Advertisement

ಚರಂಡಿ ಮೇಲೆ ಮೀನು ಮಾರಾಟ

11:57 AM Dec 25, 2019 | Naveen |

ಮಡಿವಾಳಪ್ಪ ಹೇರೂರ
ವಾಡಿ:
ಭೀಮಾ ಮತ್ತು ಕಾಗಿಣಾ ಪ್ರಮುಖ ನದಿಗಳು ಹರಿಯುವ ಚಿತ್ತಾಪುರ ತಾಲೂಕಿನ ವಾಡಿ, ನಾಲವಾರ ವಲಯದಲ್ಲಿ ಮೀನು ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲವಾಗಿದ್ದು, ವ್ಯಾಪಾರಿಗಳು ಬೀದಿಯನ್ನೇ ಮಾರುಕಟ್ಟೆ ಮಾಡಿಕೊಂಡು ಪರದಾಡುತ್ತಿದ್ದಾರೆ.

Advertisement

ಪುರಸಭೆ ಆಡಳಿತದ ಕೇಂದ್ರ ಹೊಂದಿರುವ ವಾಡಿ ಬೆಳೆಯುತ್ತಿರುವ ನಗರವಾಗಿದೆ. ಸುಮಾರು 50 ಸಾವಿರ ಜನಸಂಖ್ಯೆ ಹೊಂದಿದೆ. ಹೋಬಳಿ ಕೇಂದ್ರಸ್ಥಾನ ಹೊಂದಿರುವ ನಾಲವಾರದಲ್ಲಿ ಉಪ ತಹಶೀಲ್ದಾರ್‌ ಕಚೇರಿಯಿದೆ. ಇಲ್ಲಿ ಅಗತ್ಯವಸ್ತುಗಳ ಮಾರಾಟಕ್ಕಾಗಿ ಮಾರುಕಟ್ಟೆ ಕೊರತೆಯಿದೆ.

ನಾಲವಾರದ ಸಂತೆ ಬೀದಿಗಳಲ್ಲೇ ನಡೆದರೆ, ಕುಂಬಾರಹಳ್ಳಿ ಸಂತೆ ರಾಷ್ಟ್ರೀಯ ಹೆದ್ದಾರಿ-150ರ ಮೇಲೆ ನಡೆಯುತ್ತದೆ. ಗುರುವಾರಕ್ಕೊಮ್ಮೆ ನಡೆಯುವ ವಾಡಿ ಸಂತೆ ಗಲ್ಲಿ ರಸ್ತೆಗಳಲ್ಲಿ ಸಾಗುತ್ತದೆ. ತರಕಾರಿ ಸಂತೆಯಂತೆ ಮಾಂಸ ಹಾಗೂ ಮೀನು ಮಾರಾಟಕ್ಕೆ ವ್ಯಾಪಾರಿಗಳು ರಸ್ತೆಗಳನ್ನೇ ಅವಲಂಬಿಸಿದ್ದಾರೆ. ಸಿಮೆಂಟ್‌ ಲಾರಿಗಳ ಓಡಾಟದಿಂದ ಹಾರುವ ಧೂಳು ಮಾಂಸ, ತರಕಾರಿಗಳೊಂದಿಗೆ ಬೆರೆತು ಜನರ ಹೊಟ್ಟೆ ಸೇರುತ್ತಿದೆ. ಈ ಭಾಗದಲ್ಲಿ ಒಂದೆಡೆ ಕಾಗಿಣಾ ಹರಿಯುತ್ತಿದ್ದರೆ, ಇನ್ನೊಂದೆಡೆ ಭೀಮಾ ನದಿ ಹರಿಯುತ್ತದೆ. ಮಳಖೇಡದಿಂದ ಹರಿದು ಬರುವ ಕಾಗಿಣಾ ವಾಡಿ ಸಮೀಪದ ಕುಂದನೂರು ಬಳಿ ಭೀಮಾಗೆ ಸೇರಿಕೊಳ್ಳುತ್ತದೆ. ಕುಂದನೂರಿನಿಂದ ಚಾಮನೂರು, ಕಡಬೂರು, ಮಾರಡಗಿ, ಕೊಲ್ಲೂರು ಗ್ರಾಮಗಳನ್ನು ತಾಗಿ ಸನ್ನತಿ ವರೆಗೆ ಸಾಗುವ ಭೀಮಾನದಿ ನೀರನ್ನು ಸನ್ನತಿಯ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ತಡೆಹಿಡಿಯಲಾಗುತ್ತಿದೆ. ಅಪಾರ ಪ್ರಮಾಣದ ಜಲದಲ್ಲಿ ಮೀನುಗಳು ಭಾರಿ ಪ್ರಮಣದಲ್ಲಿ ಆಶ್ರಯ ಪಡೆದುಕೊಂಡಿವೆ.

