Advertisement

ವಲ್ಲಭ ಭಾಯಿ ಪಟೇಲ್‌ ಜನ್ಮದಿನ ಏಕತಾ ಓಟ

10:47 AM Nov 01, 2018 | |

ಉಳ್ಳಾಲ: ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ ಜನ್ಮ ದಿನದ ಅಂಗವಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಬುಧವಾರ ತೊಕ್ಕೊಟ್ಟು ಬಸ್‌ ನಿಲ್ದಾಣದಿಂದ ಉಳ್ಳಾಲದ ವೀರರಾಣಿ ಅಬ್ಬಕ್ಕ ಸರ್ಕಲ್‌ ವರೆಗೆ ಏಕತಾ ಓಟ ಜರಗಿತು. ಹಿರಿಯ ಮುಖಂಡ ರಾಜಾರಾಮ ಭಟ್‌ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ಅವರಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಏಕತಾ ಓಟಕ್ಕೆ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ರಾಜಾರಾಮ ಭಟ್‌ ಅವರು, ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರು ದೇಶ ಕಂಡ ಅಪ್ರತಿಮ ನಾಯಕರಾಗಿದ್ದಾರೆ. ಅಂದಿನ ಕಾಲದಲ್ಲಿ ರಾಷ್ಟ್ರದೆಲ್ಲೆಡೆ ಹರಡಿಕೊಂಡಿದ್ದ ಕೋಮುದ್ವೇಷವನ್ನು ನಿಯಂತ್ರಣಗೊಳಿಸಿದ್ದಲ್ಲದೆ, ಸುಮಾರು 200ಕ್ಕೂ ಹೆಚ್ಚು ಸ್ಥಳೀಯಾಡಳಿತವನ್ನು ಒಟ್ಟುಗೂಡಿಸಿ ಏಕತೆ ಮೂಡಿಸಿದ ನಾಯಕರಾಗಿದ್ದಾರೆ. ಆದರೆ ಇಂತಹ ಮಹಾನ್‌ ನಾಯಕನ ಹೆಸರನ್ನು ಕೆಲವು ಸರಕಾರಗಳು ಅಳಿಸುವಂತಹ ಕೆಲಸ ಮಾಡಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರವು ಸರ್ದಾರ್‌ ವಲ್ಲಭ ಭಾಯಿ ಅವರ ನೆನಪನ್ನು ಮತ್ತು ಅವರ ಕೊಡುಗೆಯನ್ನು ಸ್ಮರಿಸುವಂತಹ ಕಾರ್ಯವನ್ನು ಮಾಡುತ್ತಿದೆ ಎಂದರು.

ಕಾಶ್ಮೀರ ವಿಲೀನಕ್ಕೆ ಪಟೇಲರ ಪಾತ್ರ ಹಿರಿದು
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆಗೊಳಿಸುವಲ್ಲಿ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ ಪಾತ್ರ ಮಹತ್ವ ಪೂರ್ಣವಾದುದು. ಪ್ರಧಾನಿ ನರೇಂದ್ರ ಮೋದಿಯವರು ಪಟೇಲ್‌ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು. ಏಕತಾ ಓಟದ ನೇತೃತ್ವವನ್ನು ವಹಿಸಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್‌ ಕುಮಾರ್‌ ಬೋಳಿಯಾರ್‌ ಅವರು ಮಾತನಾಡಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಕಠಿನ ನಿರ್ಧಾರವು ಇಂದು ನಮ್ಮ ದೇಶವನ್ನು ಅಖಂಡವಾಗಿ ಉಳಿಯುವಂತೆ ಮಾಡಿದೆ ಎಂದರು.

ಇಂತಹ ಮಹಾನ್‌ ಸಾಧಕನ ಬೃಹತ್‌ ಪ್ರತಿಮೆಯು ಕೂಡಾ ಮೋದಿಯವರ ನೇತೃತ್ವದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದರ ಅಂಗವಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ಏಕತಾ ಓಟಕ್ಕೆ ತೊಕ್ಕೊಟ್ಟುವಿನಲ್ಲಿ ಬೆಂಬಲವಾಗಿ ನೂರಾರು ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು. ಬಿಜೆಪಿ ಮುಖಂಡರಾದ ಚಂದ್ರಹಾಸ್‌ ಉಳ್ಳಾಲ್‌, ಚಂದ್ರ ಶೇಖರ್‌ ಉಚ್ಚಿಲ್‌, ಸೀತಾರಾಂ ಬಂಗೇರ, ಮೋಹನ್‌ ರಾಜ್‌, ಮನೋಜ್‌ ಆಚಾರ್ಯ, ಜೀವನ್‌ ತೊಕ್ಕೊಟ್ಟು, ಚಂದ್ರಹಾಸ್‌ ಅಡ್ಯಂತಾಯ, ನವೀನ್‌ ಪಾದಲ್ಪಾಡಿ, ಧನಲಕ್ಷ್ಮೀ  ಗಟ್ಟಿ, ಯಶವಂತ್‌ ಅಮೀನ್‌, ಲಲಿತಾ ಸುಂದರ್‌, ರವಿಶಂಕರ್‌ ಸೋಮೇಶ್ವರ, ಯಶವಂತ ದೇರಾಜೆ, ಹರಿಯಪ್ಪ ಸಾಲ್ಯಾನ್‌, ಹೇಮಂತ್‌ ಶೆಟ್ಟಿ ಉಪಸ್ಥಿತರಿದ್ದರು. ತೊಕ್ಕೊಟ್ಟಿನಿಂದ ಆರಂಭವಾದ ಏಕತಾ ಓಟವು ಉಳ್ಳಾಲದ ರಾಣಿ ಅಬ್ಬಕ್ಕ ಸರ್ಕಲ್‌ವರೆಗೆ ನಡೆಯಿತು. ಬಳಿಕ ರಾಣಿ ಅಬ್ಬಕ್ಕನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next