ಸ್ನೇಹವು ಪ್ರೀತಿಯಾಚೆ ಸೆಳೆದಾಗ ತುಂಟತನದೊಳಗೊಂದು ಪ್ರೀತಿ, ಕಾಳಜಿ, ಮಮತೆ ಹುಟ್ಟಿ ಆ ಪ್ರೀತಿಯೊಂದಿಗೆ ಹೆಜ್ಜೆ ಹಾಕಿದಾಗ ಬದುಕೇ ಸುಂದರವಾದಂತೆ. ಇಂತಹ ಪ್ರೀತಿಯು ನನ್ನ ಬಾಳಲ್ಲಿ ಅನುರಾಗ ತಂದ ಸಂಗಮಜ್ಯೋತಿ. ಹೀಗೆ ಪ್ರೀತಿಯ ಬಗ್ಗೆ ಬರೆಯುತ್ತಾ ಹೋದರೆ ಪದಪುಂಜಗಳಿಗೆ ಮಿತಿಯೇ ಇರುವುದಿಲ್ಲ. ಅವನನ್ನು ನೆನೆಸಿಕೊಂಡು ಪ್ರೀತಿ ಅಂತ ನಾನು ಬರೆಯಲು ಶುರು ಮಾಡಿದ ಮೇಲೆ ನನಗೆ ತಿಳಿದದ್ದು ಪ್ರೀತಿ ಅನ್ನೋದು ಎಷ್ಟೋ ಪವಿತ್ರವಾದ ಬಂಧನ. ಈ ಬಂಧನಕ್ಕೆ ನಾನು ಭಾವನೆಗಳ ಬಣ್ಣ ಹಚ್ಚುತ್ತಾ ಗೆಳೆಯನಿಗೆ ಪ್ರೀತಿಯಲ್ಲಿ ಪದಪುಂಜಗಳೊಂದಿಗೆ ನನ್ನ ಪ್ರೀತಿಯ ವರ್ಣಿಸುತ್ತಿರುವೆ.
ನನ್ನೆಲ್ಲಾ ಭಾವನೆಗಳಿಗೆ ಬಣ್ಣ ಹಚ್ಚಲು, ಜೀವ ತುಂಬಲು ನೀ ಎಲ್ಲಿರುವೆಯೋ ಗೊತ್ತಿಲ್ಲ. ನಿನ್ನ ಬರುವಿಕೆಗಾಗಿ ನಾನು ಕಾಯುತ್ತಿರುವೆ, ನನ್ನ ಹಾಗೆ ನೀ ನನ್ನ ಬರುವಿಕೆಗೆ ಕಾಯುತ್ತಿರುವೆಯೇನೋ ನನಗೆ ಗೊತ್ತಿಲ್ಲ. ಆದರೆ ಪ್ರೀತಿಯ ಋಣ ಇದ್ರೆ ನೀನು ನನ್ನನ್ನು ಹುಡುಕಿಕೊಂಡು ಬಂದೆ ಬರುವೆ. ಪ್ರೀತಿ ಎಂಬ ತೇರಲ್ಲಿ ನನ್ನನ್ನು ನಿನ್ನ ಹೃದಯದರಸಿ ಮಾಡಿಕೊಂಡು ಹೃದಯವೆಂಬ ಊರಲ್ಲಿ ನನ್ನನ್ನು ಎತ್ತಿಕೊಂಡು ತಿರುಗುವೆ ಅನ್ನೋ ಬಲವಾದಂತಹ ನಂಬಿಕೆ. ಆದರೆ, ನೀ ಬಂದ ಮೇಲೆ ಇನ್ನೆಷ್ಟು ನನ್ನ ಪ್ರೀತಿಯ ಬರಹಗಳ ಸಂಖ್ಯೆ ಹೆಚ್ಚುವುದೋ ಹಾಗೆಯೇ ಆ ಪ್ರೀತಿಯ ಪುಂಜಗಳ ವರದಿಯ ಜನರು ಓದಿ ಅವರು ಪ್ರೀತಿಯಲ್ಲಿ ತೇಲಾಡುವರೋ ಎಂಬುವುದನ್ನು ಕಲ್ಪನೆ ಮಾಡಿದರೆ ನನಗೆ ಹರುಷವೆನಿಸುತ್ತದೆ.
