ರಾಯಚೂರು: ಗ್ರಾಮೀಣ ಶಾಸಕ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಆಪ್ತ ಸಹಾಯಕರಾಗಿದ್ದ ಪಂಪಣ್ಣ ಮನೆಗೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿತು.
ರಾಮ್ ರಹೀಮ್ ಕಾಲನಿಯಲ್ಲಿರುವ ದದ್ದಲ್‌ರ ಮನೆಗೆ ಬೆಳಗ್ಗೆ 7 ಗಂಟೆಗೆ ಐವರು ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿತು. ಎಸ್‌ಐಟಿ ವಿಚಾರಣೆಗೆ ಕರೆದಿರುವ ಹಿನ್ನೆಲೆಯಲ್ಲಿ ಶಾಸಕರು ಬೆಂಗಳೂರಿನಲ್ಲೇ ಉಳಿದಿದ್ದರು. ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ ಶಾಸಕರ ಪತ್ನಿ, ಅಳಿಯ, ಕೆಲಸಗಾರರು ಇದ್ದರು.
ಅಧಿಕಾರಿಗಳು ಮನೆಯ ಸದಸ್ಯರ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಳಿಯ ಚನ್ನಬಸವನನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆಂದು ತಿಳಿದುಬಂದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ದಾಳಿ ಸಂಜೆವರೆಗೂ ನಡೆದಿತ್ತು. ಶಾಸಕರ ಮನೆಯಂಗಳದಲ್ಲಿ ನಿಂತಿದ್ದ ಎರಡು ಕಾರುಗಳನ್ನು ಕೂಡ ಶೋಧಿಸಲಾಗಿದೆ. ಇಡಿ ಅಧಿಕಾರಿಗಳ ಜತೆ ಸಿಆರ್‌ಪಿಎಫ್ ಭದ್ರತಾ ಸಿಬ್ಬಂದಿ ಕೂಡ ಇದ್ದರು.
ದದ್ದಲ್ ಪಿಎ ಮನೆ ಮೇಲೂ ದಾಳಿ
ಬೆಂಗಳೂರಿನಲ್ಲಿ ಶಾಸಕ ದದ್ದಲ್‌ರ ಆಪ್ತ ಸಹಾಯಕರಾಗಿದ್ದ ಪಂಪಣ್ಣನವರ ನಗರದ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಆಜಾದ್ ನಗರದ ರಾಯಲ್ ಫೋರ್ಟ್ ಅಪಾರ್ಟ್‌ಮೆಂಟ್‌ನಲ್ಲಿರುವ ಮನೆಯಲ್ಲಿ ದಾಳಿ ನಡೆಸಲಾಗಿದೆ. ಕೆಲ ದಿನಗಳ ಹಿಂದೆ ಪಿಎ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ನೂತನವಾಗಿ ಎಂಎಲ್‌ಸಿಯಾಗಿರುವ ವಸಂತಕುಮಾರ್ ಬಳಿ ಆಪ್ತ ಸಹಾಯಕರಾಗಿ ಸೇರಿಕೊಂಡಿದ್ದರು.
ಸಿಆರ್‌ಪಿಎಫ್ ಸಿಬಂದಿ ಭದ್ರತೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಸಂಬಂಧ ರಾಯಚೂರು ಹಾಗೂ ಬಳ್ಳಾರಿಯಲ್ಲಿ ಶಾಸಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯಿಂದ ಭದ್ರತೆ ಒದಗಿಸಲಾಗಿತ್ತು. ದಾಳಿ ಹಾಗೂ ವಿಚಾರಣೆ ವೇಳೆ ಇಡಿ ಅಧಿ ಕಾರಿಗಳ ತಂಡದ ಜತೆ ಸಿಆರ್‌ಪಿಎಫ್ ಭದ್ರತ ಸಿಬಂದಿ ಕೂಡ ಇದ್ದರು.