ವಾಡಿ: ಲಾಕ್‌ಡೌನ್ ಘೋಷಣೆಯಿಂದ ತೀವ್ರ ಅರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರು ಖರೀದಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಮಾರುಕಟ್ಟೆಗೆ ಬೀಗ ಬಿದ್ದಿದ್ದು, ರಾಶಿ ರಾಶಿ ಹಣ್ಣುಗಳು ನಗರದ ಗೋದಾಮಿನಲ್ಲೇ ಕೊಳೆಯುತ್ತಿವೆ.
ಉತ್ತಮ ಆದಾಯ ನಿರೀಕ್ಷಿಸಿ ಮಾವು, ಕಲ್ಲಂಗಡಿ, ದ್ರಾಕ್ಷಿ, ಬಾಳೆಹಣ್ಣು ಹೀಗೆ ವಿವಿಧ ರೀತಿಯ ಹಣ್ಣುಗಳನ್ನು ಬೆಳೆದಿರುವ ಚಿತ್ತಾಪುರ ತಾಲೂಕಿನ ರೈತರ ಪಾಲಿಗೆ ಈ ವರ್ಷ ಮಹಾಮಾರಿ ಕೊರೊನಾ ಭಾರಿ ಹೊಡೆತ ನೀಡಿದೆ. ಕಳೆದ ಒಂದು ತಿಂಗಳಿಂದ ಜಾರಿಯಲ್ಲಿರುವ 144 ಸೆಕ್ಷನ್, ಲಾಕ್‌ಡೌನ್ ಮತ್ತು ಸೀಲ್ ಡೌನ್ ಹೊಡೆತಕ್ಕೆ ಸಿಕ್ಕು ಗೃಹ ಬಂಧನಕ್ಕೊಳಗಾಗಿರುವ ಜನರು ಮಾರುಕಟ್ಟೆಗೆ ಬರದಂತಾಗಿದ್ದು, ಹಣ್ಣುಗಳು ಜನರ ಮನೆ ಬಾಗಿಲಿಗೆ ತಲುಪಿಸಲು ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ.
ಬೆಲೆ ಕುಸಿತದ ಮಧ್ಯೆ ಬೆಳೆದ ತೋಟದ ಹಣ್ಣುಗಳನ್ನು ಮಾರುಕಟ್ಟೆಗೆ ಕಳುಹಿಸುತ್ತಿರುವ ರೈತರು, ಬಿರುಬಿಸಿಲಿನಲ್ಲಿ ಕುಳಿತುಕೊಳ್ಳುವ ಗ್ರಾಹಕರಿಗಾಗಿ ಚಾತಕ ಪಕ್ಷಿಯಂತೆ ಕಾಯಬೇಕಾದ ದುಸ್ಥಿತಿ ಎದುರಾಗಿದೆ. ಬಹುತೇಕ ತೋಟಗಳಲ್ಲಿಯೇ ಹಣ್ಣುಗಳು ಮಣ್ಣು ಪಾಲಾಗುತ್ತಿದ್ದರೆ, ಇತ್ತ ನಗರದ ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತಿರುವ ರುಚಿ ಮಾವು, ಬಾಳೆ, ದ್ರಾಕ್ಷಿ ಕೊಳೆತು ಹಾಳಾಗುತ್ತಿವೆ. ಇದರಿಂದ ರೈತರು ಮತ್ತು ವ್ಯಾಪಾರಿಗಳು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಕೊಳೆತ ಮಾವಿನ ಹಣ್ಣು ಹಾಗೂ ಬಾಳೆಹಣ್ಣುಗಳನ್ನು ಸಾಕು ಪ್ರಾಣಿಗಳಿಗೆ ಹಾಕುವಂತಾಗಿದೆ. ಬಹುತೇಕ ಫಲ ತಿಪ್ಪೆಗುಂಡಿ ಸೇರುತ್ತಿರುವುದು ವಿಷಾದದ ವಿಚಾರ. ದಿನಗೂಲಿಗಳೇ ಹೆಚ್ಚಿರುವ ಕಾರ್ಮಿಕ ನಗರಿ ವಾಡಿ ಪಟ್ಟಣದಲ್ಲಿ ಕೇವಲ ಹಣ್ಣುಗಳ ವ್ಯಾಪಾರಿಗಳೇ ಹೆಚ್ಚಾಗಿ ಕಂಡು ಬರುತ್ತಿದ್ದು, ವ್ಯಾಪಾರ ಮಾತ್ರ ಶೂನ್ಯ ಸ್ಥಿತಿಯಲ್ಲಿದೆ. ರೈತ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದಾನೆ.
ರೈತರು ದೊಡ್ಡ ಪ್ರಮಾಣದಲ್ಲಿ ಹಣ್ಣು ಬೆಳೆದಿದ್ದಾರೆ. ಮಾರುಕಟ್ಟೆಗಳಲ್ಲಿ ಖರೀದಿಸುವವರ ಕೊರತೆ ಎದುರಾಗಿದೆ. ಹೀಗಾಗಿ ವ್ಯಾಪಾರವಾಗದೆ ಹಣ್ಣುಗಳು ಗೋದಾಮಿನಲ್ಲಿ ಬಿದ್ದು ಕೊಳೆಯುತ್ತಿವೆ. ಕೊರೊನಾ ನಿಯಂತ್ರಣದ ಹೋರಾಟದಲ್ಲಿ ಎಲ್ಲೆಡೆ ಮಾರುಕಟ್ಟೆಗಳು ಲಾಕ್ ಆಗಿವೆ. ಪರಿಣಾಮ ವ್ಯವಹಾರದಲ್ಲಿ ಕುಸಿತ ಕಂಡಿದೆ. ಖರೀದಿಸಿ ತರಲಾದ ಹಣ್ಣುಗಳು ಬಜಾರಿನಲ್ಲಿ ಬಿಕರಿಯಾಗುತ್ತಿಲ್ಲ. ಇದರಿಂದ ವ್ಯಾಪಾರಿಗಳು ನಷ್ಟದ ಹೊಡೆತಕ್ಕೆ ಸಿಲುಕಿದ್ದಾರೆ.
ಮಹ್ಮದ್ ಗೌಸ್,
ಹಣ್ಣು ವ್ಯಾಪಾರಿ.
ಮಡಿವಾಳಪ್ಪ ಹೇರೂರ