Advertisement
ಕಾಲೇಜು ಶಿಕ್ಷಣದಿಂದ ಡ್ರಾಪ್ ಔಟ್ ಆಗಿದ್ದ ವಜ್ರಮುನಿಯವರು ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು. ಪ್ರಚಂಡ ರಾವಣ, ಕುರುಕ್ಷೇತ್ರದಂತಹ ನಾಟಕಗಳಲ್ಲಿ ವಜ್ರಮುನಿ ಮಿಂಚುವ ಮೂಲಕ ಜನಪ್ರಿಯತೆ ಪಡೆದಿದ್ದರು. ತಮ್ಮ ಅಪರಿಚಿತ ಗೆಳೆಯನೊಂದಿಗೆ ಅದೃಷ್ಟ ಪರೀಕ್ಷೆಗಾಗಿ ಮಹಾನಗರಿ ಮುಂಬೈಯತ್ತ ಪ್ರಯಾಣ ಬೆಳೆಸಿದ್ದರು. ಇಬ್ಬರೂ ಆಡಿಷನ್ ನೀಡಿದ್ದರೂ, ಅದರಲ್ಲಿ ಆಯ್ಕೆಯಾಗಿದ್ದು ಮಾತ್ರ ವಜ್ರಮುನಿ. ಯಾಕೆಂದರೆ ವಜ್ರಮುನಿ ನೀನಾಸಂ ಹಿನ್ನೆಲೆಯಿಂದ ಬಂದಿರುವುದು ಕಾರಣವಾಗಿತ್ತು. ಆದರೆ ಮುಂಬೈಗೆ ಗುಡ್ ಬೈ ಹೇಳಿ ಅವರು ವಾಪಸ್ ಆಗಿದ್ದರು.
Related Articles
Advertisement
ಅವೆಲ್ಲಕ್ಕಿಂತ ಹೆಚ್ಚಾಗಿ ವಜ್ರಮುನಿ ಅವರು ಖಳನಟನಾಗಬೇಕೆಂದು ಸಿನಿಮಾರಂಗಕ್ಕೆ ಬಂದಿರಲಿಲ್ಲವಾಗಿತ್ತು. ನಾಯಕನಟನಾಗಲು ಬಯಸಿದ್ದ ಅವರನ್ನು ಪ್ರೇಕ್ಷಕ ಇಷ್ಟಪಟ್ಟಿದ್ದು ಮಾತ್ರ ಖಳನಟನಾಗಿ..ಕೊನೆಗೆ ಖಳನಟನ ಪಾತ್ರದಿಂದಲೇ ಜನಾನುರಾಗಿಯಾದರು. ವಜ್ರಮುನಿ ನಟನೆಯ ಬೆಂಕಿ ಉಂಡೆ ಉಗುಳುವ ಕೆಂಪು ಕಣ್ಣು..ಆಕ್ರೋಶ..ಜೊತೆ, ಜೊತೆಗೆ ಕಂಚಿನ ಕಂಠದ ನಗು ಯಾರು ತಾನೇ ಮರೆಯಲು ಸಾಧ್ಯ.
ತೆರೆಮೇಲೆ ಕ್ರೂರಿಯಾಗಿ ಕಾಣುವ, ರೇಪ್ ದೃಶ್ಯಗಳಲ್ಲಿ ಅಟ್ಟಹಾಸ ಮೆರೆಯುವ ವಜ್ರಮುನಿಯವರ ನಟನೆ ಎಂತಹವರಲ್ಲೂ ಕೋಪ ತರಿಸುತ್ತೆ. ಕಠೋರ ಪಾತ್ರಗಳಿಗೆ ಜೀವ ತುಂಬುತ್ತಿದ್ದ ವಜ್ರಮುನಿಯವರು ನಿಜಜೀವನದಲ್ಲಿ ತುಂಬಾ ಮೃದು ಸ್ವಭಾವದ ವ್ಯಕ್ತಿಯಾಗಿದ್ದರಂತೆ. ಅದಕ್ಕೊಂದು ಉದಾಹರಣೆ..ಚಿತ್ರೀಕರಣದ ವೇಳೆ ರೇಪ್ ದೃಶ್ಯಗಳಿದ್ದರೆ ವಜ್ರಮುನಿಯವರು ಮೊದಲು ಆ ಪಾತ್ರ ಮಾಡುವ ನಟಿಯ ಬಳಿ ಕ್ಷಮೆಯಾಚಿಸುತ್ತಿದ್ದರಂತೆ. ನೋಡಮ್ಮ ಇದು ನನ್ನ ವೃತ್ತಿ..ಕರ್ಮ ಏನ್ ಮಾಡೋದು. ದಯವಿಟ್ಟು ತಪ್ಪು ಭಾವಿಸಬೇಡ ಎಂದು ಹೇಳುತ್ತಿದ್ದರಂತೆ.ತನಗೆ ಕೊಟ್ಟ ಪಾತ್ರವನ್ನು ತಾನೇ ಆವಾಹಿಸಿಕೊಂಡು ನಟಿಸುವುದು ವಜ್ರಮುನಿಯವರ ಗುಣವಾಗಿತ್ತು. ಅದಕ್ಕಾಗಿಯೇ ಮೃದು ಸ್ವಭಾವದ ವಜ್ರಮುನಿಯವರು ಖಳನಟನ ಪಾತ್ರಕ್ಕೆ ನ್ಯಾಯ ಒದಗಿಸಲು ಅವರು ಕಠಿಣ ಪರಿಶ್ರಮ ಪಡುತ್ತಿದ್ದರಂತೆ. ಹೀಗೆ ಪಾತ್ರಕ್ಕೆ ಜೀವತುಂಬುತ್ತಲೇ ತಮ್ಮ ಆರೋಗ್ಯ ನಿರ್ಲಕ್ಷಿಸಿಬಿಟ್ಟಿದ್ದರಂತೆ. ಅದರ ಪರಿಣಾಮ 1999ರ ಹೊತ್ತಿಗೆ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದರು. ದೈಹಿಕವಾಗಿ ನಿತ್ರಾಣಕ್ಕೊಳಗಾದ ವಜ್ರಮುನಿಯವರು 2000ನೇ ಇಸವಿ ಹೊತ್ತಿಗೆ ಹಲವು ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು. 2006ರ ಜನವರಿ 5ರಂದು ನಟಭಯಂಕರ ಎನ್ನಿಸಿಕೊಂಡಿದ್ದ ವಜ್ರಮುನಿ ಇಹಲೋಕ ತ್ಯಜಿಸಿದ್ದರು. ಅದ್ಭುತ ನಟ ಕನ್ನಡ ಚಿತ್ರರಂಗಕ್ಕೆ ನೀಡಿದ್ದ ಕೊಡುಗೆಯನ್ನು ಪರಿಗಣಿಸಿ 2006ರಲ್ಲಿ ಜೀವಮಾನದ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಕಂಚಿನ ಕಂಠ, ನಗುವಿನ ಮೂಲಕ ಇಂದಿಗೂ ವಜ್ರಮುನಿ ಕನ್ನಡ ಚಿತ್ರಪ್ರೇಮಿಗಳ ಮನದಲ್ಲಿ ಅಜರಾಮರಾಗಿದ್ದಾರೆ…