ವಾಡಿ: ‘ಕಲ್ಯಾಣ ಕರ್ನಾಟಕ’ ಭಾಗದ ಹಿಂದೂ-ಮುಸ್ಲಿಂ ಭಾವೈಕ್ಯ ತಾಣವಾದ ಪ್ರಸಿದ್ಧ ಹಳಕರ್ಟಿ ದರ್ಗಾ ಶರೀಫ್ ಎಂದೇ ಕರೆಯಿಸಿಕೊಳ್ಳುವ ಸೈಯ್ಯದ್ ಮಹ್ಮದ್ ಬಾದಶಹಾ ಆಸ್ತಾನ್-ಇ-ಖ್ವಾದ್ರಿ ಅವರ 42ನೇ ಉರೂಸ್‌ಗೆ ಚಾಲನೆ ದೊರೆತಿದ್ದು, ಶನಿವಾರ ವಿಶೇಷ ರೈಲಿನ ಮೂಲಕ ಹೈದ್ರಾಬಾದ್‌ನಿಂದ ವಾಡಿ ನಿಲ್ದಾಣದ ವರೆಗೆ ಸಾವಿರಾರು ಭಕ್ತರ ಜತೆಗೆ ಪವಿತ್ರ ಸಂದಲ್ ಬಂದಿಳಿಯಿತು.
ಶ್ರೀಗಂಧದ ಕಟ್ಟಿಗೆ ಪುಡಿಯಲ್ಲಿ ಗುಲಾಬಿ ಹೂವಿನ ರಸ ಮಿಶ್ರಣ ಮಾಡಿ ಸಿದ್ಧಪಡಿಸಲಾದ ಸುಗಂಧ ದ್ರವ್ಯವೇ ಈ ಸಂದಲ್. ದರ್ಗಾ ಜಾತ್ರೆ ಸಂಭ್ರಮದ ವೇಳೆ ಈ ಸಂದಲ್ (ಗಂಧ) ದರ್ಗಾದೊಳಗಿನ ಶರೀಫ್‌ರ ಗೋರಿಗಳಿಗೆ ಲೇಪಿಸಲಾಗುತ್ತದೆ.
ಗುಲಾಬಿ ಮತ್ತು ಶ್ರೀಗಂಧ ಮಿಶ್ರಿತ ಸಂದಲ್ ಅನೇಕ ದಿನಗಳ ವರೆಗೆ ಸುವಾಸನೆ ಸೂಸುತ್ತದೆ. ಮಹತ್ವದ ಭಕ್ತಿಯ ಈ ಸಂದಲ್ ಹೈದ್ರಾಬಾದನಲ್ಲಿ ಸಿದ್ಧವಾಗಿ ವಿಶೇಷ ರೈಲಿನ ಮೂಲಕ ಪ್ರತಿ ವರ್ಷ ವಾಡಿ ದರ್ಗಾ ಶರೀಫ್‌ರ ಗೋರಿಗಳಿಗೆ ತಲುಪುತ್ತದೆ. ಇದು ಇಲ್ಲಿನ ಸಾಂಪ್ರದಾಯಿಕ ವಿಶೇಷ ಆಚರಣೆಯಾಗಿದೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.
ಹಳಕರ್ಟಿ ದರ್ಗಾ ಶರೀಫ್ ಉರೂಸ್‌ಗೂ ಹಾಗೂ ಹೈದ್ರಾಬಾದ್‌ನಿಂದ ಬರುವ ಸಂದಲ್ಗೂ ಭಕ್ತಿ ಬೆಸೆದುಕೊಂಡಿದೆ. ಸಂದಲ್ ಆಗಮನದ ಮೂಲಕ ಉರೂಸ್‌ಗೆ ಚಾಲನೆ ದೊರೆಯುತ್ತದೆ. ಶನಿವಾರ ಸಂಜೆ ದರ್ಗಾದ ಪೀಠಾಧಿಪತಿ ಸೈಯ್ಯದ್ ಅಬು ತುರಾಬಶಹಾ ಖ್ವಾದ್ರಿ ನೇತೃತ್ವದಲ್ಲಿ ಹಳಕರ್ಟಿ ದರ್ಗಾ ವರೆಗಿನ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಸಂಭ್ರಮದ ಮೆರವಣಿಗೆ ನಡೆಯಿತು. ದೇಶದ ಅನೇಕ ರಾಜ್ಯಗಳಿಂದ ಆಗಮಿಸಿದ್ದ ಮುಸ್ಲಿಂ ಬಾಂಧವರು ಸಂದಲ್ (ಗಂಧ) ದರ್ಶನ ಪಡೆದು ಕೃತಾರ್ಥರಾದರು.