ಗುಂಡ್ಲುಪೇಟೆ(ಚಾಮರಾಜನಗರ): ಅರಣ್ಯ ಇಲಾಖೆ ಇರಿಸಿದ್ದ ಬೋನ್ ಗೆ ಚಿರತೆಯೊಂದು ಸೆರೆಯಾಗಿರುವ ಘಟನೆ ತಾಲೂಕಿನ ವಡೆಯನಪುರ ಗ್ರಾಮದ ಹೊರ ವಲಯದ ರೈತರೊಬ್ಬರ ಜಮೀನಿನಲ್ಲಿ ನಡೆದಿದೆ.
ತಾಲೂಕಿನ ವಡೆಯನಪುರ, ಬೊಮ್ಮಲಾಪುರ, ಕೊಡಸೋಗೆ ಸುತ್ತಮುತ್ತಲ ಗ್ರಾಮಗಳ ಜಮೀನಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಉಪಟಳ ನೀಡಿ, ಜಾನುವಾರುಗಳ ಮೇಲೆ ದಾಳಿ ಕೊಂದು ಹೊತ್ತೊಯ್ಯುತ್ತಿತ್ತು. ಇದರಿಂದ ಭಯಭೀತರಾಗಿದ್ದ ರೈತರು ಚಿರತೆ ಸೆರೆ ಹಿಡುವಂತೆ ಒತ್ತಾಯಿಸಿದ್ದರು. ರೈತರ ಆಕ್ರೋಶದ ಹಿನ್ನಲೆ ಹೆಜ್ಜೆ ಗುರುತು ಹಾಗು ಚಲನವಲನಗಳ ಆಧಾರ ಮೇಲೆ ವಡೆಯನಪುರ ಗ್ರಾಮದ ಗಿರೀಶ್ ಎಂಬುವರ ಜಮೀನಿನಲ್ಲಿ ಬೋನ್ ಇರಿಸಿ ಬಲಿಪ್ರಾಣಿ ಕಟ್ಟಿದ್ದರು. ಇದೀಗ ಆ ಬೋನಿಗೆ ಭಾನುವಾರ ತಡ ರಾತ್ರಿ ಚಿರತೆ ಬಿದ್ದಿದೆ.
ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಜಮೀನಿಗೆ ಹೋಗುತ್ತಿದ್ದ ರೈತರೊಬ್ಬರು ಬೋನ್ ಬಾಗಿಲು ಮುಚ್ಚಿದ್ದ ಕಾರಣ ಹತ್ತಿರ ಹೋಗಿ ನೋಡಿದಾಗ ಚಿರತೆ ಸೆರೆಯಾಗಿರುವ ವಿಷಯ ತಿಳಿದು ಬಂದಿದೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯಿಂದ ಜಮೀನಿನಿಂದ ಸ್ಥಳಾಂತರಿಸಿದ್ದಾರೆ.
ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಮೇರೆಗೆ ಬಂಡೀಪುರ ಅಭಯಾರಣ್ಯದ ಮೂಲೆಹೊಳೆ ಕಾಡಿನಲ್ಲಿ ಬಿಡಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.
ನಿಟ್ಟುಸಿರು ಬಿಟ್ಟ ರೈತರು: ವಡೆಯನಪುರ, ಬೊಮ್ಮಲಾಪುರ, ಕೊಡಸೋಗೆ ಸುತ್ತಮುತ್ತಲು ಚಿರತೆ ಹಾವಳಿ ಹೆಚ್ಚಾಗಿತ್ತು. ಚಿರತೆ ದಾಳಿಗೆ ಜಾನುವಾರುಗಳು ಬಲಿಯಾಗಿದ್ದವು. ಇದರಿಂದ ಜಮೀನಿಗೆ ಹೋಗುವಾಗ, ತೋಟದ ಮನೆಗಳಲ್ಲಿ ವಾಸಿಸುವರಿಗೆ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಮಳೆ ಸಂದರ್ಭದಲ್ಲಿ ಜಮೀನುಗಳಲ್ಲಿ ಚಿರತೆ ಹೆಜ್ಜೆ ಗುರುತುಗಳು ಮೂಡಿರುತ್ತಿದ್ದವು. ಇದರಿಂದ ಭಯಭೀತರಾಗಿದ್ದ ರೈತರು ಚಿರತೆ ಬೋನಿಗೆ ಬಿದ್ದಿರುವ ಹಿನ್ನಲೆ ನಿಟ್ಟುಸಿರು ಬಿಡುವಂತಾಗಿದೆ.