ಮಣಿಪಾಲ: ಮಾಹೆ ವಿ.ವಿ.ಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ “ವೈದೇಹಿ ಜಗತ್ತು’- ಕನ್ನಡದ ಖ್ಯಾತ ಲೇಖಕಿ ವೈದೇಹಿಯವರ ಸಾಹಿತ್ಯದ ಕುರಿತ ವಿಚಾರ ಸಂಕಿರಣ ನ. 11 ಮತ್ತು 12ರಂದು ಮಣಿಪಾಲದ ಪ್ಲಾನಿಟೇರಿಯಂ ಸಭಾಂಗಣದಲ್ಲಿ ನಡೆಯಲಿದೆ.
ವೈದೇಹಿಯವರ ವಿವಿಧ ಸಣ್ಣಕಥೆ, ಕವನ ಮತ್ತು ಕಾದಂಬರಿಗಳ ಮೇಲೆ ಮಾತುಕತೆ, ವಿದ್ಯಾರ್ಥಿಗಳ ವಿಚಾರ ಮಂಡನೆ, ಚಿತ್ರ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೈದೇಹಿಯವರ ಸಾಹಿತ್ಯವನ್ನು ವಿದ್ಯಾರ್ಥಿಗಳತ್ತ ಕೊಂಡೊಯ್ಯುವ ಹಾಗೂ ಸಾಹಿತ್ಯದ ಉದ್ದೇಶ ಅರಿಯುವ ಪ್ರಯತ್ನ ಇದಾಗಿದೆ.
ಗಣಕ ಲಿಪಿ ತಜ್ಞ ಪ್ರೊ| ಕೆ.ಪಿ. ರಾವ್ ಅವರು ನ. 11ರ ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿದ್ದಾರೆ. ಅನಂತರ ವೈದೇಹಿ ಅವರ ಸಣ್ಣ ಕಥೆಗಳ ಕುರಿತು ಪ್ರೊ| ರಾಜೇಂದ್ರ ಚೆನ್ನಿ, ಮಧ್ಯಾಹ್ನ ವೈದೇಹಿ ಕಾವ್ಯದ ಕುರಿತು ಪ್ರೊ| ಆಶಾದೇವಿ ಮಾತನಾಡಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನ. 12ರ ಬೆಳಗ್ಗೆ ಪ್ರೊ| ಎನ್. ಮನು ಚಕ್ರವರ್ತಿ ಅವರು ವೈದೇಹಿ ಅವರ ಕಾದಂಬರಿ – “ಅಸ್ಪೃಶ್ಯರು’ (ಇಂಗ್ಲಿಷ್‌ನಲ್ಲಿ “ವಾಸುದೇವಾಸ್ ಫ್ಯಾಮಿಲಿ’) ಕುರಿತು ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ ವೈದೇಹಿಯವರ ಕಥೆ ಆಧಾರಿತ “ಅಮ್ಮಚ್ಚಿ ಎಂಬ ನೆನಪು’ ಚಲನಚಿತ್ರ ಪ್ರದರ್ಶನ ಮತ್ತು ನಿರ್ದೇಶಕಿ ಚಂಪಾ ಶೆಟ್ಟಿ ಹಾಗೂ ತಂಡದಿಂದ ಸಂವಾದ ನಡೆಯಲಿದೆ. ಸಂಜೆ 4.45ಕ್ಕೆ ಲೇಖಕಿ ವೈದೇಹಿಯವರು ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ. ಅನಂತರ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ಮಾಹೆಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ವಹಿಸಲಿದ್ದಾರೆ. ಕೆಎಸ್‌ಡಿಎಸ್‌ಯುನ ವಿಶ್ರಾಂತ ಕುಲಪತಿ ಪ್ರೊ| ನೀಲಿಮಾ ಸಿನ್ಹಾ ಭಾಗವಹಿಸಲಿದ್ದಾರೆ. ವೈದೇಹಿಯವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ವೈದೇಹಿಯಂತಹ ಪ್ರಮುಖ ಲೇಖಕಿಯ ಬರಹಗಳ ಮೇಲೆ ಬೆಳಕು ಚೆಲ್ಲುವ ಸಲುವಾಗಿ ಹಾಗೂ ಕನ್ನಡೇತರ ಓದುಗರಿಗೆ ಇಂಗ್ಲಿಷ್‌ನಲ್ಲಿ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ| ವರದೇಶ್ ಹಿರೇಗಂಗೆ ತಿಳಿಸಿದ್ದಾರೆ.