“ತಾರಕಾಸುರ’ ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಪರಿಚಯವಾಗಿದ್ದ ನಟ ವೈಭವ್ ಅಭಿನಯದ ಎರಡನೇ ಚಿತ್ರ “ಕೈಲಾಸ’ ಇತ್ತೀಚೆಗೆ ಸರಳವಾಗಿ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿತು. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ನಟ ಧನಂಜಯ್ “ಕೈಲಾಸ’ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಇದೇ ವೇಳೆ ನಟರಾದ ರಾಜವರ್ಧನ್, ವಿಕ್ಕಿ, ನಿರ್ದೇಶಕರಾದ ನಾಗಣ್ಣ, ಅಲೆಮಾರಿ ಸಂತು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ನಿರ್ಮಾಪಕ ರಮೇಶ್ ಯಾದವ್, ಕರಿಸುಬ್ಬು, ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು. ಬದುಕಿನ ಅರ್ಥ ತಿಳಿದುಕೊಳ್ಳದ ಬೇಜಾವಾಬ್ದಾರಿ ಹುಡುಗನೊಬ್ಬ, ಜವಾಬ್ದಾರಿ ಇರುವ ಹುಡುಗಿಯನ್ನು ಪ್ರೀತಿಸಲು ಶುರು ಮಾಡುತ್ತಾನೆ.
ಆಕೆಯ ಮನಸ್ಸನ್ನು ಗೆಲ್ಲಲು ಆ ಹುಡುಗ ಏನೇನು ಮಾಡುತ್ತಾನೆ? ಎಷ್ಟು ಕಷ್ಟ ಪಡುತ್ತಾನೆ? ಎಲ್ಲೆಲ್ಲಿ ಹೋಗುತ್ತಾನೆ. ಅಂತಿಮವಾಗಿ ಅವನ ಶ್ರಮಕ್ಕೆ ಫಲಿತಾಂಶ ಸಿಗುತ್ತದೆಯಾ, ಇಲ್ಲವಾ? ಎಂಬುದು “ಕೈಲಾಸ’ ಚಿತ್ರದ ಕಥೆಯ ಒಂದು ಎಳೆ. ಅದು ಹೇಗೆ ಅನ್ನೋದನ್ನ ತೆರೆಮೇಲೆ ನೋಡಬೇಕು ಎನ್ನುತ್ತದೆ ಚಿತ್ರತಂಡ. ಇನ್ನು “ಕೈಲಾಸ’ ಚಿತ್ರಕ್ಕೆ “ಕಾಸಿದ್ರೆ…’ ಎಂಬ ಅಡಿಬರಹವಿದ್ದು, ಸುಮಾರು ಹನ್ನೆರಡು ವರ್ಷ ಟೆಕ್ಕಿಯಾಗಿ ಕೆಲಸ ಮಾಡಿರುವ ಬಳ್ಳಾರಿ ಮೂಲದ ನಾಗ್ ವೆಂಕಟ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಬೆಂಗಳೂರು, ತೀರ್ಥಹಳ್ಳಿ, ಕೊಡಗು ಸುತ್ತಮುತ್ತ “ಕೈಲಾಸ’ ಚಿತ್ರದ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಚಿತ್ರದಲ್ಲಿ ಬಿಂದಾಸ್ ಹುಡುಗನಾಗಿ ನಾಯಕನ ಪಾತ್ರದಲ್ಲಿ ವೈಭವ್ ಕಾಣಿಸಿ ಕೊಂಡರೆ, ಜವಾಬ್ದಾರಿಯುತ ಹುಡುಗಿ ಪಾತ್ರದಲ್ಲಿ ಮಂಗಳೂರಿನ ರಾಶಿ ಬಾಲಕೃಷ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಸೂರಜ್ ಮತ್ತಿತರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಸುಮಾರು ಇಪ್ಪತೈದು ಪಾತ್ರಗಳು ಬರಲಿದ್ದು, ಖಳನಟನ ಪಾತ್ರಕ್ಕೆ ತೆಲುಗಿನ ಪ್ರಸಿದ್ಧ ನಟರೊಬ್ಬರನ್ನು ಕರೆತರುವ ಯೋಚನೆಯಲ್ಲಿದೆಯಂತೆ ಚಿತ್ರತಂಡ.
ಚಿತ್ರದ ನಾಲ್ಕು ಹಾಡುಗಳಿಗೆ ಆಶಿಕ್ ಅರುಣ್ ಸಂಗೀತ ಸಂಯೋಜಿಸುತ್ತಿದ್ದು, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ತ್ಯಾಗು ಎಂ ಸಂಕಲನವಿದೆ. ಆಂಧ್ರ ಮೂಲದ ಉದ್ಯಮಿ ವಾಸಿಕ್ ಅಲ್‌ಸಾದ್ “ಮಹಮದ್ ಪಿಕ್ಚರ್’ ಬ್ಯಾನರ್ ಅಡಿಯಲ್ಲಿ “ಕೈಲಾಸ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಪ್ಲಾನ್ ಪ್ರಕಾರ ಎಲ್ಲವೂ ನಡೆದರೆ, ಇದೇ ವರ್ಷದ ಕೊನೆಗೆ ತೆರೆಮೇಲೆ “ಕೈಲಾಸ’ ದರ್ಶನ ಮಾಡಿಸುವ ಯೋಚನೆಯಲ್ಲಿದೆ ಚಿತ್ರತಂಡ.