Advertisement

ಮಳೆ ಕೊಯ್ಲು ಅಳವಡಿಸಿ ಮಾದರಿಯಾದ ವೆಲೆನ್ಸಿಯಾ ಚರ್ಚ್‌

01:22 AM Jul 08, 2019 | mahesh |

ಮಹಾನಗರ: ನೀರಿನ ಸಂರಕ್ಷಣೆಗೆ ಸಂಬಂಧಿಸಿ ಉದಯವಾಣಿ ಹಮ್ಮಿಕೊಂಡು ಮುಂದುವರಿಸುತ್ತಿರುವ ಮಳೆಕೊಯ್ಲು ಅಭಿಯಾನಕ್ಕೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದ್ದು, ಉದಯವಾಣಿಯ ಅಭಿಯಾನದಿಂದ ಪ್ರೇರಣೆ ಪಡೆದು ನಗರದ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್‌ ಚರ್ಚ್‌ನಲ್ಲಿ ಮಂಗಳೂರು ಧರ್ಮ ಪ್ರಾಂತದ ‘ಜಲ ಬಂಧನ್‌’ ಯೋಜನೆಯಲ್ಲಿ ಅಳವಡಿಸಿರುವ ಮಳೆ ಕೊಯ್ಲು ವ್ಯವಸ್ಥೆಯನ್ನು ರವಿವಾರ ಉದ್ಘಾಟಿಸಲಾಯಿತು.

Advertisement

ಚರ್ಚ್‌ನಲ್ಲಿ ಬೆಳಗ್ಗಿನ 8 ಗಂಟೆಯ ಬಲಿ ಪೂಜೆಯ ಬಳಿಕ ಉಪಸ್ಥಿತರಿದ್ದ ಕ್ರೈಸ್ತರ ಸಮಕ್ಷಮ ವಿಧಾನ ಪರಿಷತ್‌ ಸದಸ್ಯ, ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಅವರು ಈ ಮಳೆ ಕೊಯ್ಲು ವ್ಯವಸ್ಥೆಯನ್ನು ಉದ್ಘಾಟಿಸಿದರು.

ವೆಲೆನ್ಸಿಯಾ ಚರ್ಚ್‌ನ ಧರ್ಮಗುರು ವಂ| ಜೇಮ್ಸ್‌ ಡಿ’ಸೋಜಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಹಾಯಕ ಗುರುಗಳಾದ ವಂ| ಜೊಸ್ವಿನ್‌ ಪ್ರವೀಣ್‌ ಡಿ’ಸೋಜಾ, ವಂ| ಅರುಣ್‌ ಲೋಬೋ, ಚರ್ಚ್‌ ಪಾಲನಾ ಮಂಡಳಿಯ ಉಪಾಧ್ಯಕ್ಷ ಅನಿಲ್ ಲೋಬೋ, ಕಾರ್ಯದರ್ಶಿ ಲಿಝಿ ಪಿಂಟೊ, ಮಂಗಳೂರು ಧರ್ಮ ಪ್ರಾಂತದ ವೃಕ್ಷಾ ವಂದನ್‌ ಮತ್ತು ಜಲಬಂಧನ್‌ ಯೋಜನೆಯ ಸಂಯೋಜಕ ಲುವಿ ಜೆ. ಪಿಂಟೊ, ನಿರ್ಮಿತಿ ಕೇಂದ್ರದ ಉಪ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಉದಯವಾಣಿಯ ಡೆಪ್ಯುಟಿ ನ್ಯೂಸ್‌ ಬ್ಯೂರೊ ಚೀಫ್‌ ಸುರೇಶ್‌ ಪುದುವೆಟ್ಟು ಉಪಸ್ಥಿತರಿದ್ದರು. ಕೆಥೋಲಿಕ್‌ ಸಭಾ ಮಂಗಳೂರು ಎಪಿಸ್ಕೋಪಲ್ ಸಿಟಿ ವಲಯದ ಅಧ್ಯಕ್ಷ ಪ್ಯಾಟ್ರಿಕ್‌ ಡಿ’ಸೋಜಾ ನಿರ್ವಹಿಸಿ, ವಂದಿಸಿದರು.

