Advertisement

ವಡಾಲ ಎನ್‌ಕೆಇಎಸ್‌ ಸಮೂಹ ಶಿಕ್ಷಣ ಸಂಸ್ಥೆ: 80ನೇ ವಾರ್ಷಿಕೋತ್ಸವ

08:17 PM Mar 29, 2019 | Vishnu Das |

ಮುಂಬಯಿ: ವಿದ್ಯಾರ್ಥಿಗಳಲ್ಲಿರುವ ಏಕಾಂತ ಪ್ರವೃತ್ತಿಯನ್ನು ಹೋಗಲಾಡಿಸಿ ಅವರು ಉತ್ತಮ ಸ್ನೇಹತ್ವದೊಂದಿಗೆ ಸಹಬಾಳ್ವೆಯಿಂದ ಬೆರೆತು ಬಾಳುವಂತಹ ಪರಿಸರ ನಿರ್ಮಾಣ ಮಾಡಬೇಕು. ಮೇಣದ ಬತ್ತಿ ತಾನು ಉರಿದು ಜಗತ್ತಿಗೆ ಬೆಳಕು ನೀಡುವಂತೆ ಗುರುಗಳು ತನ್ನಲ್ಲಿರುವ ಜ್ಞಾನ ಸುಧೆಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ಅವರನ್ನು ಯೋಗ್ಯ ನಾಗರಿಕನ್ನಾಗಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗುವಂತೆ ಮಾಡಬೇಕು ಎಂದು ಐಡಿಎಫ್‌ಸಿ ಇನಾ#†ಸ್ಟ್ರಕ್ಚರ್‌ ಫೈನಾನ್ಸ್‌ ಲಿಮಿಟೆಡ್‌ ಇದರ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಎಸ್‌. ರಾವ್‌ ನುಡಿದರು.

Advertisement

ಮಾ. 24ರಂದು ವಡಾಲದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರಗಿದ ಎನ್‌ಕೆಇಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ 80ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ವೃತ್ತಿಪರ ಪ್ರಮಾಣ ಪತ್ರ ಕೋರ್ಸ್‌ ತರಗತಿಯನ್ನು ಉದ್ಘಾಟಿಸಿ, ಶಾಲಾ ವಾರ್ಷಿಕ ನಂದಾದೀಪ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು. ಇಂದಿನ ಶಿಕ್ಷಣವು ಹಲವಾರು ಮಾಹಿತಿಗಳನ್ನು ನೀಡುವ ಜ್ಞಾನದ ಆಗರವಾಗಿದ್ದು, ಶಾಲೆಯು ವಿವಿಧ ಬಿಡಿವಸ್ತುಗಳ ರೀತಿಯಲ್ಲಿ, ಇಂಧನದ ರೂಪದಲ್ಲಿ ಸಹಕರಿಸುತ್ತಾ ವಿದ್ಯಾರ್ಥಿಗಳಿಗೆ ಉದ್ಯೋಗ ಸಂಪಾದಿಸಲು ಸಹಕರಿಸುವ ಘಟಕದಂತೆ ಕಾರ್ಯನಿರ್ವಹಿಸುತ್ತಿವೆ. ಉದ್ಯೋಗಕ್ಕಾಗಿ ಶಿಕ್ಷಣ, ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗಾಗಿ ಶಿಕ್ಷಣ ಮತ್ತು ಅಸಮಾನ್ಯ ಮಾನವನಾಗಲು ಶಿಕ್ಷಣ ಎಂಬ 3 ಹಂತಗಳ ಶಿಕ್ಷಣದ ಪದ್ಧತಿಗಳ ಮೇಲೆ ಬೆಳಕು ಚೆಲ್ಲುತ್ತಾ ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ, ದೈಹಿಕ ಶಿಕ್ಷಣದೊಂದಿಗೆ ಯೋಗಾಭ್ಯಾಸವನ್ನು ಅಳವಡಿಸಿಕೊಂಡಾಗ ಮನಸ್ಸನ್ನು ಸೀಮಿತದಲ್ಲಿಟ್ಟುಕೊಂಡು ಅದನ್ನು ಪ್ರಫುಲ್ಲಗೊಳಿಸಿ ಒತ್ತಡದ ಕ್ಷಣದಲ್ಲೂ ಕಾರ್ಯನಿರ್ವಹಿಸಲು ತೆರೆದ ಕಣ್ಣುಗಳೊಂದಿಗೆ ಸಮಾಜವನ್ನು ವೀಕ್ಷಿಸಿದಾಗ ಜೀವನದಲ್ಲಿ ಯಶಸ್ಸ ಗಳಿಸಲು ಸಾಧ್ಯವಿದೆ ಎಂದು ನುಡಿದರು.

