ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರದ ಹಣ ಬಳ್ಳಾರಿ ಮತ್ತು ರಾಯಚೂರು ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ದುರ್ಬಳಕೆಯಾಗಿದ್ದು, ಚುನಾವಣ ಅಕ್ರಮ ಪ್ರಕರಣ ದಾಖಲಿಸಿ ಫಲಿತಾಂಶ ತಡೆಹಿಡಿಯಬೇಕೆಂದು ಆಗ್ರಹಿಸಿ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.
ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರೋಧಿ ಬಣದ ಸದಸ್ಯರು ರಾಜಭವನಕ್ಕೆ ಭೇಟಿ ನೀಡಿ ದೂರು ನೀಡಿದ್ದು, ಗುರುವಾರ ನಡೆದ ಆರ್‌ಎಸ್‌ಎಸ್ ಸಭೆಯ ಬೆನ್ನಲ್ಲೇ ಈ ಬಣ ಚುರುಕಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಬಿ.ಪಿ. ಹರೀಶ್, ಎಂ. ಚಂದ್ರಪ್ಪ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಶ್ರೀಮಂತ್ ಪಾಟೀಲ್, ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಮಾಜಿ ಶಾಸಕ ಸೋಮಲಿಂಗಪ್ಪ, ಯಡಿಯೂರಪ್ಪನವರ ಮಾಜಿ ಪಿಎ ಎನ್.ಆರ್. ಸಂತೋಷ್ ಸೇರಿ 21 ಜನರು ಈ ನಿಯೋಗದಲ್ಲಿದ್ದರು. ವಾಲ್ಮೀಕಿ ನಿಗಮದ ಅವ್ಯವಹಾರ ಸಂಬಂಧ ರಾಜ್ಯಪಾಲರಿಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಹಿರೇಹಾಳ್ ಅವರು ಈಗಾಗಲೇ ಸಲ್ಲಿಸಿರುವ ದೂರಿಗೆ ಪೂರಕವಾದ ದಾಖಲೆಗಳನ್ನು ಈ ನಿಯೋಗ ರಾಜ್ಯಪಾಲರಿಗೆ ನೀಡಿದೆ.
ಇದಾದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅರವಿಂದ ಲಿಂಬಾವಳಿ, ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಬಳಸಿರುವುದು ಮತ್ತು ಗ್ಯಾರಂಟಿ ಯೋಜನೆಗೆಳಿಗೆ ಎಸ್‌ಸಿಇಪಿ, ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ.
ಅರುಣ್ ಹಿರೇಹಾಳ್ ಚುನಾವಣೆಗಿಂತಲೂ ಮೊದಲೇ ದೂರು ದಾಖಲಿಸಿದ್ದರು. ಅದಕ್ಕೆ ಚುನಾವಣ ಆಯೋಗ ಸಮರ್ಪಕ ಉತ್ತರ ಕೊಟ್ಟಿಲ್ಲ. ನಾವು ಪೂರಕ ದಾಖಲೆಗಳೊಂದಿಗೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಮತ್ತು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಶಾಸಕತ್ವ ರದ್ದುಪಡಿಸಬೇಕು. ಜತೆಗೆ ಬಳ್ಳಾರಿ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ಫಲಿತಾಂಶ ತಡೆ ಹಿಡಿಯಬೇಕೆಂದು ಆಗ್ರಹಿಸಿದರು.