ಮುಂಬಯಿ: ಜಿಎಸ್‌ಬಿ ಸಮಾಜದ ವಾಲ್ಕೇಶ್ವರ ಬಾಣಗಂಗಾದ ಶ್ರೀ ಕಾಶೀ ಮಠದಲ್ಲಿ ಮೇ 16 ರಂದು ಶ್ರೀ ವ್ಯಾಸ ಜಯಂತಿ, ಮೇ 17 ರಂದು ಶ್ರೀ ನರಸಿಂಹ ಜಯಂತಿ ಹಾಗೂ ಮೇ 18 ರಂದು ವಸಂತ ಪೂರ್ಣಿಮೆ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಕಿವರ ಆಶೀರ್ವಾದ ಹಾಗೂ ಅನುಗ್ರಹದಿಂದ ಜರಗಿದ ಸರ್ವ ಧಾರ್ಮಿಕ ಕಾರ್ಯಕ್ರಮಗಳಿಗೆ ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಮೇ 16 ರಂದು ಶ್ರೀ ವ್ಯಾಸ ಜಯಂತಿಯು ನೈರ್ಮಲ್ಯ ವಿಸರ್ಜನೆಯೊಂದಿಗೆ ಪ್ರಾರಂಭಗೊಂಡಿತು. ಅನಂತರ ವ್ಯಾಸೋಪಾಸನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರಗಿ ಮಧ್ಯಾಹ್ನ 12ಕ್ಕೆ ಮಹಾಪೂಜೆ, ಆರತಿ, ಪ್ರಸಾದ ವಿತರಣೆ, ಸಮಾರಾಧನೆ ನೆರವೇರಿತು.
ಸಂಜೆ 6 ರಿಂದ ದೀಪಾಲಂಕಾರ, ಸಂಜೆ 6.30 ರಿಂದ ಭಜನೆ, ರಾತ್ರಿ 8 ರಿಂದ ವಸಂತ ಪೂಜೆ, ಪ್ರಸಾದ ವಿತರಣೆ ಜರಗಿತು. ಮೇ 17 ರಂದು ಶ್ರೀ ನರಸಿಂಹ ಜಯಂತಿಯಂದು ಬೆಳಗ್ಗೆ 9 ರಿಂದ ವಿವಿಧ ಪೂಜೆ, ವ್ಯಾಸೋಪಾಸನೆ, ಬಳಿಕ ಮುಂಬಯಿಯ ಜಿಎಸ್‌ಬಿ ಸಂಘಟನೆಯ ಸುಮಾರು 12 ತಂಡಗಳಿಂದ ಬೆಳಗ್ಗೆ 10 ರಿಂದ ಮರು ದಿನ ಮೇ 18 ರ ಬೆಳಗ್ಗೆ 10 ರವರೆಗೆ ಏಕಾಹ ಭಜನೆ ಜರಗಿತು.
ಮಧ್ಯಾಹ್ನ 1 ರಿಂದ ಮಹಾ ಪೂಜೆಯ ಬಳಿಕ ಸಮಾರಾಧನೆ ನಡೆಯಿತು. ರಾತ್ರಿ 8 ರಿಂದ ವಸಂತ ಪೂಜೆ, ಬಳಿಕ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. ಮೇ 18 ರಂದು ವಸಂತ ಪೂರ್ಣಿಮೆಯ ದಿನದಂದು ಬೆಳಗ್ಗೆ 9 ರಿಂದ ವಿವಿಧ ಪೂಜೆ, ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ವಿಶೇಷ ಭಜನೆ ಜರಗಿತು. ಬಳಿಕ ಆರತಿ, ಪ್ರಸಾದ ವಿತರಣೆ, ಸಮಾರಾಧನೆ ಜರಗಿತು.
ಸಂಜೆ 6 ರಿಂದ ದೀಪಾಲಂಕಾರ, ರಾತ್ರಿ 8 ರಿಂದ ವಸಂತ ಪೂಜೆ, ಆರತಿ, ಪ್ರಸಾದ ವಿತರಣೆ ಜರಗಿತು. ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಮತ್ತು ವೃಂದದವರಿಂದ ನೆರವೇರಿತು. ಕಾರ್ಯಕ್ರಮದ ಯಶಸ್ಸಿಗೆ ವಾಲ್ಕೇಶ್ವರ ಶ್ರೀ ಕಾಶೀ ಮಠದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ಸರ್ವ ಮುಂಬಯಿ ಜಿಎಸ್‌ಬಿ ಸಂಘಟನೆ ಗಳು, ಕಾರ್ಯಕರ್ತರು, ಸ್ವಯಂ ಸೇವಕರು, ಭಕ್ತರು ಸಹಕರಿಸಿದರು.