ಇಸ್ಲಾಮಾಬಾದ್ : ‘2004ರ ಸಂಸತ್ ಚುನಾವಣೆಗಳನ್ನು ಬಿಜೆಪಿ ಸೋಲದಿರುತ್ತಿದ್ದರೆ ಕಾಶ್ಮೀರ ಪ್ರಶ್ನೆ ಇತ್ಯರ್ಥವಾಗುತ್ತಿತ್ತು ಎಂದು ಭಾರತದ ಮಾಜಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನನ್ನಲ್ಲಿ ಹೇಳಿದ್ದರು; ಕಾಶ್ಮೀರ ಪ್ರಶ್ನೆ ಇತ್ಯರ್ಥಕ್ಕೆ ವಾಜಪೇಯಿ ನಿಕಟವಾಗಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ಥಾನ ಪ್ರಾಮಾಣಿಕತೆ ತೋರಿದಲ್ಲಿ ಕಾಶ್ಮೀರ ಸೇರಿದಂತೆ ಯಾವುದೇ ಬಾಕಿ ಉಳಿದಿರುವ ವಿಷಯವನ್ನು ಮಾತುಕತೆಯ ಮೂಲಕವೇ ಬಗೆ ಹರಿಸಲು ಸಾಧ್ಯವಿದೆ ಎಂದು ಇಮ್ರಾನ್ ಪುನರುಚ್ಚರಿಸಿದರು.
ಟಿವಿ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್, “ಕಾಶ್ಮೀರ ಸಮಸ್ಯೆಗೆ ಯುದ್ಧ ಪರಿಹಾರವೇ ಅಲ್ಲ; ಅದನ್ನು ಮಾತುಕತೆಯ ಮೂಲಕವೇ ಇತ್ಯರ್ಥ ಪಡಿಸಲು ಸಾಧ್ಯವಿದೆ’ ಎಂದು ಹೇಳಿದರು.
ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ನಿಮ್ಮ ಬಳಿ ಯಾವ ಸೂತ್ರ ಇದೆ ಎಂಬ ಪ್ರಶ್ನೆಗೆ ಇಮ್ರಾನ್, “ಎರಡು ಅಥವಾ ಮೂರು ಪರಿಹಾರ ಸೂತ್ರಗಳಿವೆ ಮತ್ತು ಇವು ಚರ್ಚೆಯಲ್ಲಿವೆ’ ಎಂದು ಹೇಳಿದರು. ಆದರೆ ಅವುಗಳ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ, ವಿವರ ನೀಡಲು ನಿರಾಕರಿಸಿದರು. “ಈಗಲೇ ಆ ಪರಿಹಾರ ಸೂತ್ರಗಳ ಬಗ್ಗೆ ಮಾತನಾಡುವುದು ಬಹಳ ಬೇಗ ಎನ್ನಿಸೀತು’ ಎಂದು ಸಮಜಾಯಿಷಿಕೆ ನೀಡಿದೆ.
“ವಾಜಪೇಯಿ ಅವರು ಅಂದು ನನ್ನಲ್ಲಿ ಹೇಳಿದ್ದ ಮಾತುಗಳನ್ನು ಆಧರಿಸಿ ಹೇಳುವುದಾದರೆ ಕಾಶ್ಮೀರ ಸಮಸ್ಯೆ ಇತ್ಯರ್ಥ ಪಡಿಸಲು ಭಾರತ – ಪಾಕಿಸ್ಥಾನ ಅಂದಿನ ದಿನಗಳಲ್ಲಿ ಮುಂದಾಗಿದ್ದವು ಎಂದು ಕಾಣುತ್ತದೆ’ ಎಂದು ಇಮ್ರಾನ್ ಹೇಳಿದರು.