Advertisement

ವೈಕುಂಠದ ಅಡುಗೆಮನೆ

08:03 PM Jan 03, 2020 | Lakshmi GovindaRaj |

ತಿರುಪತಿ ತಿಮ್ಮಪ್ಪನನ್ನು ಕಣ್ತುಂಬಿಕೊಳ್ಳುವುದೇ ಪೂರ್ವಜನ್ಮದ ಪುಣ್ಯ ಎಂಬ ನಂಬಿಕೆ ಭಕ್ತಕೋಟಿಗಿದೆ. ಹಾಗೆ ಭಕ್ತಿಯಿಂದ ಬಂದ ಅಸಂಖ್ಯ ಭಕ್ತರಿಗೆ, ರಾಜಭೋಜನವನ್ನೇ ಉಣಬಡಿಸಿ, ಕಳುಹಿಸುವುದು ತಿರುಪತಿ ತಿರುಮಲ ದೇವಸ್ಥಾನಂನ (ಟಿಟಿಡಿ) ಹೆಗ್ಗಳಿಕೆ…

Advertisement

ಭಾರತದಲ್ಲಿ ಅತಿಹೆಚ್ಚು ಭಕ್ತರು ಭೇಟಿಕೊಡುವ ದೇಗುಲ ತಿರುಪತಿ. ತಿರುಮಲದ ಬೆಟ್ಟದ ಮೇಲೆ ವಿರಾಜಮಾನನಾಗಿ ನಿಂತ ತಿಮ್ಮಪ್ಪನನ್ನು ನೋಡುವುದೇ ಪೂರ್ವ ಜನ್ಮದ ಪುಣ್ಯವೆಂದು ಭಕ್ತಾದಿಗಳು ಭಾವಿಸುತ್ತಾರೆ. ಹೀಗೆ ಭಕ್ತಿಯಿಂದ ಬಂದವರಿಗೆ, ರಾಜಭೋಜನವನ್ನೇ ಉಣಬಡಿಸಿ ಕಳುಹಿಸುವುದು ತಿಮ್ಮಪ್ಪನ ಕ್ಷೇತ್ರದ ಹೆಗ್ಗಳಿಕೆ.

ಭೂವೈಕುಂಠವೆಂದೇ ಪ್ರಸಿದ್ಧವಾದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸವಿಯುವ ಅನ್ನಕ್ಕೂ ಪ್ರಸಾದದ ಮಹಿಮೆಯಿದೆ. ರಾಜರ ಕಾಲದಿಂದಲೂ ಅನ್ನಪ್ರಸಾದ ನೀಡಲಾಗುತ್ತಿತ್ತು. ಆ ದಿನಗಳಲ್ಲಿ ಸಕ್ಕರೆ ಪೊಂಗಲ್‌, ಪುಳಿಯೊಗರೆ ಹಾಗೂ ಮೊಸರನ್ನ ಕೊಡುತ್ತಿದ್ದುದರ ಬಗ್ಗೆ ಉಲ್ಲೇಖಗಳಿವೆ.

ಕನ್ನಡಿಗನ ಕಾಣಿಕೆ: 1984ರಲ್ಲಿ ಮೊಟ್ಟ ಮೊದಲ ಬಾರಿಗೆ ಇಲ್ಲಿ ಭಕ್ತರಿಗೆ ನಿತ್ಯ ಭೋಜನದ ವ್ಯವಸ್ಥೆಯನ್ನು ಆರಂಭಿಸಲಾಯಿತು. ಅಂದಿನ ಮುಖ್ಯಮಂತ್ರಿ ಎನ್‌.ಟಿ. ರಾಮರಾವ್‌ ಅವರು ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇದೂ ಒಂದು. ಬೆಂಗಳೂರು ಮೂಲದ ಭಕ್ತರೊಬ್ಬರು ಕೊಟ್ಟ 6 ಲಕ್ಷ ರೂ. ಮೂಲ ಹಣದಿಂದ ಪ್ರಾರಂಭವಾದ ಅನ್ನ ದಾಸೋಹ ಇದು ಎನ್ನುವುದು ಕನ್ನಡಿಗರ ಪಾಲಿಗೆ ಹೆಮ್ಮೆ. ಆರಂಭದಲ್ಲಿ 2 ಸಾವಿರ ಮಂದಿಗಷ್ಟೇ ಊಟದ ವ್ಯವಸ್ಥೆ ಇತ್ತು. ಈಗ ಬಹುಮಹಡಿಯ ಸುಸಜ್ಜಿತ ಭೋಜನ ಶಾಲೆಯಲ್ಲಿ ನಿರಂತರ ಅನ್ನಪ್ರಸಾದ ಸೇವೆಯಿದೆ.

