ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಮತ್ತು ಸಾನಿಧ್ಯವೃದ್ಧಿಗಾಗಿ ಹಮ್ಮಿಕೊಂಡಿರುವ ನವದುರ್ಗಾ ಲೇಖನ ಯಜ್ಞದ 99,999 ಪುಸ್ತಕಗಳಿಗೆ ಅ. 29ರಂದು ವಾಗೀಶ್ವರಿ ಪೂಜೆ ನೆರವೇರಿಸಲಾಯಿತು.
ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಕೋಶಾಽಕಾರಿ ಪದ್ಮರಾಜ್ ರಾಮಯ್ಯ, ಲೇಖಕಿ ವೀಣಾ ಬನ್ನಂಜೆ, ಉಷಾ ಆನಂದ ಸುವರ್ಣ, ಪಡುಬಿದ್ರಿ ಪಂಚಕಾಡು ಕೊರಗ ಕುಟುಂಬ ಗುರಿಕಾರ ಬಾಲರಾಜ್ ಕೋಡಿಕಲ್, ಶಿಕ್ಷಣ ತಜ್ಞೆ ಮಾಲಿನಿ ಹೆಬ್ಬಾರ್ ಅವರು ನವದುರ್ಗಾ ಲೇಖನ ಬರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪುಸ್ತಕ ಬಿಡುಗಡೆ ಗೊಳಿಸಿದರು.
99, 999 ಲೇಖನ ಪುಸ್ತಕಕ್ಕೆ ಪೂಜೆ :
ಪ್ರಸ್ತಾವನೆಗೈದ ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯು ಜಂಟಿಯಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ 99,999 ಮಂದಿಯಿಂದ ಪುಸ್ತಕ ಬರೆಸುವ ಸಂಕಲ್ಪವಿದೆ. ರೂ. 199/- ಪಾವತಿಸಿ ನವದುರ್ಗಾ ಲೇಖನ ಬರೆಯಲು ಭಕ್ತರು ಹೆಸರು ನೋಂದಾವಣೆ ಮಾಡಿಕೊಂಡು ಪುಸ್ತಕ ಪಡೆಯಬಹುದು. ಪ್ರಪಂಚದಾದ್ಯಂತ ಇರುವ ಭಕ್ತರಿಂದ ಇದಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗುತ್ತಿದೆ. ನೋಂದಾವಣೆ ಮಾಡಿದ ಭಕ್ತರಿಗೆ ಅ. 29ರಿಂದ ಪುಸ್ತಕ ನೀಡಲಾಗುತ್ತದೆ. ಲೇಖನ ಪುಸ್ತಕ ವಿತರಣೆಯ ಬಳಿಕ 45 ದಿನಗಳ ಒಳಗಾಗಿ ನವದುರ್ಗಾ ಲೇಖನವನ್ನು ಬರೆದು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪುಸ್ತಕವನ್ನು ಮರಳಿಸಬೇಕಿದೆ. 2025ರ ಫೆ. 4ರಂದು ನಡೆಯುವ ನವಚಂಡೀಯಾಗದಲ್ಲಿ ಎಲ್ಲಾ ಪುಸ್ತಕಗಳನ್ನು ಪೂಜೆಗೆ ಇರಿಸಿ, ಲೇಖನ ಬರೆದವರ ಹೆಸರು, ರಾಶಿ, ನಕ್ಷತ್ರವನ್ನು ಸಂಕಲ್ಪಿಸಿ ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ. ಭಕ್ತರು ಬರೆದ ಹಸ್ತಾಕ್ಷರದ ಪುಸ್ತಕ ಸಾನಿಧ್ಯದಲ್ಲಿ ಇರುವುದಲ್ಲದೆ ಪ್ರತೀ ವರ್ಷ ನವರಾತ್ರಿಯ ಒಂದು ದಿನ ಅದಕ್ಕೆ ವಾಗೀಶ್ವರಿ ಪೂಜೆ ನೆರವೇರುತ್ತದೆ ಎಂದು ವಿವರಿಸಿದರು.
ಜೀರ್ಣೋದ್ಧಾರ ಕಾರ್ಯಗಳು ನಡೆದುಬಂದ ದಾರಿಯನ್ನು ವಿವರಿಸಿದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಕಾಪು ಮಾರಿಯಮ್ಮನ ಸನ್ನಿಧಿ ಪವಾಡ ಕ್ಷೇತ್ರವಾಗಿದೆ. ಇಲ್ಲಿ ಎಲ್ಲಾ ಸಮುದಾಯದವರೂ ತಮ್ಮ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ. ಜಾತಿ, ಮತ, ಪಂಥ, ಬಡವ, ಬಲ್ಲಿದರೆಂಬ ಭೇದವಿಲ್ಲದೇ, ರಾಜಕೀಯ ಪರಿಬೇಧಗಳಿಲ್ಲದೇ ಸರ್ವರನ್ನೂ ಜೋಡಿಸಿಕೊಂಡು ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಎಲ್ಲಾ ಕಲ್ಪನೆಗಳಿಗೂ ಅಮ್ಮನೇ ಪ್ರೇರಣೆಯಾಗಿದ್ದಾರೆ. ಇಂತಹ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗುವ ಅವಕಾಶ ನಮಗೆ ದೊರಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಸಮಿತಿ ಕಾರ್ಯಾಧ್ಯಕ್ಷ ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್., ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ರವಿಕಿರಣ್ ಕೆ., ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಕೆ.ಮನೋಹರ ಎಸ್. ಶೆಟ್ಟಿ, ಮಾಧವ ಆರ್. ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಮಲ್ಲಾರು, ಹುಬ್ಬಳ್ಳಿ ಸಮಿತಿಯ ಸುಗ್ಗಿ ಸುಧಾಕರ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ , ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಲೇಖನ ಬರೆಯಲು ವಿವಿಧ ರೀತಿಯಲ್ಲಿ ಅವಕಾಶ : ಈಗಾಗಲೇ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಮಿತಿ ರಚಿಸಲಾಗಿದ್ದು ವಿಧಾನಸಭಾ ಕ್ಷೇತ್ರವಾರು ಸಮಿತಿ, ಉಪ ಸಮಿತಿಗಳನ್ನು ರಚಿಸಿ ಭಕ್ತರ ನೋಂದಾವಣೆಯನ್ನು ಮಾಡಲಾಗುತ್ತಿದೆ. ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗಾ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ ಮತ್ತು ಮುಂಬಯಿಯಲ್ಲಿಯೂ ಸಭೆ ನಡೆಸಿ, ಭಕ್ತರನ್ನು ಜೋಡಿಸಿಕೊಳ್ಳಲಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ ಕನ್ನಡ, ತುಳು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಲೇಖನ ಬರೆಯಲು ಅವಕಾಶ ಮಾಡಿಕೊಡಲಾಗಿದ್ದು ಆನ್ಲೈನ್ ಮತ್ತು ಇ ಬುಕ್ ಮೂಲಕವಾಗಿಯೂ ಲೇಖನ ಬರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.
ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಉಪಾಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್, ಡಾ. ವಿದ್ಯಾ ಶಂಕರ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಕೆ. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ಸುವರ್ಧನ್ ನಾಯಕ್ ಉಪಸ್ಥಿತರಿದ್ದರು.
ನವದುರ್ಗಾ ಲೇಖನ ಸಮಿತಿ ಕಾರ್ಯಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ವಂದಿಸಿದರು. ದಾಮೋದರ ಶರ್ಮಾ ಬಾರ್ಕೂರು ಕಾರ್ಯಗಳ ನಿರೂಪಿಸಿದರು.