Advertisement

“ಬಹುಕೃತ ವೇಷಂ’ನಲ್ಲಿ ವೈಷ್ಣವಿ ಹೊಸ ವೇಷ

10:06 AM Mar 18, 2020 | Lakshmi GovindaRaj |

ಈಗಾಗಲೇ ಕಿರುತೆರೆಯ ಪ್ರೇಕ್ಷಕರಿಗೆ ಅತ್ಯಂತ ಚಿರಪರಿಚಿತವಾಗಿರುವ ನಟಿ ವೈಷ್ಣವಿ ಗೌಡ ಈಗ ನಿಧಾನವಾಗಿ ಹಿರಿತೆರೆಯತ್ತಲೂ ಒಂದು ಚಿತ್ತ ಹರಿಸಿದ್ದಾರೆ. ಕಳೆದ ವರ್ಷ ವೈಷ್ಣವಿ ನಾಯಕಿಯಾಗಿ ನಟಿಸಿದ್ದ ಚೊಚ್ಚಲ ಚಿತ್ರ “ಗಿರ್‌ಗಿಟ್ಲೆ’ ಬಿಡುಗಡೆಯಾಗಿದ್ದು, ಅನೇಕರಿಗೆ ಗೊತ್ತಿರಬಹುದು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಹಿಟ್‌ ಆಗದಿದ್ದರೂ, ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.

Advertisement

ಈ ವರ್ಷ ವೈಷ್ಣವಿ ಸದ್ದಿಲ್ಲದೆ ತಮ್ಮ ಎರಡನೇ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುವ ತಯಾರಿ ನಡೆಸುತ್ತಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಬಹುಕೃತ ವೇಷಂ’. ಈಗಾಗಲೇ “ಗಿರ್‌ಗಿಟ್ಲೆ’ ಚಿತ್ರದ ಮೂಲಕ ಬಿಗ್‌ ಸ್ಕ್ರೀನ್‌ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿರುವ ವೈಷ್ಣವಿ, ಸದ್ಯ ತಮ್ಮ ಎರಡನೇ ಚಿತ್ರ “ಬಹುಕೃತ ವೇಷಂ’ನಲ್ಲಿ ಮತ್ತೂಂದು ವಿಭಿನ್ನ ಪಾತ್ರದ ಮೂಲಕ ತೆರೆಮೇಲೆ ಬರುವ ಯೋಚನೆಯಲ್ಲಿದ್ದಾರೆ.

ಈ ಚಿತ್ರದಲ್ಲಿ ವೈಷ್ಣವಿ ಮಧ್ಯಮ ಕುಟುಂಬ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಕೆಲ ದಿನಗಳ ಕಾಲ ಚಿತ್ರದ ಚಿತ್ರೀಕರಣ ಕೂಡ ನಡೆದಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಈ ವರ್ಷದ ಕೊನೆಯೊಳಗೆ ವೈಷ್ಣವಿ ಗೌಡ “ಬಹುಕೃತ ವೇಷಂ’ ಚಿತ್ರದ ಮೂಲಕ ಸಿನಿ ಪ್ರಿಯರ ಮುಂದೆ ಬರೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.

ತಮ್ಮ ಎರಡನೇ ಚಿತ್ರ “ಬಹುಕೃತ ವೇಷಂ’ ಪಾತ್ರದ ಬಗ್ಗೆ ಮಾತನಾಡುವ ವೈಷ್ಣವಿ ಗೌಡ, “ಇದೊಂದು ಬಹುತೇಕ ಹೊಸಬರ ಟೀಮ್‌ನಲ್ಲಿ ಆಗುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ನಕ್ಷತ್ರಾ ಅಂಥ. ಮಧ್ಯಮ ವರ್ಗದ ಒಳ್ಳೆಯ ಕುಟುಂಬದ ಹುಡುಗಿಯೊಬ್ಬಳ ಜೀವನದಲ್ಲಿ ಬರುವ ಕೆಲವು ತಿರುವುಗಳು, ಕೆಲ ಘಟನೆಗಳು ಆಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಅನ್ನೋದೆ ಸಿನಿಮಾದ ಕಥೆಯ ಒಂದು ಎಳೆ.