ಲಕ್ಷ ಮೀರುವ ಭಕ್ತರು: ಸಾಮಾನ್ಯ ದಿನಗಳಲ್ಲಿ ಸುಮಾರು 1,50,000 ಭಕ್ತರು ಇಲ್ಲಿ ಭರ್ಜರಿ ಎನ್ನುವಂಥ ಭೋಜನ ಪ್ರಸಾದ ಸವಿಯುತ್ತಾರೆ. ಬ್ರಹ್ಮೋತ್ಸವದ ದಿನಗಳಲ್ಲಿ ಕೇಳಬೇಕೇ? ಸುಮಾರು 10 ಲಕ್ಷ ಮೀರಿ ಭಕ್ತರು, ಊಟಕ್ಕೆ ಸಾಕ್ಷಿಯಾಗುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರು ಹಸಿದ ಹೊಟ್ಟೆಯಲ್ಲಿ ಹಿಂದಿರುಗಬಾರದು ಎನ್ನುವುದು ಟಿ.ಟಿ.ಡಿ.ಯ ಕಾಳಜಿ.

Advertisement

ಊಟದ ಸಮಯ
– ಬೆಳಗ್ಗೆ 9ರಿಂದ 10.30
– ಮಧ್ಯಾಹ್ನ 11ರಿಂದ ಸಂಜೆ 4
– ಸಂಜೆ 5 ರಿಂದ ರಾತ್ರಿ 10.30

ಭಕ್ಷ್ಯ ಸಮಾಚಾರ
– ಉಪಾಹಾರಕ್ಕೆ ಉಪ್ಪಿಟ್ಟು, ಪೊಂಗಲ್‌, ಶಾವಿಗೆ ಉಪ್ಪಿಟ್ಟು, ಕಾಯಿ ಚಟ್ನಿ.
– ಊಟಕ್ಕೆ ನಿತ್ಯ ಸಕ್ಕರೆ ಪೊಂಗಲ್‌, ಒಂದು ಪಲ್ಯ, ಚಟ್ನಿ, ಅನ್ನ, ತಿಳಿಸಾರು, ಸಾಂಬಾರು ಹಾಗೂ ಮಜ್ಜಿಗೆ.

ಸಾವಧಾನ ಭೋಜನ
– ಗಡಿಬಿಡಿ ಇಲ್ಲದೆ, ಸಾವಕಾಶದ ಭೋಜನಕ್ಕೆ ಆದ್ಯತೆ.
– ಬಾಳೆಎಲೆ ಹಾಗೂ ಮುತ್ತುಗದ ಎಲೆಯಲ್ಲಿ ಊಟ.
– ಅನ್ನ ಹಾಗೂ ತರಕಾರಿ ಬೇಯಿಸಲು 20 ಸ್ಟೀಮ್‌ ಬಾಯ್ಲರ್‌ಗಳ ಬಳಕೆ.
– ಬೂದುಗುಂಬಳ, ಸಿಹಿಕುಂಬಳಕಾಯಿ, ಬೀನ್ಸ್‌, ಸೊಪ್ಪು, ಗೆಡ್ಡೆಕೋಸು, ಟೊಮೇಟೊ- ಹೆಚ್ಚಾಗಿ ಬಳಸಲ್ಪಡುವ ತರಕಾರಿ.

