Advertisement

Valmiki Corporation Scam: ಸರಕಾರ ಅಸ್ಥಿರಕ್ಕೆ ಇ.ಡಿ. ಅಸ್ತ್ರ: ಕಾಂಗ್ರೆಸ್‌ ಗಂಭೀರ ಆರೋಪ

12:56 AM Jul 19, 2024 | Team Udayavani |

ಬೆಂಗಳೂರು: ದಿನದಿಂದ ದಿನಕ್ಕೆ ವಾಲ್ಮೀಕಿ ಹಗರಣದ ಕುಣಿಕೆ ಬಿಗಿಯಾಗುತ್ತಿರುವ ಬೆನ್ನಲ್ಲೇ, “ಪ್ರಕರಣದ ತನಿಖೆ ನೆಪದಲ್ಲಿ ಸರಕಾರವನ್ನೇ ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ’ ಎಂದು ಐವರು ಸಚಿವರ ಸಹಿತ ಆಡಳಿತ ಪಕ್ಷದ ಸದಸ್ಯರು ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಅಧಿವೇಶನ ನಡೆಯುವ ಸಂದರ್ಭದಲ್ಲೇ ಈ ದಾಳವು ಪ್ರಕರಣ ಹೊಸ ತಿರುವು ಪಡೆದುಕೊಳ್ಳುವಂತೆ ಮಾಡಿದೆ.

ಅಧಿವೇಶನ ಆರಂಭಕ್ಕೆ ಮುನ್ನ ವಿಧಾನಸೌಧದಲ್ಲಿ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರಾದ ಕೆ.ಜೆ. ಜಾರ್ಜ್‌, ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್‌ ಮತ್ತು ಶಾಸಕ ಪೊನ್ನಣ್ಣ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. ವಾಲ್ಮೀಕಿ ಹಗರಣದಲ್ಲಿ ಸಿಎಂ-ಡಿಸಿಎಂ ಹೆಸರು ಹೇಳುವಂತೆ ಜಾರಿ ನಿರ್ದೇಶನಾಲಯ (ಇ.ಡಿ.)ದ ಮೂಲಕ ಒತ್ತಡ ಹೇರಲಾಗುತ್ತಿದೆ. ಇದು ದಿಲ್ಲಿ, ಝಾರ್ಖಂಡ್‌ನ‌ಲ್ಲಿ ನಡೆಸಿದ್ದರ ಮುಂದುವರಿದ ಪ್ರಯೋಗವಾಗಿದೆ.

ಒಂದು ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸುವ ಈ ಪ್ರಯತ್ನದ ವಿರುದ್ಧ ಅಗತ್ಯಬಿದ್ದರೆ ಜನಾಂದೋಲನ ನಡೆಸುವುದಾಗಿ ಎಚ್ಚರಿಸಿದರು.

ವಿಧಾನಸಭೆಯಲ್ಲೂ ಇದು ಪ್ರತಿಧ್ವನಿಸಿತು. ಸರಕಾರ ವನ್ನು ಅತಂತ್ರಗೊಳಿಸುವ ಪ್ರಯತ್ನ ವಿಪಕ್ಷಗಳಿಂದ ನಡೆಯುತ್ತಿದೆ ಎಂದು ಆಡಳಿತ ಪಕ್ಷದ ಸದಸ್ಯರು ಗುಡುಗಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಸರಕಾರವನ್ನು ಅಡಕತ್ತರಿಗೆ ಸಿಲುಕಿಸುವ ಬಿಜೆಪಿಯ ತಂತ್ರಕ್ಕೆ ಆಡಳಿತಾರೂಢ ಕಾಂಗ್ರೆಸ್‌ ಈ ಮೂಲಕ ಪ್ರತಿತಂತ್ರ ಹೆಣೆದಿದೆ.

