Advertisement

ಕುಲಕುಂದಾಕ್ಕೆ ಕೊಳವೆ ಬಾವಿ ನೀರೇ ಗತಿ!

09:49 AM Jul 12, 2019 | Naveen |

ವಾಡಿ: ಕುಲಕುಂದಾ ಗ್ರಾಮಸ್ಥರ ಪಾಲಿಗೆ ಭೀಮಾ ನದಿ ನೀರು ಗಗನಕುಸುಮವಾಗಿದೆ. ಭೀಮಾನದಿ ದಂಡೆಯಿಂದ ಕೂಗಳತೆ ದೂರಲ್ಲಿರುವ ಗ್ರಾಮಸ್ಥರು ಹಲವು ವರ್ಷಗಳಿಂದ ಕಲುಷಿತ ಕೊಳವೆ ಬಾವಿ ನೀರನ್ನೇ ಕುಡಿದು ಕೀಲು ನೋವುಗಳೊಂದಿಗೆ ಬದುಕುತ್ತಿದ್ದಾರೆ. ವಿಶಾಲವಾದ ನದಿ ಕಣ್ಣೆದುರಿಗೆ ಹರಿಯುತ್ತಿದ್ದರೂ ಬೊಗಸೆ ನೀರು ಬಾಯಿಗೆ ಬರುತ್ತಿಲ್ಲ.

Advertisement

700 ಜನಸಂಖ್ಯೆ ಹೊಂದಿರುವ ಕುಲಕುಂದಾ ಗ್ರಾಮದಲ್ಲಿ ಕಳೆದ 20 ವರ್ಷಗಳ ಹಿಂದೆಯೇ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಇಂದಿಗೂ ಹನಿ ನೀರು ಪೂರೈಕೆಯಾಗಿಲ್ಲ. ಗ್ರಾಮದಾದ್ಯಂತ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅದರಲ್ಲಿ ನದಿ ನೀರು ಹರಿಯುವುದಿಲ್ಲ. ಸುಮಾರು 30 ವರ್ಷಗಳ ಹಿಂದೆ ಕಮ್ಯುನಿಸ್ಟ್‌ ಪಕ್ಷದಿಂದ ಶಾಸಕರಾಗಿ ಗೆದ್ದಿದ್ದ ಕೆ.ಬಿ. ಶಾಣಪ್ಪ ಅವರು ಕೊರೆಸಿದ ಕೊಳವೆಬಾವಿ ಇಂದಿಗೂ ಇಡೀ ಊರಿಗೆ ನೀರು ಒದಗಿಸುತ್ತದೆ ಎಂದು ಗ್ರಾಮದ ಈರಪ್ಪ ಪೂಜಾರಿ, ಮುತ್ತುರಾಜ ಹೊಸಮನಿ ಹಾಗೂ ಮಾರುತಿ ಹೊಸಮನಿ ಆರೋಪಿಸಿದ್ದಾರೆ.

ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಕ್ಷೇತ್ರದ ಹಾಲಿ ಶಾಸಕ, ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮೂರು ವರ್ಷಗಳ ಹಿಂದೆಯೇ ಕುಲಕುಂದಾ ಗ್ರಾಮದ ನದಿ ದಂಡೆಯಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದ್ದಾರೆ. ಈ ಘಟಕದಿಂದ ದೂರದ ನಾಲವಾರ, ನಾಲವಾರ ಸ್ಟೇಷನ್‌ ಪ್ರದೇಶ, ಕುಂಬಾರಹಳ್ಳಿ ಹಾಗೂ ಸುಗೂರು (ಎನ್‌) ಗ್ರಾಮಗಳಿಗೆ ಕುಲಕುಂದಾ ಶುದ್ಧೀಕರಣ ಘಟಕದಿಂದ ನಿತ್ಯ ನೀರು ಸರಬರಾಜು ಮಾಡಲಾಗುತ್ತಿದೆ. ದೀಪದ ಕೆಳಗೆ ಕತ್ತಲು ಎಂಬಂತೆ ಘಟಕ ಸ್ಥಾಪಿಸಲು ಜಾಗ ಒದಗಿಸಿದ ಕುಲಕುಂದಾ ಗ್ರಾಮಸ್ಥರಿಗೇ ಕುಡಿಯಲು ಭೀಮಾ ನದಿ ಶುದ್ಧ ನೀರು ಸಿಗುತ್ತಿಲ್ಲ. ದೊಡ್ಡ ನದಿ ಮತ್ತು ಬೃಹತ್‌ ನೀರು ಶುದ್ಧೀಕರಣ ಘಟಕ ಇದ್ದರೂ ಕೊಳವೆ ಬಾವಿ ನೀರೇ ಗತಿಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕುಡಿಯಲು ನೀರು ಒದಗಿಸದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮೂರಿಗೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next