ಚರ್ಚ್‌ ಆವರಣದಲ್ಲಿರುವ ಚರ್ಚ್‌ ಕಟ್ಟಡ, ಸಭಾಂಗಣ ಮತ್ತು ಧರ್ಮಗುರುಗಳ ವಾಸ್ತವ್ಯದ ಮನೆಯ ಛಾವಣಿಯ ಮೇಲೆ ಬೀಳುವ ಮಳೆ ನೀರನ್ನು ಕೊಳವೆಗಳ ಮೂಲಕ ಚರ್ಚ್‌ನ ಬಾವಿಯ ಸಮೀಪ ಇಂಗುವ ಹಾಗೆ ಗುಂಡಿಯನ್ನು ನಿರ್ಮಿಸಿ ಮಳೆಕೊಯ್ಲು ವ್ಯವಸ್ಥೆಯನ್ನು ಮಾಡಲಾಗಿದೆ.

ಚರ್ಚ್‌ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಮಿತಿ ಕೇಂದ್ರದ ಉಪ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮನೆಗಳಲ್ಲಿ ಮತ್ತು ಬಹು ಮಹಡಿ ಕಟ್ಟಡಗಳಲ್ಲಿ ಮಳೆಕೊಯ್ಲು ಅಳವಡಿಸುವ ವಿಧಾನಗಳನ್ನು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು. ಪ್ರಾತ್ಯಕ್ಷಿಕೆಯ ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ರಾಜೇಂದ್ರ ಕಲ್ಬಾವಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

Advertisement

ಒಬ್ಬ ವ್ಯಕ್ತಿಗೆ ದಿನಕ್ಕೆ 25- 30 ಲೀಟರ್‌ ನೀರು ಸಾಕು. ಆದರೆ ನಮ್ಮಲ್ಲಿ ಒಬ್ಬ ವ್ಯಕ್ತಿ ದಿನಕ್ಕೆ 250- 350 ಲೀಟರ್‌ ನೀರನ್ನು ಬಳಸುತ್ತಿದ್ದಾನೆ. ಅಂದರೆ ಸುಮಾರು ಹತ್ತು ಪಟ್ಟು ಹೆಚ್ಚುವರಿ ನೀರು ಬಳಕೆ ಮಾಡಲಾಗುತ್ತಿದೆ. ಮಿಗತೆ ನೀರು ಬಳಕೆಯಾಗಲು, ಮಿತವಾಗಿ ನೀರು ಬಳಸದಿರಲು ನಾವು ಜಲ ಸಾಕ್ಷರರಾಗದಿರುವುದೇ ಕಾರಣ. ಆದ್ದರಿಂದ ನಾವು ವಾಟರ್‌ ಸ್ಮಾರ್ಟ್‌ ಆಗಬೇಕು. ನೀರಿನ ಸಮಸ್ಯೆಯಿಂದ ಮುಕ್ತರಾಗಲು ಇದರಿಂದ ಸಾಧ್ಯವಾಗ ಬಹುದು ಎಂದು ರಾಜೇಂದ್ರ ಕಲ್ಬಾವಿ ಹೇಳಿದರು.