Advertisement

ದಿಲ್ಲಿ, ಝಾರ್ಖಂಡ್‌ ಮಾದರಿ
ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ಕೇಂದ್ರ ಸರಕಾರದ ಪಾಲಿಗೆ ಇ.ಡಿ. ಸ್ಥಿರ ಸರಕಾರಗಳನ್ನು ಅಸ್ಥಿರಗೊಳಿಸುವ ಅಸ್ತ್ರವಾಗಿದೆ. ದಿಲ್ಲಿ, ಝಾರ್ಖಂಡ್‌ ರೀತಿಯಲ್ಲಿ ಕರ್ನಾಟಕದಲ್ಲೂ ತನಿಖೆ ನಡೆಸುವುದಕ್ಕೆ ಇ.ಡಿ. ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ತಪ್ಪಿತಸ್ಥರನ್ನು ಬಿಟ್ಟು ಬೇರೆಯವರಿಗೆ ತೊಂದರೆ ನೀಡುವ ಷಡ್ಯಂತ್ರ ನಡೆಯುತ್ತಿದೆ.

ವಿಪಕ್ಷಗಳು ಹಾಗೂ ಮಾಧ್ಯಮಗಳಿಗೆ ತಮಗೆ ಬೇಕಾದ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಮಾಡಿದ್ದನ್ನು ಇಲ್ಲಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 10 ವರ್ಷಗಳಲ್ಲಿ ವಿಪಕ್ಷ ಸರಕಾರಗಳನ್ನು ಹಣಿಯುವುದಕ್ಕೆ ಇ.ಡಿ.ಯನ್ನು ಬಳಸಿಕೊಳ್ಳಲಾಗುತ್ತಿದೆ. ವಿಪಕ್ಷ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಅರವಿಂದ ಕೇಜ್ರಿವಾಲ್‌ ಪ್ರಕರಣದಲ್ಲಿ ಇ.ಡಿ.ಯ ಈ ಧೋರಣೆಯ ಬಗ್ಗೆ ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ. ಮನಬಂದಂತೆ ತನಿಖೆ ನಡೆಸುವುದು ಸಲ್ಲ ಎಂದು ಹೇಳಿದೆ. ಇ.ಡಿ.ಯ ಬಹುತೇಕ ಕಾರ್ಯಾಚರಣೆಗಳು ರಾಜಕೀಯ ಪ್ರೇರಿತವಾಗಿರುತ್ತವೆ. ಈ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಇ.ಡಿ. ಬಂಧಿಸಿ 2 ತಿಂಗಳು ಕಾಲ ಜಾಮೀನು ಸಿಗದಂತೆ ಮಾಡಿತ್ತು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ವಜಾಗೊಂಡಿದೆ. ಆದರೆ ಇದರಿಂದ ಆದ ನಷ್ಟ, ಹಿಂಸೆ, ಅವಮಾನವನ್ನು ಯಾರು ಭರಿಸಲು ಸಾಧ್ಯ? ಬಿಜೆಪಿಗೆ ರಾಜಕೀಯ ಲಾಭ ಸಿಗಲಿ ಎಂದು ಇ.ಡಿ. ತನಿಖೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ನೆಪಮಾತ್ರ ತನಿಖೆ; ಪತನದ ಹುನ್ನಾರ
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ, “ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಉನ್ನತ ಮಟ್ಟದವರ ಹೆಸರು ಹೇಳಬೇಕು, ಇ.ಡಿ. ಸಾಮರ್ಥ್ಯ ನಿಮಗೆ ಗೊತ್ತಿಲ್ಲ. ನಾವು ಹೇಳಿದಂತೆ ಕೇಳಿದರೆ ರಕ್ಷಣೆ ನೀಡುತ್ತೇವೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಇ.ಡಿ.ಗೆ ಹಗರಣದ ತನಿಖೆ ನೆಪಮಾತ್ರವಾಗಿದ್ದು, ರಾಜ್ಯದ ಕಾಂಗ್ರೆಸ್‌ ಸರಕಾರವನ್ನು ಪತನಗೊಳಿಸುವ ಉದ್ದೇಶ ಇದರ ಹಿಂದಿದೆ’ ಎಂದು ಆರೋಪಿಸಿದರು.