ಗೆಳೆಯ ಸುಮ್ಮನೇ ಹೇಗಿರಲಿ, ನಿನ್ನನ್ನೇ, ನೋಡುತ ಕುಳಿತುಕೊಳ್ಳಬೇಕೆಂದು ಈ ಮನ ಸದಾ ಗುನುಗುತ್ತಿದೆ. ನಿನ್ನ ನೋಡುವಾಗಲ್ಲೆಲ್ಲಾ, ನೆನಪಾದಗೆಲ್ಲಾ ಅದೇನೋ ಮಳೆಹನಿಯಲ್ಲಿ ನಾ ನೆನೆಯುತ್ತಿರುವಾಗ ನೀ ಬಳಿ ನನ್ನನ್ನು ಬಿಗಿದಪ್ಪಿಕೊಂಡಂತೆ, ನೋಡು ಗೆಳೆಯ ನಿನ್ನ ನೆನಪು ಎಲ್ಲೆಡೆ ಕಾಡುತ್ತೆ ಎಂದು ನಾನು ವಿವರಿಸುವೆ. ನೀ ಈ ಲೇಖನವನ್ನು ಓದಿ ಖುಷಿಪಡುವೆ ಎಂದು ಭಾವಿಸಿ ಗೀಚುವೆ. ಗುಲಾಬಿ ಹೂವನ್ನು ಮುಡಿಗೇರಿಸಿಕೊಳ್ಳುವಾಗ, ಕನ್ನಡಿ ಮುಂದೆ ನಿಂತು ಸೀರೆಯ ನೆರಿಗೆ ಸರಿಮಾಡಿಕೊಳ್ಳುವಾಗ, ಪ್ರೇಮಿಗಳು ಅವರವರ ಜೋಡಿಯೊಂದಿಗೆ ಕೈ ಹಿಡಿದುಕೊಂಡು ನಡೆದಾಗ, ದೇವಸ್ಥಾನದಿ ಕಣ್ಮುಚ್ಚಿ ಧ್ಯಾನಿಸುವಾಗ, ಮಕ್ಕಳೊಂದಿಗೆ ಕಣ್ಣ-ಮುಚ್ಚಾಲೆ ಆಡುವಾಗ ಹೀಗೆ, ಅದೆಷ್ಟೋ ಬಾರಿ ನಿನ್ನ ನೆನೆಸಿಕೊಂಡಾಗ ನನ್ನ ನಿಯತ್ತನ್ನೇ ಕೆಡಿಸಿ ಬಿಡುತ್ತದೆ. ನಿನ್ನ ಪ್ರೇಮ ಪಾಶದಿ ಸಿಹಿಯಾಗಿ ನರಳುವ ಬಡಪಾಯಿ ನಾನು.
ಬರೀ ಫೋಟೋದಲ್ಲಿ ನೋಡುವಾಗ ನನಗೆ ಹತ್ತಿರದಿಂದ ನಿನ್ನ ನೋಡುವ ಸಮಯ ಬಂತು, ನವಿಲಿನ ನರ್ತನದಂತೆ ನಿನ್ನ ಸುಂದರ ನಗು, ಮೊಗವನ್ನು ವರ್ಣಿಸಲು ಸಾವಿರಾರು ಪದಗಳ ಪೋಣಿಸಿ ಬರೆದೆ, ಮತ್ತೆ ಬರೆದೆ, ಇನ್ನು ಬರೆಯುತ್ತಲೇ ಇದ್ದೇನೆ. ಬೆಟ್ಟದಷ್ಟು ಇರುವ ನಿನ್ನ ಪ್ರೀತಿಯನ್ನು ನೆನಪಿಸಿಕೊಳ್ಳುವಾಗ, ಮೆಸೆಜ್ ಮಾಡುವಾಗ, ಫೋನ್ ಕರೆಯಲ್ಲಿ ಮಾತನಾಡಿದಾಗ ಇದನ್ನೆಲ್ಲಾ ನೆನೆಸಿಕೊಂಡು ಪ್ರೀತಿಯ ಬಗ್ಗೆ ಬರೆಯುತ್ತಿರುವಾಗ ನನ್ನ ಲೇಖನಿಯು ಖುಷಿಯಾಗಿ ಕಣ್ಣು ಹೊಡೆದು, “ಇಂಚು… ಯೂ ಆರ್ ವೆರಿ ಲಕ್ಕಿ” ಎನ್ನುತ್ತದೆ. ಸಾವಿರ ಜನುಮ ಇರಲಿ,ಇರದಿರಲಿ ನಿನ್ನ ಪ್ರೀತಿಯ ಮೋಹಕೆ ಸೋತ ಈ ಜನುಮ ಮಾತ್ರ ನಿನಗಾಗಿ ಇರುತ್ತದೆ ನೋಡು.