ಮಳೆ ಭೂಮಿಯ ಹಕ್ಕು. ಮಳೆಯ ನೀರು ಭೂಮಿಯಲ್ಲಿ ಇಂಗುವುದು ಪ್ರಕೃತಿ ಸಹಜ ಪ್ರಕ್ರಿಯೆ. ಆದರೆ ಮನುಷ್ಯನ ಹಸ್ತಕ್ಷೇಪದಿಂದಾಗಿ ಭೂಮಿಗೆ ಬೀಳುವ ಮಳೆ ನೀರು ಪೂರ್ತಿಯಾಗಿ ಇಂಗಲು ಅಡ್ಡಿಯಾಗಿದೆ. ಹಾಗಾಗಿ ಮಳೆ ನೀರು ಇಂಗಲು ನಾವು ವ್ಯವಸ್ಥೆ ಮಾಡಿ ಕೊಡುವುದು ಅವಶ್ಯ. ಮಳೆ ಕೊಯ್ಲು ಎನ್ನುವುದು ನೀರು ಇಂಗಿಸುವ ಒಂದು ವಿಧಾನ. ಮಳೆ ಕೊಯ್ಲು ಬಹಳ ಸುಲಭ. ಮನೆ/ ಕಟ್ಟಡದ ಛಾವಣಿಯ ಮೇಲೆ ಬೀಳುವ ಮಳೆಯ ನೀರನ್ನು ಬಾವಿಗೆ ಅಥವಾ ಕೊಳವೆ ಬಾವಿಗೆ ಬಿಡುವ ಮೂಲಕ ಇಲ್ಲವೇ ಮನೆಯ ಆವರಣದಲ್ಲಿ ಇಂಗು ಗುಂಡಿ ನಿರ್ಮಾಣ ಮಾಡುವ ಮೂಲಕ ಮಳೆ ನೀರು ಕೊಯ್ಲು ಮಾಡಬಹುದು ಎಂದರು.

ತೀವ್ರ ನೀರಿನ ಸಮಸ್ಯೆ ಇರುವುದರಿಂದ ನೀರನ್ನು ಹಣದಂತೆ ಖರ್ಚು ಮಾಡುವ ಕಾಲ ಬಂದಿದೆ. ನೀರಿನ ಮಿತ ಬಳಕೆ, ಸಂರಕ್ಷಣೆ ಬಗ್ಗೆ ನಾವು ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ‘ವಾಟರ್‌ ಬಂಕ್‌’ಗಳನ್ನು ತೆರೆಯ ಬೇಕಾಗಿ ಬಂದರೂ ಆಶ್ಚರ್ಯವಿಲ್ಲ. ಎಲ್ಲವನ್ನೂ ಸರಕಾರವೇ ಮಾಡಬೇಕು ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು.

ಉತ್ತಮ ಕಾರ್ಯಕ್ರಮ

ಇದೊಂದು ಉತ್ತಮ ಕಾರ್ಯಕ್ರಮ. ನಮ್ಮ ವಾರ್ಡ್‌ನಲ್ಲಿ ಸಭೆ ನಡೆಸಿ ಮಳೆ ಕೊಯ್ಲು ಬಗ್ಗೆ ಜನರಿಗೆ ಮಾಹಿತಿ ನೀಡಿದ್ದೇವೆ. ಹಲವು ಮಂದಿ ಮಳೆ ಕೊಯ್ಲು ಮಾಡುವ ಬಗ್ಗೆ ಉತ್ಸುಕತೆ ತೋರಿದ್ದಾರೆ.
– ಲಿಝಿ ಪಿಂಟೊ,

ಕಾರ್ಯದರ್ಶಿ, ಪಾಲನಾ ಮಂಡಳಿ, ವೆಲೆನ್ಸಿಯಾ ಚರ್ಚ್‌

ಹಲವರಿಗೆ ಪ್ರೇರಣೆ

ಉದಯವಾಣಿಯ ಮಳೆ ಕೊಯ್ಲು ಅಭಿಯಾನ ಹಲವು ಮಂದಿಗೆ ನೀರು ಸಂರಕ್ಷಣೆ ಬಗ್ಗೆ ಪ್ರೇರಣೆ ನೀಡಿದೆ. ಮಳೆ ಕೊಯ್ಲು ಮಾಡಲು ಸಾಕಷ್ಟು ಮಂದಿ ಮುಂದೆ ಬರುತ್ತಿದ್ದಾರೆ.
– ಅನಿಲ್ ಲೋಬೋ, ಉಪಾಧ್ಯಕ್ಷರು, ಪಾಲನಾ ಮಂಡಳಿ, ವೆಲೆನ್ಸಿಯಾ ಚರ್ಚ್‌.
Advertisement

Udayavani is now on Telegram. Click here to join our channel and stay updated with the latest news.

Next