ಇಡೀ ಸಿನಿಮಾ ಹುಡುಗಿಯೊಬ್ಬಳ ಸುತ್ತ ಟ್ರಾವೆಲ್‌ ಆಗುತ್ತದೆ. ತುಂಬ ಸ್ಟ್ರಾಂಗ್‌ ಆಗಿ, ಇಂಡಿಪೆಂಡೆಂಟ್‌ ಆಗಿ ಇರುವಂಥ ಹುಡುಗಿಯ ಕ್ಯಾರೆಕ್ಟರ್‌ ಇದರಲ್ಲಿದೆ. ಎಲ್ಲರಿಗೂ ಕನೆಕ್ಟ್ ಆಗುವ ಕ್ಯಾರೆಕ್ಟರ್‌ ನನ್ನದು. ಜೊತೆಗೆ ನನಗೆ ಒಂದು ಫೈಟ್‌ ಕೂಡ ಇದೆ. ಈ ಸಿನಿಮಾದ ಟೀಮ್‌ ಇಷ್ಟವಾಯ್ತು. ನಂತರ ಸ್ಟೋರಿ, ಕ್ಯಾರೆಕ್ಟರ್‌ ಎಲ್ಲವೂ ಇಷ್ಟವಾಯ್ತು…’ ಎನ್ನುತ್ತಾರೆ. ಇನ್ನು “ನನಗೆ ಸೀರಿಯಲ್‌ ಅಥವಾ ಸಿನಿಮಾ ಅಂಥ ಎರಡರ ನಡುವೆ ಅಂಥದ್ದೇನೂ ವ್ಯತ್ಯಾಸವಿಲ್ಲ.

Advertisement

ಎರಡರಲ್ಲೂ ಕೂಡ ನನ್ನ ಕೆಲಸವನ್ನ ನಾನೇ ಮಾಡಬೇಕು. ಏನೇ ಮಾಡಿದ್ರೂ ಪ್ರಾಮಾಣಿಕವಾಗಿ, ಅದಕ್ಕೆ ಕಂಪ್ಲೀಟ್‌ ಎಫ‌ರ್ಟ್‌ ಹಾಕಿ ಮಾಡ್ಬೇಕು. ಇಷ್ಟು ವರ್ಷ ಇಲ್ಲಿದ್ದು ನಾನು ಕಲಿತುಕೊಂಡಿರುವುದು ಇದನ್ನೇ…’ ಎನ್ನುವ ವೈಷ್ಣವಿ ಗೌಡ. “ಸೀರಿಯಲ್‌ ಮತ್ತು ಸಿನಿಮಾ ಎರಡಕ್ಕೂ ಅದರದ್ದೇ ಆದ ಲಿಮಿಟೇಶನ್ಸ್‌ ಮತ್ತು ಇಂಪಾರ್ಟೆನ್ಸ್‌ ಇರುತ್ತದೆ. ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿಕೊಂಡು ಹೋಗಬೇಕಾಗುತ್ತದೆ.

ಆದ್ರೆ ಎರಡೂ ಕೂಡ ಒಬ್ಬಳು ಆರ್ಟಿಸ್ಟ್‌ ಆಗಿ ನನ್ನಿಂದ ಬೆಸ್ಟ್‌ ಪರ್ಪಾರ್ಮೆನ್ಸ್‌ ಬಯಸುತ್ತದೆ. ನಾನು ಕೂಡ ಯಾವಾಗಲೂ ಅದನ್ನ ಕೊಡೋದಕ್ಕೆ ತಯಾರಾಗಿರುತ್ತೇನೆ’ ಎನ್ನುತ್ತಾರೆ. ಒಟ್ಟಾರೆ ಈ ಬಾರಿ “ಬಹುಕೃತ ವೇಷಂ’ ಮೂಲಕ ಹೊಸವೇಷ ತೊಟ್ಟು ಸಿನಿಪ್ರಿಯರ ಮುಂದೆ ಬರುತ್ತಿರುವ ವೈಷ್ಣವಿ ಗೌಡ ಅಭಿಮಾನಿಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು ಈ ವರ್ಷದ ಕೊನೆಯೊಳಗೆ ಗೊತ್ತಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next