ಚಿಕ್ಕಬಳ್ಳಾಪುರ: ಅವಳಿ ಜಿಲ್ಲೆಗೆ ಹರಿಸುತ್ತಿರುವ ಎಚ್. ಎನ್., ಕೆ.ಸಿ.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದು ಸಮಾಧಾನ ತಂದಿದೆ. ಆದರೆ, ಕುಡಿಯುವ ನೀರಿನಲ್ಲಿ ಯೂರೇನಿಯಂ ಅಂಶವಿದೆ ಎಂದು ವರದಿ ಬಹಿರಂಗಗೊಂಡರೂ, ಪರ್ಯಾಯ ವ್ಯವಸ್ಥೆ ಮಾಡುವುದರಲ್ಲಿ ವಿಫಲವಾಗಿದೆ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್.ಆಂಜನೇಯರೆಡ್ಡಿ ಹೇಳಿದರು.
ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷಗಳಿಂದ ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಹೋರಾಟ ನಡೆಸುತ್ತಿದ್ದರೂ, ಈ ಭಾಗದ ಜನಪ್ರತಿನಿ ಧಿಗಳು ಸರ್ಕಾರದ ಮೇಲೆ ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಗೆ ನೀರಾವರಿ ವಿಚಾರದಲ್ಲಿ ಮೋಸ ಆಗುತ್ತಲೇ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ಪಷ್ಟ ಚಿತ್ರಣ ಗೋಚರಿಸುತ್ತೆ: ಚುನಾವಣಾ ಪೂರ್ವ ಬಜೆಟ್‌ನಲ್ಲಿಯೂ ರಾಜ್ಯ ಬಿಜೆಪಿ ಸರ್ಕಾರ ಜಿಲ್ಲೆಯ ದಶಕಗಳ ಬೇಡಿಕೆ ಆಗಿರುವ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಬಗ್ಗೆ ಯಾವುದೇ ಚಕಾರ ಎತ್ತದೆ, ಬಯಲುಸೀಮೆ ಜಿಲ್ಲೆಗಳನ್ನು ನೀರಾವರಿ ವಿಚಾರದಲ್ಲಿ ನಿರ್ಲಕ್ಷಿಸಿದೆ ಎಂದು ದೂರಿದ ಅವರು, ಜಿಲ್ಲೆಯಲ್ಲಿ ಸಾವಿರಾರು ಕೆರೆ ಕುಂಟೆ ಕಾಲುವೆಗಳಿದ್ದರೂ, ಕನಿಷ್ಠ ಜೀರ್ಣೋದ್ದಾರ ಮಾಡುವ ಕೆಲಸಕ್ಕೆ ಕೈಹಾಕಿಲ್ಲ. ಜಿಲ್ಲೆಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಮಳೆ ಸುರಿದಿದ್ದರಿಂದ ತ್ಯಾಜ್ಯ ನೀರಿನ ಪರಿಣಾಮ ಯಥೇಚ್ಚವಾಗಿ ಬೀರಿಲ್ಲ. ಆದರೂ, ಅದರ ಪ್ರಭಾವ ಹಲವೆಡೆ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಜನರಿಗೆ ಕಾಣುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಶ್ವತ ನೀರಾವರಿ ಬೇಕಿದೆ: ಹೋರಾಟಗಾರರ, ಕೋರ್ಟ್ ತೀರ್ಪಿಗೆ ಹೆದರಿ ಸರ್ಕಾರ, ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಇದರಿಂದ ನಮ್ಮ ಹೋರಾಟಕ್ಕೆ ತುಸು ಜಯ ಸಿಕ್ಕಂತಾಗಿದೆ. ಆದರೂ, ಈ ಭಾಗಕ್ಕೆ ಶಾಶ್ವತ ನೀರಾವರಿ ಅನುಷ್ಠಾನಗೊಳ್ಳಬೇಕಿದೆ. ಎತ್ತಿನಹೊಳೆ ಯೋಜನೆ ಕೇವಲ ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿ ಗಳ ಜೇಬು ತುಂಬುವ ಎಟಿಎಂ ಕೇಂದ್ರವಾಗಿದೆ ಎಂದು ಟೀಕಿಸಿದರು.
ನೀಲನಕ್ಷೆ ಸಿದ್ಧ: ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಕನಿಷ್ಠ ಇಚ್ಛಾಶಕ್ತಿ ಈ ಭಾಗದ ಜನಪ್ರತಿನಿ ಧಿಗಳಿಗಿಲ್ಲ. ಸದ್ಯದಲ್ಲೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಅದಕ್ಕಾಗಿ ನೀಲ ನಕ್ಷೆ ಸಿದ್ಧಪಡಿಸಿದ್ದೇವೆ ಎಂದರು.
ಸುಳ್ಳು ಹೇಳಿ ದಿಕ್ಕುತಪ್ಪಿಸಲು ಸಾಧ್ಯವಿಲ್ಲ: ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಹೋರಾಟ ಮಾಡುವವರ ಕುರಿತು ಲಘುವಾಗಿ ಟೀಕಿಸುವವರಿಗೆ ಮುಂದಿನ ಚುನಾವಣೆಯಲ್ಲಿ ಈ ಭಾಗದ ಜನರೇ ಸೂಕ್ತ ಉತ್ತರ ನೀಡುವ ದಿನಗಳು ದೂರವಿಲ್ಲವೆಂದು ಪರೋಕ್ಷವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ವಾಗ್ಧಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಕಾಮ್ರೇಡ್ ಲಕ್ಷ್ಮಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಬಾಗೇಪಲ್ಲಿ ನಾರಾಯಣಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್, ನೀರಾವರಿ ಹೋರಾಟ ಸಮಿತಿಯ ನಾಗದೇನಹಳ್ಳಿ ನಾರಾಯಣಸ್ವಾಮಿ, ಸುಷ್ಮಾ ಶ್ರೀನಿವಾಸ್, ಉಷಾರೆಡ್ಡಿ, ಪ್ರಭಾ ನಾರಾಯಣಗೌಡ, ಯುವಶಕ್ತಿ ಸಂಘಟನೆಯ ವಿಜಯಭಾವರೆಡ್ಡಿ, ಆನೂರು ದೇವರಾಜ್ ಉಪಸ್ಥಿತರಿದ್ದರು.