ಮಾಸ್ತಿ: ಜಿಲ್ಲೆಯಲ್ಲಿ ವಾಲ್ಮೀಕಿ ಸಮಾಜದವರು ಹೆಚ್ಚಿರುವ 2ನೇ ತಾಲೂಕು ಮಾಲೂರು. ಕಷ್ಟ ಜೀವಿಗಳು, ನಂಬಿಕೆಗೆ ಅರ್ಹರಾದ ತಾವುಗಳು. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರ ಹಿಂದುಳಿದಿದ್ದು, ಸರ್ಕಾರದ ಸೌಲಭ್ಯ ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಸಲಹೆ ನೀಡಿದರು.
ಹೋಬಳಿಯ ದೊಡ್ಡಇಗ್ಗಲೂರು ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಮಿತಿಯ ಕೆಆರ್‌ಐಡಿಎಲ್ ಯೋಜನೆಯ 10 ಲಕ್ಷ ರೂ.ನಲ್ಲಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟಿಸಿ ಮಾತನಾಡಿದರು. ವಾಲ್ಮೀಕಿ ಮಹರ್ಷಿಗಳು ಸಮಾಜಕ್ಕೆ ರಾಮಾಯಣ ನೀಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ನೀಡಿದ್ದಾರೆ. ಇತಿಹಾಸಕ್ಕೆ ಇವರ ಕೊಡುಗೆ ಅಪಾರವಾದದು ಎಂದು ಹೇಳಿದರು.
313 ಕೋಟಿ ರೂ. ಅನುದಾನ: ವಾಲ್ಮೀಕಿ ನಾಯಕ ಪರಿಷತ್ ರಾಜ್ಯಾಧ್ಯಕ್ಷ ಬಿ.ವಿ.ಬಸವರಾಜ್ ನಾಯಕ್ ಮಾತನಾಡಿ, ಸಮಾಜದಲ್ಲಿ ತೀರ ಹಿಂದುಳಿದಿರುವ ವಾಲ್ಮೀಕಿ ನಾಯಕ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಸಮಿತಿ ಸಚಿವಾಲಯ ಹಾಗೂ ನಿಗಮ ಮಂಡಳಿ ಸ್ಥಾಪಿಸಿ 313 ಕೋಟಿ ರೂ. ಅನುದಾನ ನೀಡಿದೆ ಎಂದು ಹೇಳಿದರು.
26,930 ಕೋಟಿ ರೂ. ನಿಗದಿ: 2011ರ ಜನಗಣತಿಯಂತೆ ಶೇ.21 ಇರುವ ಸಮುದಾಯದ ಅಭಿವೃದ್ಧಿಗೆ ಸರ್ಕಾರ ವಿವಿಧ ಇಲಾಖೆಗಳಿಗೆ ನೀಡುವ ಅನುದಾನವನ್ನು ಪ್ರತಿ ವರ್ಷ ಮಾ.30 ಒಳಗೆ ಖರ್ಚು ಮಾಡಬೇಕಿದೆ. ಪ್ರಸ್ತುತ ಬಜೆಟ್‌ನಲ್ಲಿ ಸಿಎಂ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ 26,930 ಕೋಟಿ ರೂ. ನಿಗದಿ ಪಡಿಸಿದ್ದಾರೆ. ಅದೇ ರೀತಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದವರಿಗೆ 1ಲಕ್ಷ ರೂ. ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ವಸತಿ ಶಾಲೆ ಕೊಡಿ: ವಾಲ್ಮೀಕಿ ನಾಯಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟರಾಂ ಮಾತನಾಡಿ, ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆ ಮಂಜೂರು ಮಾಡಲು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ತಾಲೂಕಿನ ಮಾಸ್ತಿ ಮತ್ತು ದಿನ್ನಹಳ್ಳಿ ಭಾಗದಲ್ಲಿ ಸಮಾಜವರು ಹೆಚ್ಚಾಗಿದ್ದು, ಈ ಭಾಗದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ವಸತಿ ಶಾಲೆ ಅಗತ್ಯವಾಗಿದೆ ಎಂದು ಹೇಳಿದರು.
ರಾಜೇನಹಳ್ಳಿ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಸದಸ್ಯ ಮುನೇಗೌಡ, ಕೆಡಿಪಿ ಮಾಜಿ ಸದಸ್ಯ ಎಂ.ವಿಜಯನರಸಿಂಹ, ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಅಬ್ಬಯ್ಯಪ್ಪ, ವಾಲ್ಮೀಕಿ ನಾಯಕ ಪರಿಷತ್ ತಾಲೂಕು ಅಧ್ಯಕ್ಷ ಟಿ.ಕೆ.ನಾಗರಾಜ್, ಮುಖಂಡ ಅಂಜನಿಸೋಮಣ್ಣ, ಸಮುದಾಯದ ಮುಖಂಡ ಟಿ.ಗುಂಡಪ್ಪ, ನಲ್ಲಾಂಡಹಳ್ಳಿ ನಾಗರಾಜ್, ಪಿಡಿಒ ಸೋಮೇಶ್, ಸಂಪತ್, ಮುನಿಯಪ್ಪ, ಲಕ್ಕಪ್ಪ, ಗಿರಿಯಪ್ಪ, ಶ್ರೀನಿವಾಸ್, ಮಾರ್ಕಂಡಪ್ಪ, ವೆಂಕಟೇಶ್ ಇತರರಿದ್ದರು.