Advertisement

ನಯನ ಮನೋಹರ ಮೈದುಂಬಿರುವ ವೈಕುಂಠ ಗಂಗೆ

02:48 PM Nov 08, 2021 | Team Udayavani |

ಮೇಲುಕೋಟೆ: ಪ್ರಖ್ಯಾತ ಶ್ರೀ ವೈಷ್ಣವ ಕ್ಷೇತ್ರವಾದ ಮೇಲುಕೋಟೆ ಹಲವು ಪ್ರಾಕೃತಿಕ ವೈಶಿಷ್ಟ್ಯಕ್ಕೆ ಹೆಸರುವಾಸಿಯಾಗಿದ್ದು, ಅಂತಹ ವಿಶೇಷದಲ್ಲಿ ಕಣಿವೆ ಬಳಿ ಇರುವ “ವೈಕುಂಠ ಗಂಗೆ’ಯೂ ಒಂದು.

Advertisement

ವೈಕುಂಠ ನಾರಾಯಣನ ಪಾದಸ್ಪರ್ಶ: ದಕ್ಷಿಣ ಬದರೀಕಾಶ್ರಮವಾದ ಇಲ್ಲಿನ ಗಿರಿಕಂದರಗಳಿಂದ ಬರುವ ಪರಿಶುದ್ಧವಾದ ಗಿಡಮೂಲಿಕೆಗಳಿಂದ ಕೂಡಿದ ನೀರು “ವೈಕುಂಠ ಗಂಗೆಯ’ ಜೀವಾಳ. ತೊಟ್ಟಿಲಿನ ಮಾದರಿಯ ಹೆಬ್ಬಂಡೆಯ ಮೇಲೆ ಸಾಗುವ ನೀರು ಹಳ್ಳಕ್ಕೆ ರಭಸವಾಗಿ ಧುಮುಕುವ ಕಾರಣ ಸ್ಥಳೀ ಯರ ಬಾಯಲ್ಲಿ ಇದು ತೊಟ್ಟಲಮಡು ಎಂಬ ಹೆಸರಿನಲ್ಲೇ ಜನಜನಿತ ವಾಗಿದೆ.

ಮಳೆಗಾಲದಲ್ಲಿ ಮೈದುಂಬಿ ಹರಿಯುವ ವೈಕುಂಠ ಗಂಗೆಯ ತೀರ್ಥ ಅಲ್ಲೇ ಕಲ್ಲಿನಲ್ಲಿ ಸ್ಥಾಪಿತವಾಗಿರುವ ವೈಕುಂಠ ನಾರಾಯಣನ ಪಾದಸ್ಪರ್ಶ ಮಾಡುತ್ತದೆ. ಉಳಿದ ದಿನಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಕಳೆದ ಒಂದು ವಾರದಿಂದ ಹಲವು ಸಲ ಭಾರೀ ಪ್ರಮಾಣದ ಮಳೆ ಬಂದ ಕಾರಣ ತೊಟ್ಟಿಲಮಡು ಮೈದುಂಬಿ ಹರಿಯುತ್ತಿದ್ದು, ಈಗ ಭೇಟಿ ನೀಡಲು ಸಕಾಲವಾಗಿದೆ. ಸಾಮಾನ್ಯವಾಗಿ ಮೇ-ಜೂನ್‌ ಹಾಗೂ ನವೆಂಬರ್‌ ಮಾಹೆಯಲ್ಲಿ ವೈಕುಂಠಗಂಗೆ ಮೈದುಂಬುತ್ತದೆ.

ನಾರಾಯಣದುರ್ಗ, ಮುದಿಬೆಟ್ಟ, ಮುಂತಾದ ಸುತ್ತ ಇರುವ ಬೆಟ್ಟಗಳ ಮೇಲೆ ಬಿದ್ದ ನೀರು ಹರಿ ಯುತ್ತಾ ಬಂದು ವೈಕುಂಠ ಗಂಗೆ ಸೇರಿ ಸಣ್ಣ ಜಲಪಾತ ಸೃಷ್ಟಿಸಿ ಝರಿಯಂತೆ ವೇಗವಾಗಿ ಧುಮ್ಮಿಕ್ಕಿ ಹರಿದು ಉಲ್ಲಾಸದ ವಾತಾವರಣ ಸೃಷ್ಟಿಸುತ್ತದೆ. ಪಕೃತಿಯ ಸುಂದರ ವಾತಾವರಣದಲ್ಲಿರುವ ವೈಕುಂಠ ಗಂಗೆಯ ಸುತ್ತಮುತ್ತ ರಾಷ್ಟ್ರಪಕ್ಷಿ ನವಿಲು ಹಾಗೂ ಇತರ ಪಕ್ಷಿಗಳ ಕಲರವ ಹಾಗೂ ದರ್ಶನ ಮನಸ್ಸಿಗೆ ಮತ್ತಷ್ಟು ಮುದನೀಡುತ್ತದೆ.