ಕುಂದನೂರು, ಚಾಮನೂರು, ಮಾರಡಗಿ, ಸನ್ನತಿ ಗ್ರಾಮಗಳಲ್ಲಿ ಮೀನು ದಂಧೆಯನ್ನೇ ನೆಚ್ಚಿಕೊಂಡ ನೂರಾರು ಬೆಸ್ತರು, ಗ್ರಾಮೀಣ
ಭಾಗದಿಂದ ವಾಡಿ ಪಟ್ಟಣಕ್ಕೆ ಮೀನು ತಂದು ವ್ಯಾಪಾರ ಮಾಡುತ್ತಾರೆ. ವಿಪರ್ಯಾಸವೆಂದರೆ ಕಳೆದ ಹಲವು ವರ್ಷಗಳಿಂದ ಮೀನಿನ ವ್ಯಾಪಾರ ರಸ್ತೆ ಬದಿ ಚರಂಡಿ ಮೇಲೆ ನಡೆಯುತ್ತಿದೆ. ಭೀಮಾನದಿಯಲ್ಲಿ ಬೆಸ್ತರು ಬೀಸುವ ಬಲೆಗೆ ಬೀಳುವ ನೂರಾರು ಮೀನುಗಳು ಭಾರಿ ಬೆಲೆಯಲ್ಲಿ ಮಾರಾಟವಾಗುತ್ತವೆ. ಇಲ್ಲಿ ತಾಜಾ ಮೀನುಗಳು ಸಿಗುವುದರಿಂದ ಬೆಲೆ ಹೆಚ್ಚಿದೆ. ಪಟ್ಟಣದ ಕುಂದನೂರು ಚೌಕ್‌ ರಸ್ತೆಯಲ್ಲಿ ಸಾಲುಗಟ್ಟಿ ಕೂಡುವ ಮೀನು ವ್ಯಾಪಾರಿಗಳಿಗೆ ಸೂಕ್ತ ಮಾರುಕಟ್ಟೆ ಅಗತ್ಯವಿದೆ. ಈ ಕುರಿತು ಕ್ರಮಕೈಗೊಳ್ಳಬೇಕಾದ ಪುರಸಭೆ ಆಡಳಿತ ನಿರ್ಲಕ್ಷ್ಯ ವಹಿಸಿದೆ.

ಅಲ್ಲದೇ ಮೀನು ಮಾರಾಟಕ್ಕೆಂದು ಬಿಡುಗಡೆಯಾಗಿದ್ದ 50ಲಕ್ಷ ರೂ. ಅನುದಾನ ಬಳಕೆ ಮಾಡಿಕೊಳ್ಳದೆ ಪುರಸಭೆ ಅಧಿಕಾರಿಗಳು ವಾಪಸ್‌ ಕಳಿಸಿದ್ದಾರೆ ಎನ್ನುವುದು ಮೀನು ವ್ಯಾಪಾರಿಗಳ ಆರೋಪವಾಗಿದೆ. ಅಸ್ವಚ್ಚತೆ, ಅಶುದ್ಧ ವಾತಾವರಣದಲ್ಲಿ ಮೀನು ಮಾರಾಟ ಮಾಡುತ್ತಿರುವ ಬೆಸ್ತರಿಗೆ ಸೂಕ್ತ ಮಾರುಕಟ್ಟೆ ನಿರ್ಮಿಸಿಕೊಡಲು ಪುರಸಭೆ ಆಡಳಿತ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕಿದೆ ಎನ್ನುತ್ತಾರೆ ಮೀನು ಮಾರಾಟಗಾರರು.

