ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ರಚಿಸಲಾಗಿದ್ದು, ತನಿಖೆ ಚುರುಕಾಗಿ ನಡೆಯುತ್ತಿದೆ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಡಿಸಿಎಂ ಶಿವಕುಮಾರ್ ಮಾತನಾಡಿ, ನಾವು ಯಾರನ್ನೂ ಈ ಪ್ರಕರಣದಲ್ಲಿ ರಕ್ಷಿಸುವುದಿಲ್ಲ. ಬಿಜೆಪಿ ಕಾಲದಲ್ಲೂ ಈ ರೀತಿಯ ಘಟನೆಗಳು ನಡೆದಿವೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್‌ನಲ್ಲಿ ಕೆ.ಎಸ್.ಈಶ್ವರಪ್ಪ ಹೆಸರು ನೇರವಾಗಿ ಕೇಳಿ ಬಂದಿತ್ತು. ಹೀಗಾಗಿ ರಾಜೀನಾಮೆ ಕೇಳಿದ್ದೆವು. ಆದರೆ, ಇಲ್ಲಿ ಮಂತ್ರಿ ಹೇಳಿದ್ದರು ಎಂದು ಅಧಿಕಾರಿ ಹೇಳಿದ್ದಾರೆ. ದಾಖಲೆ ಸಿಕ್ಕರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಸಿಎಂ ಮತ್ತು ನಾನು ಹಣ ಹಂಚಿಕೊಂಡಿದ್ದೇವೆ ಎಂದು ಸಿ.ಟಿ.ರವಿ ಹೇಳಿದ್ದಾನಲ್ಲ. ಆದರೆ, ರವಿ ಮತ್ತು ನಾನು ಪಾಟ್ನìರ್ಸ್. ಹೀಗಾಗಿ ಇಬ್ಬರೂ ಹಂಚಿಕೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ ತಿರುಗೇಟು ನೀಡಿದರು.