“ಐಟಿ, ಸಿಬಿಐ ಮತ್ತು ಇ.ಡಿ.ಗಳು ಬಿಜೆಪಿಗೆ ರಾಜಕೀಯ ಅಸ್ತ್ರಗಳಾಗಿವೆ. ಬಿಜೆಪಿ ಇ.ಡಿ.ಯನ್ನು ಬಳಸಿಕೊಂಡು ಹೇಡಿ ರಾಜಕಾರಣ ಮಾಡುತ್ತಿದೆ. ಹಲವು ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳನ್ನು ಪತನಗೊಳಿಸಲು, ಶಾಸಕರ ಪಕ್ಷಾಂತರಕ್ಕೆ ಈ ತನಿಖಾ ಸಂಸ್ಥೆಗಳ ಮೂಲಕ ಭಯ ಹುಟ್ಟಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಇ.ಡಿ. ದಾಳಿ ಶೇ. 400ರಷ್ಟು ಹೆಚ್ಚಾಗಿದ್ದು ಈ ಪೈಕಿ ಶೇ. 95 ದಾಳಿಗಳು ವಿರೋಧ ಪಕ್ಷಗಳ ಮೇಲೆ ನಡೆದಿವೆ ಎಂಬ ಅಂಕಿ-ಅಂಶಗಳಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಪ್ರಿಯಾಂಕ್‌ ಖರ್ಗೆ, “ವಾಲ್ಮೀಕಿ ನಿಗಮ ಹಗರಣದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹೆಸರು ಹೇಳಿ. ಬಳ್ಳಾರಿ, ತೆಲಂಗಾಣ ಚುನಾವಣೆಗೆ ಹಣ ಹೋಗಿದೆ ಎಂದು ಹೇಳುವಂತೆ ತನಿಖೆಯ ವ್ಯಾಪ್ತಿಯಲ್ಲಿರುವವರ ಮೇಲೆ ಒತ್ತಡ ಹಾಕಲಾಗುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿ ದಾಳಿ ನಡೆಸುವುದು ಅದರ ಪ್ರಮಾಣಿತ ಕಾರ್ಯಾಚರಣ ವಿಧಾನ (ಎಸ್‌ಒಪಿ)ವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಆಂಧ್ರಪ್ರದೇಶ, ಗೋವಾ, ಮಣಿಪುರ, ಮಹಾರಾಷ್ಟ್ರ, ಉತ್ತರಾಖಂಡ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್‌, ಅಸ್ಸಾಂ, ನಾಗಾಲ್ಯಾಂಡ್‌, ಸಿಕ್ಕಿಂ, ಮೇಘಾಲಯ ರಾಜ್ಯಗಳಲ್ಲಿ 444 ಶಾಸಕರನ್ನು ಬಿಜೆಪಿ ಖರೀದಿಸಿದೆ. ಇತ್ತ ಯಡಿಯೂರಪ್ಪ, ರೆಡ್ಡಿ ಸಹೋದರರ ಸಹಿತ ಬಿಜೆಪಿ ನಾಯಕರ ಮೇಲೆ ತನಿಖೆ ಸ್ಥಗಿತಗೊಳಿಸಲಾಗಿದೆ’ ಎಂದು ದೂರಿದರು.

“ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಬಹುಮತದಿಂದ ಸರಕಾರ ಬಂದಿದೆ. ಬಹುಶಃ ಸರಕಾರದ ಕಾರ್ಯಕ್ರಮಗಳನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಚುನಾಯಿತ ಸರಕಾರವನ್ನು ಬೀಳಿಸಲು ತನಿಖಾ ಸಂಸ್ಥೆಗಳನ್ನು ಬಳಕೆ ಮಾಡುತ್ತಿದ್ದಾರೆ. ಎಲ್ಲ ಪ್ರಕರಣಗಳಲ್ಲಿ ಇ.ಡಿ. ಅಧಿಕೃತವಾಗಿ ತನಿಖಾ ಪ್ರಕ್ರಿಯೆಯ ಅಂಶಗಳನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ’ ಎಂದು ಸಚಿವ ಕೆ.ಜೆ. ಜಾರ್ಜ್‌ ಪ್ರಶ್ನಿಸಿದರು.

