ಹೊಸದಿಲ್ಲಿ: ಪ್ರೀಮಿಯರ್ ಡಿವಿಷನ್ ಕ್ಲಬ್ ಎಚ್‌ಜಿಸಿ ಪರ ಹಾಕಿ ಪಂದ್ಯವನ್ನು ಆಡಲು ನೆದರ್ಲೆಂಡ್ಸ್ ಗೆ ತೆರಳಿದ್ದ ಭಾರತದ ಹಾಕಿಪಟು ದೇವಿಂದರ್ ವಾಲ್ಮೀಕಿ 4 ತಿಂಗಳ ಬಳಿಕ ತವರಿಗೆ ಮರಳಿದ್ದಾರೆ.
ಫೆಬ್ರವರಿಯಲ್ಲೇ ವಾಲ್ಮೀಕಿ ನೆದರ್ಲೆಂಡ್ಸ್‌ಗೆ ತೆರಳಿದ್ದರು. ಆದರೆ ಕೋವಿಡ್-19 ಕಾರಣ ಈ ಪಂದ್ಯಾವಳಿ ರದ್ದುಗೊಂಡಿತು. ಲಾಕ್‌ಡೌನ್ ಘೋಷಣೆಯಾಯಿತು. ಹೀಗಾಗಿ ಅವರಿಗೆ ಭಾರತಕ್ಕೆ ವಾಪಸಾಗಲು ಸಾಧ್ಯವಾಗಿರಲಿಲ್ಲ. ಆದರೆ ಅಲ್ಲಿಯೇ ಅಭ್ಯಾಸ ನಡೆಸತೊಡಗಿದರು. ಇದೀಗ ಆ್ಯಮ್ಸ್‌ಟರ್ಡಮ್-ಮುಂಬಯಿ ಏರ್ ಇಂಡಿಯಾ “ವಂದೇ ಭಾರತ್ ಮಿಷನ್’ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದಾರೆ.
“ಭಾರತಕ್ಕೆ ಹೋಲಿಸಿದರೆ ಹಾಲೆಂಡ್‌ನಲ್ಲಿ ಅಭಾಸ್ಯ ಸೌಕರ್ಯ ಉತ್ತಮ ಮಟ್ಟದಲ್ಲಿತ್ತು. ಅಲ್ಲಿನ ಅಭ್ಯಾಸಾವಧಿಯಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ. ಇನ್ನೂ ಅಲ್ಲಿಯೇ ಮುಂದುವರಿಯಬಹುದಿತ್ತು. ಆದರೆ ಕೌಂಟುಂಬಿಕ ಸಮಸ್ಯೆಯಿಂದಾಗಿ ನಾನು ಭಾರತಕ್ಕೆ ಮರಳಬೇಕಾಯಿತು’ ಎಂದು 2016ರ ಒಲಿಂಪಿಯನ್ ವಾಲ್ಮೀಕಿ ಹೇಳಿದರು. ಅವರು 2019-20ರ ಋತುವಿನಲ್ಲಿ ಎಚ್‌ಜಿಸಿಯೊಂದಿಗೆ ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು.
ದೇವೇಂದ್ರ ವಾಲ್ಮೀಕಿ ಜತೆ ಅಭ್ಯಾಸ ನಡೆಸುತ್ತಿದ್ದ ಆಸ್ಟ್ರೇಲಿಯ, ಆರ್ಜೆಂಟೀನಾ, ಜಪಾನ್ ಮತ್ತು ಫ್ರಾನ್ಸ್ ಹಾಕಿ ಆಟಗಾರರೆಲ್ಲ ಹಾಲೆಂಡ್‌ನಲ್ಲೇ ಉಳಿದಿದ್ದಾರೆ.