Advertisement

ಗಬ್ಬು ನಾರುತ್ತಿದೆ ಎಸಿಸಿ ಕಾರ್ಮಿಕರ ಕಾಲೋನಿ

09:42 AM Jun 13, 2019 | Naveen |

ಮಡಿವಾಳಪ್ಪ ಹೇರೂರ
ವಾಡಿ:
ವಿಶ್ವ ಭೂಪಟದಲ್ಲಿರುವ ಅನೇಕ ದೇಶಗಳಿಗೆ ಸಿಮೆಂಟ್ ರಫ್ತು ಮಾಡಿ ಜನಮನ್ನಣೆ ಗಳಿಸಿರುವ ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರ ಬದುಕು ಅತ್ಯಂತ ದುಸ್ಥರದಿಂದ ಕೂಡಿದೆ. ಕಾರ್ಮಿಕರ ವಾಸಕ್ಕಾಗಿ ನಿರ್ಮಿಸಲಾದ ಕಾಂಕ್ರಿಟ್ ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಕಟ್ಟಡದ ಸುತ್ತಲೂ ಗಬ್ಬು ವಾಸನೆ ಹಬ್ಬಿದೆ. ಕೊಳೆ ಎನ್ನುವುದು ಕೆರೆಯಂತೆ ನಿಂತು ನೈರ್ಮಲ್ಯ ವ್ಯವಸ್ಥೆ ಹದಗೆಡಿಸಿದೆ.

Advertisement

ಭೀಮಾನದಿ ಮತ್ತು ಕಾಗಿಣಾ ನದಿಗಳ ಜಲ ಸಂಪನ್ಮೂಲ ಹಾಗೂ ಹಾಸುಗಲ್ಲಿನ ಖನಿಜ ಸಂಪತ್ತು ಆಶ್ರಯಿಸಿ ಸುಮಾರು 50 ವರ್ಷಗಳ ಹಿಂದೆಯೇ ಚಿತ್ತಾಪುರ ತಾಳೂಕಿನ ವಾಡಿ ಪಟ್ಟಣದಲ್ಲಿ ಗಗನಚುಂಬಿ ಕಾರ್ಖಾನೆ ಕಟ್ಟಿರುವ ಅಸೋಷಿಯೇಟೆಡ್‌ ಸಿಮೆಂಟ್ ಕಂಪನಿ (ಎಸಿಸಿ) ಆಡಳಿತ ಮಂಡಳಿ, ಟಿಆರ್‌ಟಿ ಎನ್ನುವ ಹೆಸರಿನಡಿ 12 ಕುಟುಂಬಗಳು ವಾಸಿಸಬಲ್ಲ ನೂರಾರು ಕಟ್ಟಡಗಳನ್ನು ಕಟ್ಟಿ ಪ್ರತ್ಯೇಕ ಕಾಲೋನಿ ನಿರ್ಮಿಸಿದೆ.