ಆದರೆ ನೀ ನನ್ನ ಎದೆ ಮೇಲೆ ಮಲಗಿ ನನ್ನ ಕಂಗಳಲ್ಲಿ ನಿನ್ನ ನೋಟ ಬೆರೆಸಿ ಪ್ರೀತಿಸುತ್ತಾ ಇರುವಾಗ ಒಂದಂತೂ ನಿಜ ಕಣೋ ನಿನ್ನ ಮೇಲಿನ ರಸಮಯ ಒಲವಿನ ಪ್ರೀತಿಯಲ್ಲಿ ಮಿಂದು ಮತಿ ಕಳೆದುಕೊಂಡ ಪ್ರೇಮಿಯ ಚಡಪಡಿಕೆ ಈ ನನ್ನ ಹೃದಯ ಭಾವನೆಯ ಪದ ಸಂಗಮ. ಈಗ ನೀನು ಹೇಳು ಗೆಳೆಯ… ಸುಮ್ಮನೆ ನಾ ಹೇಗಿರಲಿ, ನಿನ್ನನೆ ನಾ ನೋಡುತ ಕುಳಿತುಕೊಳ್ಳಲಿ. ಹೀಗೆ ನಿನ್ನ ಫೋಟೋ ನೋಡುತ್ತಾ ನನ್ನ ಕನಸಿನ ಲೋಕದಲ್ಲಿ ತೇಲುತ್ತಿರುವಾಗ ಹನಿ ಹನಿ ಮಳೆ ಬಂದಂತಾಯಿತು. ನೀನು ನಿನ್ನ ನೆನಪು ಮಳೆ ಎಲ್ಲವೂ ಸೇರಿ ನನ್ನನ್ನು ಇನ್ನು ಹುಚ್ಚೆಬ್ಬಿಸುವಂತೆ ಮಾಡುತ್ತಿರಲು ಅದರೊಂದಿಗೆ ಖುಷಿಯಿಂದ ಕುಣಿದು ನಿನ್ನನ್ನೇ ತಬ್ಬಿ ಹಿಡಿದುಕೊಳ್ಳುವ ಬಯಕೆಯಲ್ಲಿ ಹಣೆಗೊಂದು ಮುತ್ತು ನೀಡುವ ಆಸೆಯಲ್ಲಿ ನಿನ್ನ ಬಳಿಗೆ ನಾ ಓಡೋಡಿ ಬರುತಿರಲು, ಮಳೆರಾಯನ ಆರ್ಭಟ ಜೋರಾಗಲು… ನನ್ನನ್ನೇ ನಾ ಮರೆತು ನಿನ್ನ ನೆನಪಲ್ಲೆ ಗೀಚುತ್ತಿರುವಾಗ ನಿದ್ದೆ ಬಂದು ಆ ನಿದ್ದೆಯಲ್ಲೂ ನೀ ಬಂದು ನನ್ನ ಕನಸನ್ನು ಕದಿಯುತ್ತಿರುವಾಗ…..”ಸಾಕು ನಿಲ್ಸೆ ಹೊರಡು ನಿನ್ನ ಗೆಳೆಯ ಕಾಲೇಜಿನಲ್ಲಿ ನಿಂತು ಕಾಯುತ್ತಾ ಇರುತ್ತಾನೆ” ಎಂಬ ನನ್ನ ಗೆಳತಿಯ ಮಾತನ್ನು ಕೇಳಿ ಸವಿಗನಸಿನ ಸಿಹಿ ನಿದ್ದೆಯಿಂದ ಮೆಲ್ಲನೆದ್ದೆ ನಾನು. ನೋಡು ಗೆಳೆಯ ನೀ ಎಲ್ಲೇ ಇದ್ದರೂ ಬಳಿ ಬಂದು ನನ್ನ ಹೃದಯದೊಳಗೆ ಸೇರಿಕೊ ನಿನಗಾಗಿ ಕಾಯುತ್ತಿರುವಳು ಇಂಚು…
ಇಂಚರ ಗೌಡ.
ಆಳ್ವಾಸ್ ಕಾಲೇಜು,
ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