ವಿಪಕ್ಷ ತಿರುಗೇಟು
ಸರಕಾರದ ಈ ಆರೋಪಕ್ಕೆ ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್‌. ಅಶೋಕ್‌, ಮುಖ್ಯ ಸಚೇತಕ ಅರವಿಂದ ಬೆಲ್ಲದ್‌, ಶಾಸಕರಾದ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ವಿ. ಸುನಿಲ್‌ ಕುಮಾರ್‌, ದೊಡ್ಡನಗೌಡ ಪಾಟೀಲ ಮೊದಲಾದವರು, “ಸರಕಾರದ ದೃಷ್ಟಿಯಲ್ಲಿ ಇ.ಡಿ. ತನಿಖೆ ಬೇಕೋ ಬೇಡವೋ ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಆಗ್ರಹಿಸಿದರು.

“ನಿಮ್ಮ ಕೈಯಲ್ಲಿ ಅಧಿಕಾರವಿದ್ದಾಗ ನೀವೂ ಅದರ ದುರ್ಬಳಕೆ ಮಾಡಿದ್ದೀರಿ. ಜನಾರ್ದನ ರೆಡ್ಡಿ, ಯಡಿಯೂರಪ್ಪ ಅವರನ್ನು ಬಂಧಿಸಿರಲಿಲ್ಲವೇ? ಸಿಬಿಐಯವರು ನಿಮ್ಮ ಕಾಲದಲ್ಲಿ ನಾಗೇಂದ್ರ ಅವರನ್ನು ಬಂಧಿಸಿದಾಗ ಮಾತ್ರ ಕಳ್ಳ; ಈಗ ಬಂಧಿಸಿದರೆ ಸತ್ಯಹರಿಶ್ಚಂದ್ರನೇ’ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ತಿರುಗೇಟು ನೀಡಿದರು.

ಸಿದ್ದರಾಮಯ್ಯಗೂ ಹೀಗೆ ಆಗುತ್ತದೆ ಎಂಬ ಭಯವಾ?
ಅರವಿಂದ ಕೇಜ್ರಿವಾಲ್‌ ಹಾಗೂ ಹೇಮಂತ್‌ ಸೊರೇನ್‌ ಅವರಿಗೆ ಆದ ಪರಿಸ್ಥಿತಿಯನ್ನೇ ಇಲ್ಲೂ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊನ್ನಣ್ಣ ಪದೇಪದೆ ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಾ| ಅಶ್ವತ್ಥನಾರಾಯಣ, “ಹಾಗಾದರೆ ದಿಲ್ಲಿಯಲ್ಲಿ ಆದ ಪರಿಸ್ಥಿತಿ ಇಲ್ಲೂ ಆಗುತ್ತದೆ ಎಂಬ ಭಯವೇ? ಸಿದ್ದರಾಮಯ್ಯ ಅವರಿಗೂ ಅದೇ ಪರಿಸ್ಥಿತಿ ಎದುರಾಗುತ್ತದೆ ಎಂಬ ಆತಂಕವೇ?’ ಎಂದು ಕಾಲೆಳೆದರು. ಇದಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಆಕ್ಷೇಪ ವ್ಯಕ್ತಪಡಿಸಿದರು. “ಕುಂಬಳಕಾಯಿ ಕಳ್ಳ ಎಂದರೆ ನೀವ್ಯಾಕೆ ಭಯ ಬೀಳುತ್ತೀರಿ?’ ಎಂದು ಅರವಿಂದ ಬೆಲ್ಲದ್‌ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next