ಆಡಳಿತ ಮಂಡಳಿ ಸದಸ್ಯರು, ಅಭಿಯಂತರರು, ಆಡಳಿತ ಕಚೇರಿ ಸಿಬ್ಬಂದಿಗಳಿಗೆ ಜಿಎಸ್‌ಕ್ಯೂ, ಎಸ್‌ಎಸ್‌ಕ್ಯೂ ಹೆಸರಿನ ಅನುಕೂಲಕರ ಮನೆಗಳನ್ನು ಕೊಟ್ಟು ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ಸಿಮೆಂಟ್ ಚೀಲಗಳನ್ನು ಹೊತ್ತು, ಧೂಳು ಸೇವಿಸಿ ಉತ್ಪಾದನೆಗಾಗಿ ನಿತ್ಯವೂ ಬದುಕು ಸವೆಸುತ್ತಿರುವ ಕೊನೆ ದರ್ಜೆ ಕಾರ್ಮಿಕರಿಗೆ ಅತ್ಯಂತ ಕಳಪೆ ವಸತಿ ಗೃಹಗಳನ್ನು ಕೊಟ್ಟು ಗೋಳಾಡುವಂತೆ ಮಾಡಿದ್ದು, ದುಡಿಯುವ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಿರುಕು ಬಿಟ್ಟ ಕಾರ್ಮಿಕರ ವಸತಿ ಗೃಹಗಳ ಸುತ್ತಲೂ ಅಸ್ವಚ್ಛತೆ ಹಾಸುಹೊಕ್ಕಾಗಿದೆ. ಹುಲ್ಲಿನ ಪೊದೆ ಬೆಳೆದು ಹುಳು ಹುಪ್ಪಡಿಗಳ ತಾಣವಾಗಿದೆ. ಕಟ್ಟಡಗಳ ಹಿಂದೆ ಕಸ ಹಾಕಲು ಮೀಸಲಿಟ್ಟ ಜಾಗದಲ್ಲಿ ಕೊಳೆ ತುಂಬಿಕೊಂಡಿದೆ. ವಿಲೇವಾರಿ ಮಾಡಲಾಗದಕ್ಕೆ ಘನತ್ಯಾಜ್ಯ ಭರ್ತಿಯಾಗಿ ಘೋರ ಸಮಸ್ಯೆಗೆ ಕಾರಣವಾಗಿದೆ. ಅತ್ತ ಕಾರ್ಖಾನೆ ಯಂತ್ರಗಳು, ಇತ್ತ ಗೂಂಯ್‌ಗಾಡುವ ಸೊಳ್ಳೆಗಳು ಶ್ರಮಿಕರ ರಕ್ತ ಹೀರುತ್ತಿವೆ. ಹಂದಿಗಳ ಓಡಾಟದಿಂದ ತಿಪ್ಪೆ ಕಸದ ದುರ್ನಾಥ ಕುಟುಂಬಗಳ ನೆಮ್ಮದಿಯನ್ನೇ ಕಸಿದುಕೊಂಡಿವೆ. ಇಡೀ ಕಾಲೋನಿ ವಾತಾವರಣ ಕಲುಷಿತಗೊಂಡಿದ್ದು, ಎಸಿಸಿ ಆಡಳಿತಕ್ಕೆ ಹೇಳ್ಳೋರು ಕೇಳ್ಳೋರು ಯಾರೂ ಇಲ್ಲದಂತಾಗಿದೆ. ಕಾಲೋನಿಯ ಶಿಥಿಲ ಕಟ್ಟೆಗಳಿಗೆ, ಹದಗೆಟ್ಟ ರಸ್ತೆಗಳಿಗೆ ತೇಪೆ ಹಚ್ಚುವ ಕೆಲಸ ಮಾತ್ರ ಮಾಡುತ್ತಿರುವ ಎಸಿಸಿ ಕಂಪನಿ, ಗುಣಮಟ್ಟದ ಸೌಲಭ್ಯಗಳಿಂದ ವಂಚಿಸುತ್ತಿದೆ.

ಕಾರ್ಮಿಕರನ್ನು ಕಡಿತ ಮಾಡುವ ಹಪಾಹಪಿ ಎಸಿಸಿ ಆಡಳಿತಕ್ಕಿದ್ದು, ಘನತ್ಯಾಜ್ಯ ವಿಲೇವಾರಿಗೂ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ವಾರ್ಷಿಕ ಆದಾಯ ಮೂಲದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ನಗರದ ಇತರ ಬಡಾವಣೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಎನ್ನುವುದು ಕಾನೂನು ನಿಯಮವಿದ್ದು, ಕಂಪನಿ ಗಾಳಿಗೆ ತೂರಿದೆ. ತನ್ನ ಕಾರ್ಮಿಕ ಕಾಲೋನಿಯನ್ನೇ ಶುಚಿಯಾಗಿಟ್ಟುಕೊಳ್ಳದ ಎಸಿಸಿ, ಉತ್ಪಾದನೆ ಗುರಿ ಮಾತ್ರ ಬೆನ್ನಟ್ಟಿದೆ ಎನ್ನುವ ಟೀಕೆ ವ್ಯಕ್ತವಾಗಿದೆ.

