ನಾಯಕಿ ವೈಷ್ಣವಿ ಮೆನನ್ ಮತ್ತೆ ಸುದ್ದಿಯಾಗಿದ್ದಾರೆ. ಹಾಗಂತ, ಅವರು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ ಅಂತಂದುಕೊಳ್ಳುವಂತಿಲ್ಲ. “ಪಾದರಸ’ ಬಳಿಕ ವೈಷ್ಣವಿ ಮೆನನ್ ಎಲ್ಲೂ ಸುದ್ದಿಯಾಗಿರಲಿಲ್ಲ. ಅವರೀಗ ಮೆಲ್ಲನೆ “ಸುರ್ ಸುರ್ ಬತ್ತಿ’ ಹಚ್ಚೋಕೆ ರೆಡಿಯಾಗಿದ್ದಾರೆ. ಹೀಗೆಂದರೆ, ಸ್ವಲ್ಪ ಗೊಂದಲವಾಗಬಹುದು. ಇದು ಸಿನಿಮಾ ವಿಷಯ. ಸದ್ದಿಲ್ಲದೆಯೇ ವೈಷ್ಣವಿ ಮೆನನ್ ನಟಿಸಿರುವ “ಸುರ್ ಸುರ್ ಬತ್ತಿ’ ಚಿತ್ರ ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ.
ಈ ಚಿತ್ರಕ್ಕೆ ಮುಗಿಲ್ ನಿರ್ದೇಶಕರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿಯೂ ಇವರದೇ. ವೈಷ್ಣವಿ ಮೆನನ್‌ಗೆ ನಾಯಕರಾಗಿ ಆರವ್ ಕಾಣಿಸಿಕೊಂಡಿದ್ದಾರೆ. ಆರವ್ ಯಾರು ಎಂಬ ಪ್ರಶ್ನೆ ಎದುರಾಗಬಹುದು. “ಚತುಭುಜ’ ಚಿತ್ರ ನೆನಪಿಸಿಕೊಂಡರೆ ಆರವ್ ನೆನಪಾಗುತ್ತಾರೆ. ಅಷ್ಟಕ್ಕೂ ನೆನಪಾಗದಿದ್ದರೆ, ಕಿರುತೆರೆಯ “ಲಾಯರ್ ಗುಂಡಣ್ಣ’ ಧಾರಾವಾಹಿ ನೆನಪಿಸಿಕೊಂಡರೆ ಆರವ್ ಯಾರೆಂಬುದು ಗೊತ್ತಾಗುತ್ತೆ.
ಅದೇ ಆರವ್ “ಸುರ್ ಸುರ್ ಬತ್ತಿ’ ಚಿತ್ರಕ್ಕೆ ಹೀರೋ. ವೈಷ್ಣವಿ ಮೆನನ್‌ಗೆ ಈ ಚಿತ್ರದಲ್ಲೇನು ಪಾತ್ರ ಎಂಬ ಪ್ರಶ್ನೆಗೆ, ಅವರಿಲ್ಲಿ ಸಿಟಿಯಿಂದ ಹಳ್ಳಿಗೆ ಬರುವಂತಹ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬ ಉತ್ತರ ಬರುತ್ತದೆ. ಹಾಗಾದರೆ, ಆರವ್‌ಗೇನು ಕೆಲಸ ಅಂದರೆ, ಅವರು ಹಳ್ಳಿಯಲ್ಲಿರುವ ಒಬ್ಬ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರನ್ನೂ ನಗಿಸಿಕೊಂಡು, ನಗುತ್ತಲೇ ತನ್ನೊಳಗಿನ ಭಾವನೆಗಳನ್ನು ಹಂಚಿಕೊಂಡು ಭಾವುಕರಾಗಿ, ಭಾವುಕರನ್ನಾಗಿಸುವ ಪಾತ್ರದಲ್ಲಿ ನಟಿಸಿದ್ದಾರಂತೆ.
ಇಲ್ಲೊಂದು ವಿಶೇಷ ಪಾತ್ರವಿದೆ. ಅದು ತಾಯಿ ಪಾತ್ರ. ಆ ಪಾತ್ರದಲ್ಲಿ ಹಿರಿಯ ನಟಿ ಊರ್ವಶಿ ಅವರು ಕಾಣಿಸಿಕೊಂಡಿದ್ದಾರೆ. ಇಲ್ಲಿ ತಾಯಿ ಮಗನ ಪ್ರೀತಿ-ವಾತ್ಸಲ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಬಹುತೇಕ ಮನರಂಜನೆ ಅಂಶಗಳಲ್ಲೇ ಚಿತ್ರ ಸಾಗಲಿದೆಯಂತೆ. ಇನ್ನು, ಈ ಚಿತ್ರವನ್ನು ಪಿ.ಎಸ್.ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಿ.ಡಿ.ಕುಮಾರ್ ನಿರ್ಮಿಸಿದ್ದಾರೆ. ಇವರಿಗೆ ಇದು ಮೊದಲ ಚಿತ್ರ.
ಮಿತ್ರರಂಗ ತಂಡದ ಕಲಾವಿದರಾಗಿರುವ ಕುಮಾರ್, ನಿರ್ಮಾಣದ ಜೊತೆಗೆ ಇಲ್ಲೊಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಾಧುಕೋಕಿಲ, ಎನ್.ಕೆ.ಮಠ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಚನ್ನಪಟ್ಟಣ್ಣ, ಬೆಂಗಳೂರು, ಮಡಿಕೇರಿ, ಸುತ್ತಮುತ್ತ ಸುಮಾರು 50 ದಿನಗಳ ಕಾಲ ಚಿತ್ರೀಕರಣವಾಗಿದೆ. ಇನ್ನು, ಈ ಚಿತ್ರಕ್ಕೆ ಪಿ.ಎಸ್.ಚಿನ್ನಪ್ಪ ಮತ್ತು ಟಿ.ವಿ.ಗಿರೀಶ್ ಅವರು ಸಹ ನಿರ್ಮಾಪಕರಾಗಿದ್ದಾರೆ.
ಲೋಕೇಶ್ ಮತ್ತು ಗೌತಮ್ ಶ್ರೀವಾಸ್ತವ್ ಸಂಗೀತವಿದೆ. ಚಿತ್ರದಲ್ಲಿ ಮೂರು ಹಾಡು ಮತ್ತು ಎರಡು ತುಣುಕುಗಳಿವೆ. ನಿರ್ದೇಶಕರಾದ ಅರಸು ಅಂತಾರೆ ಮತ್ತು ವಿಜಯ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಚಂದ್ರಮೋಹನ್ ಮತ್ತು ಚಂದ್ರಕಲಾ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸವಿದೆ. ಎ.ಸಿ.ಮಹೇಂದ್ರನ್ ಛಾಯಾಗ್ರಹಣವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ “ಸುರ್ ಸುರ್ ಬತ್ತಿ’ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.