ಉಡುಪಿ ಎಂಜಿಎಂ ಕಾಲೇಜಿನಲ್ಲಿ ಬಹು ವರ್ಷ ಪ್ರಾಧ್ಯಾಪಕರಾಗಿ ನಿವೃತ್ತಿಯಾದ ಬಳಿಕವೂ ಸಹ ಸಂಸ್ಥೆಗಳ ಮೂಲಕ ಹಲವು ವರ್ಷ ನಿಕಟ ಸಂಪರ್ಕ, ಜವಾ ಬ್ದಾರಿಗಳನ್ನು ನಿರ್ವಹಿಸಿದವರು ಪ್ರೊ|ಹೆರಂಜೆ ಕೃಷ್ಣ ಭಟ್.
2000ನೇ ಜು. 31ರಂದು ಎಂದಿನಂತೆ ಪಾಠ ಮಾಡಿ ಮರುದಿನ ಪಾಠಕ್ಕೆ ಬರುವುದಿಲ್ಲವೆಂದೂ ಹೇಳದೆ ನಿವೃತ್ತರಾದ ಭಟ್, ಆ. 1ರಿಂದ ಗೋವಿಂದ ಪೈ ಸಂಶೋಧನ ಕೇಂದ್ರಕ್ಕೆ ಸೇರಿ 2017ರ ಫೆ. 14ರ ವರೆಗೆ ಎಂಜಿಎಂ ಸಮೂಹವನ್ನು ಬೆಳೆಸಿದ್ದ ಪ್ರೊ|ಕು.ಶಿ.ಹರಿದಾಸ ಭಟ್ಟರ ಉತ್ತರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
2009ರಲ್ಲಿ ನಡೆದ ಒಂದು ಘಟನೆ ಉಲ್ಲೇಖನೀಯ. 2009ರ ಜ. 18ರಂದು ಮುಂಬಯಿಯ ಸಾಹಿತಿ ವ್ಯಾಸರಾಜ ಬಲ್ಲಾಳರ ಮಗ ಪ್ರೊ|ಕೃಷ್ಣ ಭಟ್ಟರನ್ನು ಸಮ್ಮಾನಿಸಲು ಮುಂಬಯಿಗೆ ಆಹ್ವಾನಿಸಿದ್ದರು. ಅದೇ ದಿನ ರಾತ್ರಿ ರೈಲಿನಲ್ಲಿ ಉಡುಪಿಗೆ ಹೊರಟರು. ರೈಲ್ವೇ ನಿಲ್ದಾಣದಲ್ಲಿರುವಾಗ ಪುತ್ರ ಡಾ| ಪತಂಜಲಿಯವ ರಿಂದ “ಯಾವಾಗ ಬರುತ್ತೀರಿ’ ಎಂದು ದೂರವಾಣಿ ಕರೆ ಬಂತು.
“ಬೆಳಗ್ಗೆ ಬರುತ್ತೇನೆ’ ಎಂದು ಉತ್ತರಿಸಿದರು. ಬೆಳಗ್ಗೆ ಕೃಷ್ಣ ಭಟ್ಟರು ಮನೆಗೆ ಬಂದರು. ಕೋಣೆಯಲ್ಲಿ ಮಲಗಿದ್ದ ಮಗ ಎದ್ದು ಬಂದಿರಲಿಲ್ಲ. ಸಂಶಯ ಬಂದು ನೋಡಿದಾಗ ಕೋಣೆಯೊಳಗೆ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂತು. ಪೊಲೀಸ್ ಠಾಣೆ, ತಪಶೀಲು, ಅಂತಿಮಸಂಸ್ಕಾರವೆಲ್ಲ ಆಗಬೇ ಕಲ್ಲ? ತೀರಾ ಸನಿಹದವರಿಗೆ ತಿಳಿಸಿದರು. ಅದೇ ದಿನ ಬೆಳಗ್ಗೆ ಗೋವಿಂದ ಪೈ ಸಂಶೋಧನ ಕೇಂದ್ರದ ತ್ತೈಮಾಸಿಕ ಸಭೆ ನಿಗದಿಯಾಗಿತ್ತು. ಟ್ರಸ್ಟ್ ಅಧ್ಯಕ್ಷರಾದ ಟಿ.