Advertisement

ಎಸಿಸಿ ಕಾಲೋನಿಯಲ್ಲಿನ ಕಾರ್ಮಿಕರ (ಟಿಆರ್‌ಟಿ) ಕಟ್ಟಡಗಳು ಸುಮಾರು 60ರಿಂದ 70 ವರ್ಷದಷ್ಟು ಹಳೆಯದಾಗಿವೆ. ಬಿಲ್ಡಿಂಗ್‌ ಸೋರುತ್ತಿವೆ. ಗೋಡೆಗಳ ಸಿಮೆಂಟ್ ಕಳಚಿಬಿದ್ದಿದೆ. ಹಳೆಯ ಕಟ್ಟಡಗಳನ್ನು ತೆರವು ಮಾಡಿ ಹೊಸ ಕಟ್ಟಡಗಳನ್ನು ನಿರ್ಮಿಸಬೇಕಾದ ಎಸಿಸಿ ಆಡಳಿತ ಮಂಡಳಿ, ಹಳೆಯ ಕಟ್ಟಡಗಳಿಗೆ ಸಿಮೆಂಟ್ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ಕಾರ್ಮಿಕರ ಮನೆಯಿಂದ ಸಂಗ್ರಹವಾಗುವ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿಲ್ಲ. ಇದರಿಂದ ಪರಿಸರ ಗಬ್ಬೆದ್ದು ನಾರುತ್ತಿದೆ. ಸೊಳ್ಳೆಗಳ ಸಾಮ್ರಾಜ್ಯವೇ ಸೃಷ್ಟಿಯಾಗಿದೆ. ಕಂಪನಿಯವರೂ ನಮ್ಮ ಕಷ್ಟ ಕೇಳುತ್ತಿಲ್ಲ. ಕಾರ್ಮಿಕ ಸಂಘದ ಪದಾಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಸಮಸ್ಯೆ ಹೇಳಿದರೆ ಕೆಲಸದ ಸ್ಥಳದಲ್ಲಿಯೇ ಕಿರುಕುಳ ಕೊಡುತ್ತಾರೆ ಎಂದು ಆಪಾದಿಸುತ್ತಾರೆ ಕಂಪನಿ ಕಾರ್ಮಿಕರು.

ಎಸಿಸಿ ಕಾಲೋನಿ ಕಾರ್ಮಿಕರ ಕಟ್ಟಡಗಳು ಸುಸಜ್ಜಿತವಾಗಿವೆ. ಯಾವ ಕಟ್ಟಡದಲ್ಲಿ ಬಿರುಕು ಕಾಣಿಸಿದೆಯೋ ಅವುಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಕಟ್ಟಡ ಶಿಥಿಲವೋ ಗುಣಮಟ್ಟಧ್ದೋ ಎನ್ನುವುದನ್ನು ಗುರುತಿಸಲು ನಮ್ಮಲ್ಲಿ ವಿಶೇಷ ಇಂಜಿನಿಯರ್‌ಗಳಿದ್ದಾರೆ. ಅವರ ಸಲಹೆಯಂತೆ ನಾವು ಮುನ್ನಡೆಯುತ್ತೇವೆ. ಸ್ವಚ್ಚತೆಗೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಿತ್ಯವೂ ಟ್ರ್ಯಾಕ್ಟರ್‌ಗಳ ಮೂಲಕ ಕಸ ವಿಲೇವಾರಿ ಮಾಡುತ್ತಿದ್ದೇವೆ. ಕಾರ್ಮಿಕರ ಗೃಹಗಳ ಹಿಂದೆ ಕಸ ಸಂಗ್ರಹವಾಗಿದ್ದರೆ ಅದಕ್ಕೆ ಕಾರ್ಮಿಕರೇ ಕಾರಣ. ಕಸ ಹಾಕಲು ಪ್ರತ್ಯೇಕ ತೊಟ್ಟಿಗಳು ಇಟ್ಟಿದ್ದೇವೆ. ಆದರೆ ಅವರು ಬೇಕಾಬಿಟ್ಟಿ ಹರಡಿದರೆ ಏನು ಮಾಡಬೇಕು. ಈ ಕುರಿತು ಜನರಲ್ಲಿ ಜಾಗೃತಿ ಅಗತ್ಯವಿದೆ. ಕೊಳೆಗಟ್ಟಿದ ಸ್ಥಳಗಳನ್ನು ಪರಿಶೀಲಿಸಿ ತ್ಯಾಜ್ಯ ವಿಲೇವಾರಿ ಮಾಡಲಾಗುವುದು.
ಜೀತೇಂದ್ರ ಕುಮಾರ,
ಎಸಿಸಿ ಕಾರ್ಯಾಚರಣೆ ಘಟಕದ ಮುಖ್ಯಸ್ಥರು

Advertisement

Udayavani is now on Telegram. Click here to join our channel and stay updated with the latest news.

Next