ಶಿಮ್ಲಾ(ಹಿಮಾಚಲಪ್ರದೇಶ): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇರುವ ಬೆನ್ನಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ವರದಿಗಳ ಪ್ರಕಾರ, ಬಿಜೆಪಿಯ ಬಂಡಾಯ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆನ್ನಲ್ಲಾಗಿದೆ. ಆದರೆ ಕೃಪಾಲ್ ಪರ್ಮಾರ್ ಪ್ರಧಾನಿ ಮೋದಿ ಅವರ ನಡುವಿನ ದೂರವಾಣಿ ಸಂಭಾಷಣೆ ವೈರಲ್ ಆಗಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಪಣಜಿ: ನ.20 ರಿಂದ ನ.28 ರವರೆಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
ಪರ್ಮಾರ್ ಬಿಜೆಪಿ ಮಾಜಿ ಸಂಸದರಾಗಿದ್ದು, ನವೆಂಬರ್ 12ರಂದು ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಫತೇಹ್ ಪುರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಕಳೆದ ಒಂದು ವರ್ಷದಿಂದ ಪರ್ಮಾರ್ ಬಿಜೆಪಿ ಜತೆಗೆ ಅಸಮಾಧಾನ ಹೊಂದಿರುವುದಾಗಿ ವರದಿ ತಿಳಿಸಿದೆ. ಶಾಲೆಯಲ್ಲಿ ತನ್ನ ಕ್ಲಾಸ್ ಮೇಟ್ ಆಗಿದ್ದ ಹಾಗೂ ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆಪಿ ನಡ್ಡಾ ವಿರುದ್ಧ ಪರ್ಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
ಕಳೆದ 15 ವರ್ಷಗಳಿಂದ ನಡ್ಡಾಜೀ ಅವರು ನನ್ನ ಅವಮಾನಿಸುತ್ತಲೇ ಬಂದಿದ್ದಾರೆ ಎಂದು ಎನ್ ಡಿಟಿವಿ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಮತ್ತೊಂದೆಡೆ ದೂರವಾಣಿ ಸಂಭಾಷಣೆಗೆ ಸಂಬಂಧಿಸಿದಂತೆ ಪರ್ಮಾರ್ ಗೆ ಬಿಜೆಪಿ ಕರೆ ಮಾಡಿದೆಯೋ ಅಥವಾ ಪ್ರಧಾನಿ ಕಚೇರಿಯಿಂದ ಕರೆ ಮಾಡಲಾಗಿದೆಯೋ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ವರದಿ ವಿವರಿಸಿದೆ.
“ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ವಿನಃ, ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುತ್ತಿಲ್ಲ. ಇದು ನನ್ನ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವಿನ ಸ್ಪರ್ಧೆಯಾಗಿದೆ” ಎಂದು ಕೃಪಾಲ್ ಪರ್ಮಾರ್ ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾತ್ರ ಹೋರಾಟ ನಡೆಸುತ್ತಿಲ್ಲ, ಜತೆಗೆ ದೊಡ್ಡ ಪ್ರಮಾಣದ ಬಂಡಾಯ ಶಾಸಕರ ಜತೆ ಗುದ್ದಾಡುವಂತಾಗಿದೆ. ಈ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಪರ್ಮಾರ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆನ್ನಲಾಗಿದೆ.
ದೂರವಾಣಿ ಸಂಭಾಷಣೆಯಲ್ಲಿ, ಜೆಪಿ ನಡ್ಡಾ ನನ್ನ ಹಲವಾರು ವರ್ಷಗಳಿಂದ ಮೂಲೆಗುಂಪು ಮಾಡಿದ್ದಾರೆ ಎಂದು ಅಲವತ್ತುಕೊಂಡಿರುವುದು ದಾಖಲಾಗಿದೆ. ಹೀಗೆ ಹಲವು ವಿಷಯಗಳು ದೂರವಾಣಿ ಸಂಭಾಷಣೆಯಲ್ಲಿದೆ.
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ತನಗೆ ದೂರವಾಣಿ ಕರೆ ಮಾಡಿರುವುದಾಗಿ ಪರ್ಮಾರ್ ತಿಳಿಸಿದ್ದಾರೆ. ನನಗೆ ಪ್ರಧಾನಿ ಮೋದಿ ಅವರು ಕರೆ ಮಾಡಿರುವುದು ಸುಳ್ಳು ಸುದ್ದಿಯಲ್ಲ, ಅಕ್ಟೋಬರ್ 30ರಂದು ನನಗೆ ಕರೆ ಮಾಡಿದ್ದರು. ನಾವಿಬ್ಬರು ಕಳೆದ 25 ವರ್ಷಗಳಿಂದ ಆತ್ಮೀಯರಾಗಿದ್ದೇವೆ. ಅವರು (ಪ್ರಧಾನಿ ಮೋದಿ) ಹಿಮಾಚಲ ಪ್ರದೇಶದ ಉಸ್ತುವಾರಿ ಹೊತ್ತಿಕೊಂಡಿದ್ದ ಸಂದರ್ಭದಲ್ಲಿ ನಾನು (ಪರ್ಮಾರ್) ಉಪಾಧ್ಯಕ್ಷನಾಗಿದ್ದೆ. ನಾವಿಬ್ಬರು ಒಟ್ಟಿಗೆ ಪ್ರಯಾಣಿಸುತ್ತಿದ್ದು, ಒಟ್ಟಿಗೆ ವಾಸ್ತವ್ಯ ಹೂಡುತ್ತಿದ್ದೇವು. ಅವರನ್ನು ನಾನು ದೇವರು ಎಂಬುದಾಗಿ ಪರಿಗಣಿಸುತ್ತೇನೆ ಎಂದು ಪರ್ಮಾರ್ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ 68 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯದಲ್ಲಿ ಸುಮಾರು 30 ಬಂಡಾಯ ಅಭ್ಯರ್ಥಿಗಳು ಅಧಿಕೃತ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆಗಿಳಿದಿರುವುದು ದೊಡ್ಡ ಸವಾಲೊಡ್ಡಿದಂತಾಗಿದೆ ಎಂದು ವರದಿ ಹೇಳಿದೆ.