ಮೋಹನದಾಸ ಪೈ ಅವರಿಗೆ ತಿಳಿಸಿ ಸಭೆಯನ್ನು ರದ್ದುಗೊಳಿಸಿದರು. ಆಗ ಭಟ್ಟರಿಗೆ ಗೋವಿಂದ ಪೈ ಸಂಶೋಧನ ಕೇಂದ್ರವಲ್ಲದೆ ಕಾಲೇಜಿನ ಎಸ್ಟೇಟ್ ಮೆನೇಜರ್, ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಯಕ್ಷಗಾನ ಕೇಂದ್ರದ ಜವಾಬ್ದಾರಿ ಇತ್ತು. ಮೇಲಾಗಿ ಸಾರ್ವಜನಿಕ ವ್ಯಕ್ತಿತ್ವ ಇದ್ದದ್ದರಿಂದ ಮಗನ ಅಂತಿಮ ಸಂಸ್ಕಾರ ನಡೆಸುವಾಗಲೂ ಬೇರೆ ಬೇರೆ ಕಡೆಗಳಿಂದ ಬೇರೆ ಬೇರೆ ಉದ್ದೇಶಗಳಿಗಾಗಿ ದೂರವಾಣಿ ಕರೆ ಬರುತ್ತಲೇ ಇತ್ತು. ಆಗಲೂ ಕರೆಯನ್ನು ಸ್ವೀಕರಿಸಿ ತನ್ನ ಸ್ಥಿತಿಯನ್ನು ಹೇಳದೆ ಕರೆಗಳಿಗೆ ತಕ್ಕಂತೆ ನಿರ್ದೇಶನಗಳನ್ನು ನೀಡುತ್ತಿದ್ದರು. ಅಂತಿಮ ಸಂಸ್ಕಾರ ನಡೆಸಿದ ಬಳಿಕ ಯಥಾಪ್ರಕಾರ ಅಪರಾಹ್ನ 3 ಗಂಟೆಗೆ ಗೋವಿಂದ ಪೈ ಸಂಶೋಧನ ಕೇಂದ್ರಕ್ಕೆ ಬಂದವರು ದೈನಂದಿನ ಸಹಿ ಇತ್ಯಾದಿ ಗಳನ್ನು ನಡೆಸಿ ಮನೆಗೆ ಹಿಂದಿರುಗಿದರು.
ಈ ಘಟನೆಗೆ ನಾಲ್ಕು ದಿನ ಮುನ್ನ ಜ. 14 ರಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಂಸ್ಥೆಯ ರಿಜಿಸ್ಟ್ರಾರ್ ಆಗಿದ್ದ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧ್ಯಕ್ಷ ಕೆ.ಕೆ.ಪೈ ನಿಧನ ಹೊಂದಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಎಂದರೆ ಅಕಾಡೆಮಿ ಸಂಸ್ಥೆಗಳಿಗೆಲ್ಲ ಮುಖ್ಯಸ್ಥರು. ಸಂಶೋಧನ ಕೇಂದ್ರದ ಕಚೇರಿಯಲ್ಲಿ ಕೃಷ್ಣ ಭಟ್ಟರನ್ನು ಮಾತನಾಡಿಸಲು ಬಂದವರಿಗೆ ಒಂದು ಕೈಯಲ್ಲಿ ಕೆ.ಕೆ.ಪೈಯವರ ಮತ್ತು ಇನ್ನೊಂದು ಕೈಯಲ್ಲಿ ಮಗನ ವೈಕುಂಠ ಸಮಾರಾಧನೆಯ ಆಮಂತ್ರಣ ಪತ್ರಿಕೆಯನ್ನು ನಿರ್ಭಾವುಕರಾಗಿ ನೀಡುತ್ತಿದ್ದರು. ಕೇವಲ ಕಚೇರಿಗೆ ಬಂದವರಿಗೆ ಮಾತ್ರ ಈ ತೆರನಾಗಿ ಕೊಟ್ಟದ್ದಲ್ಲ. ಕೆ.ಕೆ.ಪೈ ಅವರ ವೈಕುಂಠ ಸಮಾರಾಧನೆ ಪತ್ರವನ್ನು ಕೆಲವರ ಮನೆಗೆ ಕೊಡಬೇಕಾಗಿತ್ತು. ಅಲ್ಲಿಯೂ ಹೀಗೆ ಎರಡೂ ಪತ್ರಗಳನ್ನು ಕೊಟ್ಟರು.