Advertisement

ವಾಡಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ತರಕಾರಿ ಮಾರುಕಟ್ಟೆ ಅಗತ್ಯವಿದೆ. ಇದಕ್ಕಾಗಿ ನಗರೋತ್ಥಾನ ಪೇಜ್‌ 3ರ ಅಡಿ 55 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಗೂಡಂಗಡಿ ನಿರ್ಮಿಸಿಕೊಂಡಿರುವ ತರಕಾರಿ ವ್ಯಾಪಾರಿಗಳು ಜಾಗ ಖಾಲಿ ಮಾಡುತ್ತಿಲ್ಲ. ಆದ್ದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಆದಷ್ಟು ಬೇಗ ಪಟ್ಟಣದ ಹೃದಯ ಭಾಗದಲ್ಲಿರುವ ಹಳೆ ಮಾರ್ಕೇಟ್‌ ಜಾಗದಲ್ಲಿ 20 ಮಳಿಗೆ ನಿರ್ಮಿಸಲಾಗುವುದು. ಈ ಮೀನು ಮಾರುಕಟ್ಟೆ ಹಾಗೂ ಖಸಾಯಿಖಾನೆ ನಿರ್ಮಿಸಲು ಜಾಗದ ಕೊರತೆಯಿದೆ.
ಸಮಸ್ಯೆಯನ್ನು ಶಾಸಕ ಪ್ರಿಯಾಂಕ್‌ ಖರ್ಗೆ ಗಮನಕ್ಕೆ ತರುತ್ತೇನೆ.
ವಿಠ್ಠಲ ಹಾದಿಮನಿ,
ಮುಖ್ಯಾಧಿಕಾರಿ, ಪುರಸಭೆ

ವಿವಿಧ ಗ್ರಾಮಗಳಲ್ಲಿರುವ ಮೀನುಗಾರರು ಮೀನು ವ್ಯಾಪಾರವನ್ನೇ
ನೆಚ್ಚಿಕೊಂಡಿದ್ದಾರೆ. ಭೀಮಾನದಿ, ಕಾಗಿಣಾ ನದಿ ಹಾಗೂ ನಾಲವಾರ, ಕಮರವಾಡಿ, ಕುಂಬಾರಹಳ್ಳಿ ಸೇರಿದಂತೆ ಇತರ ಐದು ಗ್ರಾಮಗಳಲ್ಲಿ ಕೆರೆಗಳಿವೆ. ಟೆಂಡರ್‌ ಪಡೆದು ಮೀನು ಸಾಕಾಣಿಕೆ ಮಾಡಲಾಗುತ್ತಿದೆ. ನಾಲವಾರ ಕೆರೆ ಟೆಂಡರ್‌ ನೀಡಲು ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಹಿಂದೇಟು ಹಾಕುತ್ತಿದ್ದಾರೆ. ಎಲ್ಲ ಭಾಗಗಳಿಂದ ಹಿಡಿಯಲಾಗುವ ಮೀನುಗಳನ್ನು ವಾಡಿ ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತೇವೆ. ಆದರೆ ಇಲ್ಲಿ ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲದ ಕಾರಣ ಮುಖ್ಯ ರಸ್ತೆ ಆಶ್ರಯ ಪಡೆದಿದ್ದೇವೆ. ಮಾರುಕಟ್ಟೆ ನಿರ್ಮಿಸುವಂತೆ ಪುರಸಭೆ
ಅ ಧಿಕಾರಿಗಳಿಗೆ ಮನವಿ ನೀಡಿ ಸಾಕಾಗಿದೆ. ಅಧಿಕಾರಿಗಳು ಮೀನುಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಕುರಿತು ಶಾಸಕರಿಗೆ, ಸಂಬಂಧಪಟ್ಟವರಿಗೆ ದೂರು ನೀಡುತ್ತೇನೆ.
ಭಗವಾನ್‌ ಕುಂದನೂರು,
ಮೀನು ಮಾರಾಟಗಾರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next