ಕಾಳಗಿ: ಸಮೀಪದ ಸುಗೂರ (ಕೆ) ಗ್ರಾಮದ ಎರಡನೇ ತಿರುಪತಿಯಂದೇ ಪ್ರಖ್ಯಾತಿ ಪಡೆದಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಡಿ. 29 ಮತ್ತು ಡಿ. 30 ರಂದು ವೈಕುಂಠ ಏಕಾದಶಿ, ದ್ವಾದಶಿ ಉತ್ಸವ ಹಾಗೂ ಉತ್ತರ ದ್ವಾರ ದರ್ಶನವು ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನ ಪ್ರಧಾನ ಅರ್ಚಕ ಪವಾನದಾಸ ಮಹಾರಾಜ ತಿಳಿಸಿದ್ದಾರೆ.
ಪ್ರತಿ ವರ್ಷವೂ ವೈಕುಂಠ ಏಕಾದಶಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕ್ಷೀರ ಸಾಗರ ಯೋಗ ಮುದ್ರೆಯಲ್ಲಿ ಶೇಷಸಾಯಿ ಮೇಲೆ ಶಯನಿಸಿದ ಶ್ರೀ ಹರಿಯು ಎದ್ದ ದಿನವೇ ಏಕಾದಶಿ. ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಶುಕ್ರವಾರ ಬೆಳಗ್ಗೆ 4 ಗಂಟೆಗೆ ದೇವಸ್ಥಾನದಿಂದ ಪುಷ್ಕರಣಿಯವರೆಗೆ ವೆಂಕಟೇಶ್ವರನ ಮೆರವಣಿಗೆ ನಡೆಯುವುದು. ನಂತರ ಪುಷ್ಕರಣಿಯಿಂದ ತಂದಿರುವ ಜಲದಿಂದ 5ಗಂಟೆಗೆ ವೆಂಕಟೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ ನಡೆಯುವುದು.
ಬೆಳಗ್ಗೆ 6:30ಕ್ಕೆ ಮಹಾಮಂಗಲ ಪೂಜೆ, 7 ಗಂಟೆಗೆ ತುಳಸಿ ಅರ್ಚನೆ ನೆರವೇರುವುದು. 7:30ಗಂಟೆಗೆ ದೇವಸ್ಥಾನದಲ್ಲಿ ವೈಕುಂಠ ದ್ವಾರ ತೆರೆಯಲಾಗುವುದು. ತಿರುಮಲ ತಿರುಪತಿಯ ಅರ್ಜುನದಾಸ ಮಹಾರಾಜ, ಕೃಷ್ಣದಾಸ ಮಹಾರಾಜ ನೇತೃತ್ವದಲ್ಲಿ ಲಕ್ಷ್ಮೀ ಪದ್ಮಾವತಿ ಸಹಸ್ರ ಪೂಜೆ ಹಾಗೂ ಉತ್ತರ ದ್ವಾರ ದರ್ಶನ ನಡೆಯುವುದು. ವೈಕುಂಠ ದ್ವಾರದಲ್ಲಿ ಸುಮಾರು ಏಳು ಪ್ರಕಾರದ 50ಕ್ವಿಂಟಲ್‌ನ ಹೂಗಳಿಂದ ವಿಶೇಷ ಅಲಂಕಾರ ಮಾಡ ಲಾಗುತ್ತದೆ. ನಂತರ ರಾತ್ರಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಂದ ಭಜನೆ-ಕೀರ್ತನೆ ನಡೆಯಲಿವೆ.
ಡಿ.30ರ ದ್ವಾದಶಿ ದಿನದಂದು ಬೆಳಗ್ಗೆ ವೆಂಕಟೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ, ಅರ್ಚನೆ, ಮಂಗಳಾರತಿ
ನಡೆಯುವುದು. ನಂತರ ದೇವಸ್ಥಾನ ಪಕ್ಕದ ಬೆಟ್ಟದ ಮೇಲೆ ಬಿತ್ತದೆ, ಉಳುಮೆ ಮಾಡದೆ ಬೆಳೆದಿರುವ ವಿಸ್ಮಯಕಾರಿ
ಭತ್ತದ ಮಹಾಪ್ರಸಾದ ಮತ್ತು ಲಡ್ಡುಗಳನ್ನು ವಿತರಿಸಲಾಗುವುದು ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ರಾತ್ರಿ 11ಗಂಟೆಗೆ ವೈಕುಂಠ ದ್ವಾರ ಮುಚ್ಚಲಾಗುವುದು. ನಂತರ ಶಯನ ಸೇವೆ ನೆರವೇರುವುದು ಎಂದು ತಿಳಿಸಿದ್ದಾರೆ. ಕೇಶವದಾಸ ಮಹಾರಾಜ, ಬಾಲಕದಾಸ ನಾಗಾಸಾಧು, ಸುಗೂರ ಗ್ರಾಮದ ಮುಖಂಡರು ಇದ್ದರು.