ಸಮಯಪ್ರಜ್ಞೆ
1984ರಲ್ಲಿ ಎಂಜಿಎಂ ಯಕ್ಷಗಾನ ಕೇಂದ್ರದ ಕಲಾವಿದರು ಭೋಪಾಲಕ್ಕೆ ಯಕ್ಷಗಾನ ಕಾರ್ಯ ಕ್ರಮ ಕೊಡಲು ಹೋಗಿದ್ದರು. ವಾಪಸು ಬರಲು ಡಿ. 2ರಂದು ರೈಲಿನಲ್ಲಿ ಸೀಟು ಖಾತ್ರಿಯಾಗಿರಲಿಲ್ಲ. ಒಂದು ದಿನವಿದ್ದು ಬಳಿಕ ಹೋಗೋಣ ಎಂದು ಬಹುತೇಕರು ಹೇಳಿದರೆ, “ಸೀಟು ಸಿಗದಿದ್ದರೆ ದಾರಿ ಮಧ್ಯೆ ಸಿಗಬಹುದು. ಕೆಲಸವಾದ ಬಳಿಕ ಇರಕೂಡದು ಎಂದು ತಂಡದ ನೇತೃತ್ವ ವಹಿಸಿದ ಪ್ರೊ|ಕೃಷ್ಣ ಭಟ್ಟರು ಹೇಳಿದರು. ರೈಲು ನಿಲ್ದಾಣದಲ್ಲಿ ಕಿಕ್ಕಿರಿದ ಜನ ಸಂದಣಿ ನೋಡಿ ಕಲಾವಿದರೆಲ್ಲರಿಗೂ ಬೇಜಾರು. ವಿಜಯವಾಡ ದಲ್ಲಿ ಬೆಳಗ್ಗೆ ಚಹಾ ಕುಡಿಯುವಾಗ ಕೃಷ್ಣ ಭಟ್ಟರು ಇಂಗ್ಲಿಷ್ ಪತ್ರಿಕೆ ಓದಿ ತಲ್ಲಣಗೊಂಡರು. ಯೂನಿಯನ್ ಕಾರ್ಬೈಡ್ ಸಂಸ್ಥೆಯ ಅನಿಲ ದುರಂತದ ಸುದ್ದಿ ವಿವರಿಸಿದರು. ಅಲ್ಲಿಯ ವರೆಗೆ ಮುನಿಸಿಕೊಂಡವರೆಲ್ಲ ಕೃಷ್ಣ ಭಟ್ಟರಿಗೆ ಕೃತಜ್ಞತೆ ಸಲ್ಲಿಸುವವರೇ. ಏಕೆಂದರೆ ಹಿಂದಿನ ದಿನ ಇವರು ಉಳಿದುಕೊಂಡದ್ದು ಯೂನಿಯನ್ ಕಾರ್ಬೈಡ್ ಸಂಸ್ಥೆ ಅತಿಥಿಗೃಹದಲ್ಲಿ. ರೈಲು ಹೊರಟಾಗ ಭಟ್ಟರು ನಾಪತ್ತೆ. ಕೊನೆಯ ಬೋಗಿ ಮೂಲಕ ಅವರು ಬರುತ್ತಿದ್ದರು. ಪತ್ರಿಕೆ ಓದಿ ಕಚೇರಿಗೆ ದೂರವಾಣಿ ಕರೆಮಾಡಿ ಎಲ್ಲ ಕಲಾವಿದರು ಕ್ಷೇಮದಲ್ಲಿದ್ದಾರೆಂದು ಸಂದೇಶ ಕೊಡಲು ಹೋಗಿದ್ದರು. ಮರುದಿನ ಪತ್ರಿಕೆಗ ಳಲ್ಲಿ “ವಿಷಾನಿಲ ದುರಂತ: ಪಾರಾದ ಯಕ್ಷಗಾನ ಕೇಂದ್ರದ ಕಲಾವಿದರು’ ಎಂಬ ಶಿರೋನಾಮೆಯ ಸುದ್ದಿ ಪ್ರಕಟವಾಯಿತು.
– ಮಟಪಾಡಿ ಕುಮಾರಸ್ವಾಮಿ