ಹೋಗುವುದು ಹೇಗೆ?: ಮೇಲುಕೋಟೆಯ ಕಣಿವೆಯ ಬಳಿಯಿಂದ ದಕ್ಷಿಣಕ್ಕೆ 500 ಮೀಟರ್‌ ಸಾಗಿದರೆ ಬೃಹತ್‌ ಬಂಡೆಗಳು ಕಾಣಸಿಗುತ್ತದೆ. ಅಲ್ಲಿ ಮೆಟ್ಟಲುಗಳನ್ನು ಇಳಿದರೆ ವೈಕುಂಠ ಗಂಗೆಯ ದರ್ಶನ ಭಾಗ್ಯ ಲಭಿಸುತ್ತದೆ. ಮೊದಲು ಹೊಂಡ ನಂತರ ತೊಟ್ಟಿಲಾಕಾರದ ಬಂಡೆ ಹಾಗೂ ದೊಡ್ಡ ದಾದ ಮಡುನೀರು ಹರಿಯುವ ದೃಶ್ಯ ನಯನ ಮನೋಹರ ಅನುಭವ ನೀಡುತ್ತದೆ. ತೊಟ್ಟಿಲ ಮಡುವಿನ ನೀರು ನಂತರ ಪಕ್ಕದಲ್ಲೇ ಇರುವ ಆಕರ್ಷಕವಾದ ಹೊಸಕೆರೆ ಸೇರುತ್ತದೆ.

Advertisement

ವೈಕುಂಠ ಗಂಗೆಯ ವಿಶೇಷ: ನವೆಂಬರ್‌ ಮಾಹೆಯಲ್ಲಿ ಪ್ರತಿ ವರ್ಷ ಅಷ್ಟ ತೀರ್ಥೋತ್ಸವದಂದು ಸಂಜೆ ಇಲ್ಲಿ ಸಣ್ಣ ಪ್ರಮಾಣದ ಜಾತ್ರೆ ಸೇರುತ್ತದೆ. ಅಂದು ಋಷಿಮುನಿಗಳು ವಾಸವಿದ್ದ ಸ್ಥಳಗಳಲ್ಲಿರುವ ಕೊಳಗಳಲ್ಲಿ ಅಭಿಷೇಕ ನಡೆದ ನಂತರ ಸಂಜೆ ಚೆಲುವನಾರಾಯಣಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರಿಸಲಾಗು ತ್ತದೆ. ಮಕ್ಕಳಾಗದ ದಂಪತಿಗಳು ಹಾಗೂ ಚೆಲುವಾದ ಪುತ್ರಭಾಗ್ಯ ಅಪೇಕ್ಷಿಸುವ ದಂಪತಿಗಳು ಅಷ್ಟ ತೀರ್ಥ ದಂದು ಹರಕೆ ಪೂರೈಸಿ ಇಲ್ಲಿ ಪವಿತ್ರ ಸ್ನಾನ ಮಾಡಿದರೆ ಅಪೇಕ್ಷಿತ ಫಲ ದೊರೆಯುತ್ತದೆ ಎಂಬ ನಂಬಿಕೆ ಬಲವಾಗಿ ಭಕ್ತರಲ್ಲಿ ಬೇರೂರಿದೆ. ಈ ಸಲ ನವೆಂಬರ್‌ 14ರ ಭಾನುವಾರ ಅಷ್ಟತೀರ್ಥೋತ್ಸವ ನಡೆಯಲಿದೆ.

ಕದಂಬ ಪ್ರಸಾದ: ಮೇಲುಕೋಟೆಯ ವಿಶಿಷ್ಠ ಪ್ರಸಾದಗಳಲ್ಲಿ “ಕದಂಬ’ವೂ ಒಂದು. ವಿವಿಧ ಬಗೆಯ ದೇಸೀಯ ತರಕಾರಿಗಳು ವಿಶಿಷ್ಟವಾದ ಪುರಾತನ ಶೈಲಿಯ ಮಸಾಲೆ ಮಿಶ್ರಣ ಹಾಗೂ ಉದ್ದಿನ ವಡೆಯನ್ನು ಹಾಕಿ ಸಾಂಬಾರ್‌ ಮಾಡಿ ಅನ್ನಹಾಕಿ ಕಲೆಸಿ ತಿನ್ನುವ ಸಾಂಪ್ರದಾಯಿಕ ಅಡುಗೆ ಕದಂಬವಾಗಿದೆ. ತೊಟ್ಟಿಲಮಡು ಜಾತ್ರೆಯಂದು ಇಲ್ಲಿ ಕದಂಬ ಮತ್ತು ಮೊಸರನ್ನ ಸವಿಯುವುದೇ ವಿಶೇಷವಾಗಿದೆ.

-ಸೌಮ್ಯ ಜಿ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next