ಗೌರವ ಅತಿಥಿಯಾಗಿ ಆಗಮಿಸಿದ ಟೈಮ್ಸ್‌ ಪ್ರೋ ಇದರ ಅಧ್ಯಕ್ಷ ಅನೀಸ್‌ ಶ್ರೀಕೃಷ್ಣ ಅವರು ಮಾತನಾಡಿ, ಇಲ್ಲಿಯ ಎನ್‌ಸಿಸಿ ವಿದ್ಯಾರ್ಥಿಗಳ ಶಿಸ್ತು ಹಾಗೂ ಸಂಯಮವನ್ನು ಗಮನಿಸಿದಾಗ ನಾನು ನನ್ನ ಶಾಲೆಯಲ್ಲಿ ಎನ್‌ಸಿಸಿಯಲ್ಲಿ ಸಾರ್ಜೆಂಟ್‌ ಆಗಿದ್ದ ದಿನಗಳು ಮರುಕಳಿಸುತ್ತಿದೆ. ದೇವಾ ಲಯದ ಮಾದರಿಯಲ್ಲಿರುವ ಇಂತಹ ಭವ್ಯ ಕಟ್ಟಡದಲ್ಲಿ ಕೆಜಿಯಿಂದ ಪಿಜಿಯವರೆಗೆ ಕೌಶಲಪೂರ್ಣವಾದ ಶಿಕ್ಷಣವನ್ನು ನೀಡುವುದರೊಂದಿಗೆ ಹೊಸದಾಗಿ ಪ್ರಾರಂಭಿಸಲ್ಪಟ್ಟ ಪ್ರಮಾಣ ಪತ್ರ ಕೋರ್ಸ್‌ಗಳು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬೆಳಕನ್ನು ಚೆಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಲು ಸಹಕರಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಸಭಾ ಕಾರ್ಯಕ್ರಮವನ್ನು ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಉದ್ಘಾಟಿಸಿದರು. ಶಾಲಾ ಸಂಗೀತ ಶಿಕ್ಷಕ ಸಚಿನ್‌ ಮೋರೆ ಪ್ರಾರ್ಥನೆಗೈದರು. ವಿದ್ಯಾರ್ಥಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ನಾಡಗೀತೆಗಳನ್ನು ಹಾಡಿದರು. ಶಾಲಾ ಶೈಕ್ಷಣಿಕ ವರ್ಷದ ವರದಿಯನ್ನು ಆಯಾಯ ವಿಭಾ ಗದ ಮುಖ್ಯಸ್ಥರು ವಾಚಿಸಿದರು. ಪಾಲ್ಗೊಂಡ ಅತಿಥಿ-ಗಣ್ಯರುಗಳನ್ನು ಪ್ರಾಂಶುಪಾಲ ಸರೋಜಾ ರಾವ್‌ ಸ್ವಾಗತಿಸಿದರು.

ಶಾಲಾ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಅನಂತ ಬನವಾಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಶಾಲಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪಾರ್ಥ ಸಾರಥಿ ರಾವ್‌, ಕಾರ್ಯದರ್ಶಿ ಸುರೇಶ್‌ ರಾವ್‌, ಉಪಾಧ್ಯಕ್ಷೆ ಕೆ. ಕಮಲಾ ಹಾಗೂ ಸದಸ್ಯರಾದ ಅನಂತ ಬನವಾಸಿ ಅವರು ಅತಿಥಿ-ಗಣ್ಯರುಗಳನ್ನು ಶಾಲು ಹೊದೆಸಿ, ಫಲಪುಷ್ಪ ಸ್ಮರಣಿಕೆಯನ್ನಿತ್ತು ಗೌರವಿಸಿದರು.

Advertisement

ಈ ಸಂದರ್ಭ ಅತಿಥಿ-ಗಣ್ಯರು ಎಸ್‌ವಿಐಎಂಎಸ್‌ ಪಿಜಿಡಿಎಂ (ಬಿ ಆ್ಯಂಡ್‌ ಎಫ್‌ಎಸ್‌) ವಿದ್‌ ಟೈಮ್ಸ್‌ ಪ್ರೋ ಹಾಗೂ ಸರ್ಟಿಫೈಡ್‌ ಕೋರ್ಸ್‌ ಆನ್‌ ಫಿಲ್ಮ್ ಮೇಕಿಂಗ್‌ ವಿದ್‌ ಝಡ್‌ಐಎಂಎ ಕೋರ್ಸ್‌ಗಳನ್ನು ಉದ್ಘಾಟಿಸಿ, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ತಿಳಿಸಿ ಶುಭಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಖ್ಯಾತ ಗಾಯಕ ಇಂಡಿಯನ್‌ ಐಡಾಲ್‌ ಸೀಜನ್‌-2 ರ ವಿಜೇತ, ರೈಸಿಂಗ್‌ ಸ್ಟಾರ್‌ ಬಿರುದಾಂಕಿತ ಅಮೇಯ್‌ ದಾಥೆ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಿಕ್ಷಣ ಸಂಸ್ಥೆಯ ಪ್ರತೀ ವಿಭಾಗದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ವಿವಿಧ ವಿನೋದಾವಳಿಗಳು ನಡೆಯಿತು. ಮಾಧವಿ ಜೋಶಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷೆ ಕೆ. ಕಮಲಾ ಅವರು ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಶಶಿಕಾಂತ್‌ ಜೋಶಿ, ಪದ್ಮಜಾ ಬನವಾಸಿ, ವಿಕ್ರಾಂತ್‌ ಉರ್ವಾಳ್‌, ಮುರಳೀಧರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಪಾಲಕರು, ಪೋಷಕರು, ಶಿಕ್ಷಕವೃಂದದವರು, ಶಿಕ್ಷಕೇತರ ಸಿಬಂದಿಗಳು, ಹಳೆವಿ ದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಣ ಪ್ರೇಮಿಗಳು, ಹಿತೈಷಿಗಳು, ದಾನಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next