ವಾಡಿ: ಇರಾಕ್ ದೇಶದಿಂದ ಮರಳಿಬಂದು ಯಾರಿಗೂ ಮಾಹಿತಿ ನೀಡದೆ ಗುಪ್ತವಾಗಿ ಓಡಾಡುತ್ತಿದ್ದ ಯುವಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸ್ ಬಿಎಚ್ ಬ್ಯಾಂಕ್ ಶಾಖೆ ಬಡಾವಣೆ ಯುವಕನೊಬ್ಬ ಇರಾಕ್ ದೇಶದಿಂದ ಮಾ. 5ರಂದೇ ಪಟ್ಟಣಕ್ಕೆ ವಾಪಸ್ ಬಂದಿದ್ದ. ಆದರೆ ಮನೆಗೆ ಭೇಟಿ ನೀಡಿದ ಆಶಾ ಕಾರ್ಯಕರ್ತೆಯರಿಗೂ ಮಾಹಿತಿ ನೀಡದೆ ಮುಚ್ಚಿಟ್ಟಿದ್ದ. ನಂತರ ಯುವಕನ ಹಿರಿಯ ಸಹೋದರಿಗೆ ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಕೊರೊನಾ ರೋಗದ ಇತರ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಸುರೇಶ ಮೇಕಿನ್ ಅವರು ನಡೆಸಿದ ವಿಚಾರಣೆ ವೇಳೆ ಆಕೆಯ ಕಿರಿಯ ಸಹೋದರ ಇರಾಕ್‌ನಿಂದ ಬಂದು, ಮನೆಯಲ್ಲಿರುವ ಸಂಗತಿ ಬೆಳಕಿಗೆ ಬಂದಿದೆ.
ಯುವಕ ವಿದೇಶದಿಂದ ನಗರಕ್ಕೆ ಬಂದು ಕಳೆದ 15 ದಿನಗಳಿಂದ ನಗರ ಸೇರಿದಂತೆ ಕಲಬುರಗಿ ಮತ್ತು ಇತರ ತಾಲೂಕುಗಳಿಗೆ ಹೋಗಿ ಬಹಿರಂಗವಾಗಿ ಓಡಾಡಿದ್ದಾನೆ ಎನ್ನಲಾಗಿದೆ. ಯುವಕನ ಆರೋಗ್ಯ ಸರಿಯಾಗಿದ್ದು, ಆತನ ಸಹೋದರಿಗೆ ಕೆಮ್ಮು, ಜ್ವರ, ನೆಗಡಿ ಲಕ್ಷಣ ಕಾಣಿಸಿಕೊಂಡಿವೆ. ಏ.10ರಂದು ಸಂಜೆ ಅಕ್ಕ-ತಮ್ಮ ಇಬ್ಬರನ್ನು ಜಿಲ್ಲಾ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ತಾಲೂಕು ಆಡಳಿತಕ್ಕೆ, ಆರೋಗ್ಯ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡದೆ ಕಾನೂನು ಉಲ್ಲಂಘಿಸಿರುವ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಪಿಐ ಪಂಚಾಕ್ಷರಿ ಸಾಲಿಮಠ, ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಟಿಎಚ್‌ಒ ಡಾ| ಸುರೇಶ ಮೇಕಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪೊಲೀಸ್ ಬಂದೋಬಸ್ತ್: ಇರಾಕ್‌ನಿಂದ ಬಂದ ಯುವಕನ ಮನೆಗೆ ಬ್ಯಾರಿಕೇಡ್ ಅಳವಡಿಸುವ ಮೂಲಕ ಯಾರೂ ಹೊರ ಬರದಂತೆ ತಡೆಯಲು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಕೊರೊನಾ ಶಂಕಿತ ಅಕ್ಕ-ತಮ್ಮ ಇಬ್ಬರ ಗಂಟಲು ದ್ರಾವಣವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.