ವಡೋದರಾ: ದೇಶದ ವಿವಿಧ ಭಾಗಗಳಲ್ಲಿ ಪರೀಕ್ಷಾ ಅಕ್ರಮಗಳ ಕುರಿತು ಕೇಳಿ ಬರುತ್ತಿದ್ದು, ಕಠಿಣ ಕ್ರಮಗಳು ಎಷ್ಟೇ ಇದ್ದರೂ ಚಾಪೆಯ ಕೆಳಗೆ ತೂರಿದರೆ ಅಕ್ರಮ ಮಾಡುವವರು ರಂಗೋಲಿಯ ಕೆಳಗೆ ತೋರುತ್ತೇವೆ ಎಂದು ತೋರಿಸಿ ಕೊಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ರೈಲ್ವೇ ಪರೀಕ್ಷೆಗೆ ಹಾಜರಾಗಲು ಹೆಬ್ಬೆರಳಿನ ಚರ್ಮ ತೆಗೆದು ಸ್ನೇಹಿತನ ಕೈಗೆ ಅಂಟಿಸಿದ ಖತರ್ನಾಕ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಂಟಿಸಲಾಗಿದ್ದ ಚರ್ಮದ ತುಂಡು ಗುರುವಾರ ಹೊರಬಂದಿದ್ದು, ಬಯೋಮೆಟ್ರಿಕ್ ಪರೀಕ್ಷೆ ವೇಳೆ ವಂಚಿಸುವ ಬೃಹದಾಕಾರದ ಪ್ರಯತ್ನವನ್ನು ಬಯಲುಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವರ್ಗಾವಣೆಗೊಂಡ ಚರ್ಮದ ತುಂಡು ಅಂಟಿಕೊಂಡಿದ್ದರೂ ತಂತ್ರವನ್ನು ಬಯಲಿಗೆಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಹಿರಿಯ ವೈದ್ಯರು ಹೇಳಿದರು.
ವಂಚನೆ ಮತ್ತು ಫೋರ್ಜರಿಗಾಗಿ ವಡೋದರಾ ಪೊಲೀಸರು ಬಿಹಾರದ ಮುಂಗೇರ್ ಜಿಲ್ಲೆಯ ಅಭ್ಯರ್ಥಿ ಮನೀಶ್ ಕುಮಾರ್ ಮತ್ತು ಅವರ ಸ್ನೇಹಿತ ರಾಜ್ಯಗುರು ಗುಪ್ತಾನ ನ್ನು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಎಸ್ ಎಂ ವರೋಟಾರಿಯಾ ತಿಳಿಸಿದ್ದಾರೆ.
ಇಬ್ಬರೂ 20 ರ ಹರೆಯದವರಾಗಿದ್ದು, ಈ ಹಿಂದೆ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು ಎಂದು ಅವರು ಹೇಳಿದರು.