ರಾಶಿ ರಾಶಿ ತರಕಾರಿ: ಭಕ್ತಾದಿಗಳಿಂದ ನಿತ್ಯವೂ ದಾನದ ರೂಪದಲ್ಲಿ ಕ್ವಿಂಟಲ್‌ಗ‌ಟ್ಟಲೆ ತರಕಾರಿ ರಾಶಿಯಾಗಿ ಬೀಳುತ್ತದೆ. ಅಲ್ಲದೆ, ಬೆಂಗಳೂರು, ಕೃಷ್ಣಗಿರಿ ಹಾಗೂ ಚೆನ್ನೈನಿಂದ 2 ಎರ್‌ ಕಂಡಿಷನ್ಡ್ ವಾಹನದಲ್ಲಿ ತರಕಾರಿ ಸರಬರಾಜು ಆಗುತ್ತದೆ. ಒಟ್ಟಾರೆ 7 ಟನ್‌ ತರಕಾರಿ ಇಲ್ಲಿ ನಿತ್ಯ ಅಡುಗೆಗೆ ಅವಶ್ಯ.

ಸಂಖ್ಯಾ ಸೋಜಿಗ
13- ಟನ್‌ ಅಕ್ಕಿ ನಿತ್ಯ ಬಳಕೆ
3- ಟನ್‌ ತೊಗರಿ ಬೇಳೆ
800- ಲೀಟರ್‌ ಅಡುಗೆ ಎಣ್ಣೆ
600- ಸಿಬ್ಬಂದಿಯಿಂದ ಪಾಕಶಾಲೆಗೆ ಸೇವೆ
8000- ಮಂದಿಗೆ ಏಕಕಾಲದಲ್ಲಿ ಭೋಜನ
1,50,000- ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
2,00,000- ಮಂದಿಗೆ ವಾರಾಂತ್ಯದಲ್ಲಿ ಭೋಜನ
30,00,000- ರೂ. ಒಂದು ದಿನದ ಭೋಜನ ವ್ಯವಸ್ಥೆಯ ವೆಚ್ಚ

ನಿಮಗೆ ಗೊತ್ತೇ?
– ದಾನಿಗಳು ಕೊಟ್ಟಿರುವ ಸುಮಾರು 591 ಕೋಟಿ ರೂ. ಹಣದ ಬಡ್ಡಿಯ ಹಣದಲ್ಲಿ ನಿತ್ಯದ ಅನ್ನಪ್ರಸಾದ ಛತ್ರದ ನಿರ್ವಹಣೆ.
– ಅನ್ನದಾಸೋಹದ ಆರಂಭದಿಂದ ಇಲ್ಲಿಯವರೆಗೆ ಭೋಜನ ಸವಿದ ಭಕ್ತರ ಸಂಖ್ಯೆ 700 ಕೋಟಿಗೂ ಹೆಚ್ಚು.
– ಪ್ರತಿವರ್ಷ ಅನ್ನದಾಸೋಹಕ್ಕೆ ತಗಲುವ ವೆಚ್ಚ ಸುಮಾರು 1000 ಕೋಟಿ ರೂ.
– ಶ್ರೀ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್‌ ಮೂಲಕ ಭೋಜನಶಾಲೆ ನಿರ್ವಹಣೆ.
– ನಿತ್ಯವೂ ದರ್ಶನಕ್ಕೆ ಬರುವ ಭಕ್ತರಿಗೆ ಕೊಡುವ ಹಾಲು 10,000 ಲೀಟರ್‌!

* ಪ್ರಕಾಶ್‌ ಕೆ. ನಾಡಿಗ್‌

Advertisement

Udayavani is now on Telegram. Click here to join our channel and stay updated with the latest news.

Next