Advertisement

ಸುಜಯೀಂದ್ರ ಹಂದೆಗೆ ವೈಕುಂಠ ಯಕ್ಷಸೌರಭ ಪ್ರಶಸ್ತಿ

05:37 PM Jun 20, 2019 | Team Udayavani |

ಡಾ| ಶಿವರಾಮ ಕಾರಂತ ಪ್ರತಿಷ್ಠಾನ (ರಿ.), ಕೋಟ, ಕಾರಂತ ಟ್ರಸ್ಟ್‌ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್‌ ಸಂಯುಕ್ತ ಆಶ್ರಯದಲ್ಲಿ ನೀಡಲ್ಪಡುವ ದಿ. ಕೋಟ ವೈಕುಂಠ ಯಕ್ಷಸೌರಭ ಪುರಸ್ಕಾರಕ್ಕೆ ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ, ಭಾಗವತ ಯಕ್ಷಗಾನ ವಿದ್ವಾಂಸರಾದ ಸುಜಯೀಂದ್ರ ಹಂದೆಯವರು ಆಯ್ಕೆಯಾಗಿದ್ದಾರೆ. ಜೂ.23ರಂದು ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಪ್ರಶಸ್ತಿ ನೀಡಲಾಗುವುದು.

Advertisement

ಸುಜಯೀಂದ್ರ ಹಂದೆಯವರು ಗಂಗೊಳ್ಳಿಯ ಸರಸ್ವತಿ ಜ್ಯೂನಿಯರ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಯಕ್ಷಗಾನ ವೇಷಧಾರಿಗೆ ಹೇಳಿಸಿ ಮಾಡಿಸಿದ ಇವರ ಅಂಗಾಂಗ, ರಂಗದಲ್ಲಿನ ಇವರ ನಿಲುವು, ಶ್ರುತಿಬದ್ಧ ಸ್ವರದಲ್ಲಿ ಅರ್ಥಗಾರಿಕೆಯ ಏರಿಳಿತ, ಪಾತ್ರೋಚಿತ ರಂಗ ಚಲನೆ, ಹೆಜ್ಜೆಗಾರಿಕೆ, ಅಭಿನಯ ಇವುಗಳೆಲ್ಲ ಹಿತಮಿತವಾಗಿದ್ದು, ಕಟ್ಟಿಕೊಳ್ಳುವ ಕಿರೀಟ, ಕೇದಿಗೆ ಮುಂದಲೆ, ಮುಂಡಾಸುಗಳು ಹುಟ್ಟಿಬಂದಂತೆ ತೋರುವ ಇವರ ವೇಷ ಕಾಣುವವರಿಗೆ ದಿ| ಹಾರಾಡಿ ರಾಮ ಗಾಣಿಗರನ್ನು ನೆನಪಿಸುತ್ತದೆ.

ತಂದೆ ಶ್ರೀಧರ ಹಂದೆಯವರಂತೆ ಭಾಗವತ, ಯಕ್ಷಗಾನದ ತಜ್ಞ, ಚಿಂತನಶೀಲ, ಯಕ್ಷಗಾನ ಲೇಖಕ, ರಂಗನಟನಾಗಿದ್ದು ಯಕ್ಷಗಾನದಲ್ಲಿ ಮೇಕಪ್‌ನಿಂದ ಹಿಡಿದು ವೇಷಧಾರಿ, ಭಾಗವತಿಕೆ, ಚಂಡೆ, ಮದ್ದಳೆಯ ಜೊತೆಗೆ ಆಟದ ಮರುದಿನ ಯಕ್ಷಗಾನದ ವಸ್ತ್ರಾಲಂಕಾರದ ಬಟ್ಟೆಗಳನ್ನು ಬಿಸಿಲಿಗೆ ಒಣಗಿಸಿ ಮುಂದಿನ ಕಾರ್ಯಕ್ರಮಕ್ಕೆ ಸಿದ್ದತೆಗೊಳಿಸುವುದರಲ್ಲೂ ನಿಪುಣರು.

ಮಕ್ಕಳ ಮೇಳದಲ್ಲಿ ವೃಷಸೇನ ಪಾತ್ರದ ಮೂಲಕ ರಂಗಪ್ರವೇಶಿಸಿದ ಸುಜಯೀಂದ್ರ ಹಂದೆಯವರಿಗೆ ತಂದೆಯೇ ಪ್ರಥಮ ಗುರು. ನಂತರ ಕೆಲವೊಂದು ಹೆಜ್ಜೆಗಾರಿಕೆಯನ್ನು ಬ್ರಹ್ಮಾವರದ ಕೃಷ್ಣಸ್ವಾಮಿ ಜೋಯಿಸರು ಮತ್ತು ಕೋಟ ಸುದರ್ಶನ ಉರಾಳರಿಂದ ಅಭ್ಯಾಸ ಮಾಡಿರುತ್ತಾರೆ.

ಹಂದೆಯವರು ಚಿಟ್ಟಾಣಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಮಳವಳ್ಳಿ ಹಿರಿಯ ನಾಯ್ಕ, ಎಂ.ಎ. ನಾಯ್ಕ, ಕೊಂಡದಕುಳಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ದಿ| ಮಹಾಬಲ ಹೆಗಡೆ, ಐರೋಡಿ ಗೋವಿಂದಪ್ಪ, ಗೋವಿಂದ ಭಟ್‌ ಈ ಮುಂತಾದ ಹಿರಿಯ ಕಲಾವಿದರೊಂದಿಗೆ ವೇಷ ಮಾಡಿ ಸೈ ಎನಿಸಿಕೊಂಡಿದ್ದಾರೆ.

Advertisement

ಇವರ ಸುಧನ್ವ ಪಾತ್ರಕ್ಕೆ ಮೂರು ಬಾರಿ ಜಿಲ್ಲಾ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ. ಸುಧನ್ವ, ಅರ್ಜುನ, ತಾಮ್ರಧ್ವಜ, ಬ್ರಬ್ರುವಾಹನ, ಭೀಷ್ಮ, ಪರಶುರಾಮ, ಕೃಷ್ಣ ಪಾತ್ರಗಳು ದಿ| ಹಾರಾಡಿ ರಾಮ ಗಾಣಿಗರನ್ನು ನೆನಪಿಸುತ್ತವೆ. ಅಪರೂಪಕ್ಕೆ ಕಸೆ ಸ್ತ್ರೀವೇಷ ಮಾಡುವ ಸುಜಯೀಂದ್ರ ಹಂದೆಯವರು ಹೆಚ್ಚಾಗಿ ಎಲ್ಲಾ ಪೌರಾಣಿಕ ಪ್ರಸಂಗದಲ್ಲಿ ವೇಷ ಮಾಡಿದ ಅನುಭವ ಹೊಂದಿದ್ದಾರೆ.

ಮಕ್ಕಳ ಮೇಳದೊಂದಿಗೆ ಡೆಲ್ಲಿ, ಕೋಲ್ಕತ್ತಾ, ಚೆನ್ನೈ, ಮುಂಬಯಿ, ಗುಜರಾತ್‌, ಕೇರಳದಲ್ಲಿ ಕಾರ್ಯಕ್ರಮ ನೀಡಿದ ಇವರು ಬೆಹರಿನ್‌ ಹಾಗೂ ಕುವೈಟ್‌ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಯಕ್ಷಗಾನದಲ್ಲೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.

ಕೋಟ ಸುದರ್ಶನ ಉರಾಳ

Advertisement

Udayavani is now on Telegram. Click here to join our channel and stay updated with the latest news.

Next