Advertisement

ವಚನಗಳು ನಿಜ ಜೀವನದ ಸಂವಿಧಾನ

09:03 PM Feb 25, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಯಾರಿಗೂ ಹೆದರದೆ, ಅಳುಕದೇ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ 12ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯದ ಕ್ರಾಂತಿಗೆ ನಾಂದಿಯಾಡಿದ ವಚನಕಾರರ ವಚನಗಳು ನಮಗೆ ನಿಜ ಜೀವನದ ಸಂವಿಧಾನವಿದ್ದಂತೆ ಎಂದು ಅಪರ ಜಿಲ್ಲಾಧಿಕಾರಿ ಆರತಿ ತಿಳಿಸಿದರು. ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ವಿಚಾರಧಾರೆ ಪಾಲಿಸಿ: ಅಂಬಿಗರ ಚೌಡಯ್ಯನವರು ಕೇವಲ ಗಂಗಾಮತ ಸಮಾಜಕ್ಕೆ ಸೀಮಿತರಾದವರಲ್ಲ. ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಇಂತವರ ವಿಚಾರಧಾರೆಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾಯಕ ನಿಷ್ಠೆ ಉಳ್ಳವರು, ಹಸಿದವರಿಗೆ ಅನ್ನ ಕೊಡಿ, ದುಃಖದಲ್ಲಿದ್ದವರಿಗೆ ಸಾಂತ್ವನ ಹೇಳಿ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಎಂದು ತಮ್ಮ ವಚನದ ಮೂಲಕ ಚೌಡಯ್ಯನವರು ಜಗತ್ತಿಗೆ ಸಾರಿದವರು ಎಂದು ಬಣ್ಣಿಸಿದರು.

ಉತ್ತಮ ಗುಣ ಬೆಳೆಸಿಕೊಳ್ಳಿ: ಶಿಡ್ಲಘಟ್ಟ ಅಕ್ಷರ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್‌ ಮಾತನಾಡಿ, ಸಮಾಜದ ಏಳಿಗೆಗೆ ಶಿಕ್ಷಣ ಅಗತ್ಯ. ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಹಿಂದಿನ ಕಾಲದಲ್ಲಿ ನದಿಯ ದಡ ದಾಟಲು ಯಾವುದೇ ಸೌಕರ್ಯಗಳಿರಲಿಲ್ಲ. ಅಂತಹ ಸಂದರ್ಭದಲ್ಲಿ ನದಿಯ ದಡ ಸೇರಿಸುತ್ತಿದ್ದರು. ಅಂಬಿಗರು ನಂಬಿದವರ ಕೈಬಿಡುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಗೌರವ ಸಲ್ಲಿಸಿದಂತಾಗುತ್ತದೆ. 12ನೇ ಶತಮಾನದಲ್ಲಿ ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದವರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ನಿವೃತ್ತ ಪ್ರಾಂಶುಪಾಲರಾದ ಬಿ.ವಿ.ಕೃಷ್ಣಪ್ಪ, ಬೆಸ್ತರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಜಯರಾಮ್‌, ಸಮುದಾಯದ ಮುಖಂಡರಾದ ಶೋಭಾ, ದೀಪ ಆನಂದ್‌, ಜಗನ್ನಾಥ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮೆರವಣಿಗೆ, ಸಾಂಸ್ಕೃತಿಕ ನೃತ್ಯ ಪ್ರದರ್ಶನ: ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಿಂದ ಬಿ.ಬಿ ರಸ್ತೆ, ಗಂಗಮ್ಮ ಗುಡಿ ರಸ್ತೆಯ ಮೂಲಕ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದವರೆಗೆ ಅಂಬಿಗರ ಚೌಡಯ್ಯರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದವು. ವೇದಿಕೆ ಕಾರ್ಯಕ್ರಮದಲ್ಲಿ ಸಿ.ವಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಜಿ.ನರಸಿಂಹಯ್ಯ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

Advertisement

ಇಂದಿನ ವಿದ್ಯಾರ್ಥಿ ಯುವ ಪೀಳಿಗೆಯು ಸಾಧು, ಸಂತರ, ದಾರ್ಶನಿಕರ ಹಾಗೂ ವಚನಕಾರರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ವಚನಕಾರರ ಕೊಡುಗೆ ಅನನ್ಯ.
-ಆರತಿ, ಅಪರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next