ ಪ್ರಶ್ನೆಗೆ, ಆ ಬಗ್ಗೆ ನನ್ನ ಬಳಿ ಸದ್ಯಕ್ಕೆ ಮಾಹಿತಿ ಇಲ್ಲ. ವರದಿಯಲ್ಲಿ ಉಲ್ಲೇಖೀಸಲಾಗಿದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಅಧಿಕಾರಿಗಳು ವಿಶ್ಲೇಷಣ ವರದಿ ನೀಡಿದ ಬಳಿಕ ಗೊತ್ತಾಗುತ್ತದೆ. ಈ ಬಗ್ಗೆ ಸರಕಾರ ಮಗುಮ್ಮಾಗಿ ಇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಪಡಿತರದಾರರಿಗೆ ಫ‌ುಡ್‌ ಕಿಟ್‌ ವಿತರಣೆ ಇಲ್ಲ: ನಗದೇ ಗ್ಯಾರಂಟಿ
ಬೆಂಗಳೂರು: ಸಾರ್ವಜನಿಕ ವಿತರಣೆ ಪದ್ಧತಿಯಡಿ ಪಡಿತರ ಫ‌ಲಾನುಭವಿಗಳಿಗೆ ನೀಡುತ್ತಿರುವ ನೇರ ನಗದು ವರ್ಗಾವಣೆ (ಡಿಬಿಟಿ) ಪದ್ಧತಿಯನ್ನು ಮುಂದುವರಿಸುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿಎಂ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಬಿಟಿ ಬದಲು ಆಹಾರ ಕಿಟ್‌ ವಿತರಿಸುವ ಬಗ್ಗೆ ನಿರ್ಣಯ ಕೈಗೊಳ್ಳುವ ವಿಚಾರ ಸಂಪುಟದ ಕಾರ್ಯಸೂಚಿಯಲ್ಲಿ ಉಲ್ಲೇಖವಾಗಿತ್ತು. ಆದರೆ ವಿಸ್ತೃತ ಚರ್ಚೆಯ ಬಳಿಕ ಫ‌ಲಾನುಭವಿಗಳಿಗೆ ಡಿಬಿಟಿ ಮುಂದುವರಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಈ ಸಂಬಂಧ ಮೂರು ಪ್ರಸ್ತಾವ ಮಂಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next