Advertisement

ದಲಿತ ಕೇರಿಗಳಲ್ಲಿ ಬೌದ್ಧ ಭಿಕ್ಷುಗಳ ನಡಿಗೆ

04:25 PM Apr 25, 2019 | Naveen |

ವಾಡಿ: ಪಟ್ಟಣದ ವಿವಿಧ ದಲಿತ ಕೇರಿಗಳ ಒಟ್ಟು 30 ಮಕ್ಕಳು, ಐತಿಹಾಸಿಕ ಬೌದ್ಧ ಸ್ತೂಪ ಸ್ಥಳದ ಸನ್ನತಿ ಪರಿಸರದಲ್ಲಿ ಸಾಮೂಹಿಕ ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ಚೀವರ್‌ ಧಾರಣೆ ಮಾಡಿ ಧಮ್ಮ ಜಾಗೃತಿಗೆ ಮುಂದಾಗಿದ್ದಾರೆ.

Advertisement

ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ತಮ್ಮ ಜೀವಿತಾವದಿಯಲ್ಲಿ ಎರಡು ಸಲ ಪಟ್ಟಣಕ್ಕೆ ಭೇಟಿ ನೀಡಿರುವ ಐತಿಹಾಸಿಕ ಹಿನ್ನೆಲೆಯಿದೆ. ಇದರ ಸವಿನೆನಪಿಗಾಗಿ ಸ್ಥಳೀಯ ಬೌದ್ಧ ಸಮಾಜ ಪ್ರತಿ ವರ್ಷದ ಏ.27 ಮತ್ತು 28ರಂದು ಅಂಬೇಡ್ಕರ್‌ ಜಯಂತಿ ಆಚರಿಸಿಕೊಂಡು ಬರುತ್ತಿದೆ. ಈ ವರ್ಷದ ಜಯಂತ್ಯುತ್ಸವ ಸಮಿತಿಗೆ ಆಯ್ಕೆಯಾಗಿರುವ ಅಧ್ಯಕ್ಷ ಸಂದೀಪ ಕಟ್ಟಿ ನೇತೃತ್ವದ ಪದಾಧಿಕಾರಿಗಳ ತಂಡ, ಧಮ್ಮ ಜಾಗೃತಿ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಿದೆ.

ಪಟ್ಟಣದ ಅಂಬೇಡ್ಕರ್‌ ಕಾಲೋನಿ, ಭೀಮನಗರ, ಜಾಂಬವೀರ ಕಾಲೋನಿ ಸೇರಿದಂತೆ ವಿವಿಧ ದಲಿತ ಬಡಾವಣೆಗಳ ಮಕ್ಕಳಿಗೆ ಬುದ್ಧರತ್ನ ಭಂತೇಜಿ ಮಾರ್ಗದರ್ಶನದಲ್ಲಿ ಐದು ದಿನಗಳ ಬೌದ್ಧ ಭಿಕ್ಷು ಜೀವನ ಪದ್ಧತಿ ತರಬೇತಿ ನೀಡಲಾಗಿದ್ದು, ಕನಗನಹಳ್ಳಿ ಗ್ರಾಮದಲ್ಲಿ ಜಾಗೃತಿ ಜಾಥಾ ಕೈಗೊಳ್ಳಲಾಗಿದೆ. ಜಗತ್ತಿಗೆ ಶಾಂತಿ-ಸಂದೇಶ ಬೋಧಿಸಿದ ತಥಾಗತ ಗೌತಮ ಬುದ್ಧರ ವೈಜ್ಞಾನಿಕ ವಿಚಾರಗಳನ್ನು ಸಮಾಜದಲ್ಲಿ ಬಿತ್ತಲು ಸಾಲು ಸಾಲಾಗಿ ಹೊರಡುವ ಬೌದ್ಧ ಭಿಕ್ಷು ಮಕ್ಕಳಿಗೆ ಸಾರ್ವಜನಿಕ ಸ್ವಾಗತ ದೊರೆಯುತ್ತಿದೆ.

ಬುಧವಾರ ಬೆಳಗ್ಗೆ ಕೈಯಲ್ಲಿ ದಾನಪಾತ್ರೆ ಹಿಡಿದುಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಮೌನ ನಡಿಗೆ ಆರಂಭಿಸುವ ಮೂಲಕ ಸ್ಥಳೀಯರ ಗಮನ ಸೆಳೆದರು. ಭೀಮನಗರದ ಮನೆಗಳತ್ತ ಹೆಜ್ಜೆ ಹಾಕಿ ತುತ್ತು ಪ್ರಸಾದ ದಾನವನ್ನಾಗಿ ಸ್ವೀಕರಿಸಿದರು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸಂದೀಪ ಕಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರವಣಕುಮಾರ ಮೌಸಲಗಿ, ಮುಖಂಡರಾದ ಸಂತೋಷ ಜೋಗೂರ, ಸುನೀಲ ಚವಣೂರ, ಸಂತೋಷ ಜೋಗೂರ, ಸಂದೀಪ ಚಿತ್ತಾರೆ, ಅರುಣ ಬರ್ಮಾ, ನಾಗರಾಜ ಮನಸೋಡೆ ನವೀನ ಖರ್ಗೆ, ಹಣಮೇಶ ಯಮನಾಳ, ಸಾಯಿನಾಥ ಟೋಳೆ, ಮಹೇಂದ್ರ ಮೈನಾಳಕರ, ರಾಜು ಗಟ್ಟು, ಸಂಜಯ ಥಾಣೆದಾರ ಪಾಲ್ಗೊಂಡಿದ್ದರು.

Advertisement

ಅಂಬೇಡ್ಕರ್‌ ಜಯಂತಿ ಎಂದರೆ ಕೇವಲ ಕುಣಿತ ಎನ್ನುವಂತಾಗಿದೆ. ಅಂಬೇಡ್ಕರ್‌ ತೋರಿಸಿದ ಬುದ್ಧ ಧಮ್ಮ ಮಾರ್ಗ ಅನುಸರಿಸುವುದು ಗಳಿಗೆಯ ಅವಶ್ಯಕತೆಯಾಗಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ರೂಪಿಸಬಲ್ಲ ಜ್ಞಾನ ಬುದ್ಧನ ಸಂದೇಶದಲ್ಲಿದೆ. ಆದ್ದರಿಂದ ವಾಡಿ ನಗರದಲ್ಲಿ ಬೌದ್ಧ ಧರ್ಮದ ಜಾಗೃತಿಯಾಗಬೇಕು. ಅಂಬೇಡ್ಕರ ಕನಸು ನನಸಾಗಿಸಲು ಬುದ್ಧ ಚಿಂತನೆಯಲ್ಲಿ ನಡೆಯುವುದು ಮುಖ್ಯವಾಗಿದೆ. ಇದನ್ನು ಅರಿತು ಜಯಂತ್ಯುತ್ಸವ ಸಮಿತಿ ಧಮ್ಮ ಶಾಂತಿ ಜಾಥಾಕ್ಕೆ ಚಾಲನೆ ನೀಡಿದೆ. ದಲಿತರು ಪರಿವರ್ತನೆ ಮಾರ್ಗ ತುಳಿಯುತ್ತಿದ್ದು, ಐದು ದಿನಗಳ ಕಾಲ ಮುಂದುವರಿಯಲಿದೆ.
•ಸಂತೋಷ ಜೋಗೂರ, ಬೌದ್ಧ ಉಪಾಸಕ

Advertisement

Udayavani is now on Telegram. Click here to join our channel and stay updated with the latest news.

Next