Advertisement

ರೋಟಾ ವೈರಸ್ ನಿಯಂತ್ರಣಕ್ಕೆ ಲಸಿಕೆ ಹಾಕಿಸಿ

01:24 PM Jul 24, 2019 | Suhan S |

ಅರಸೀಕೆರೆ: ಸಣ್ಣಮಕ್ಕಳಲ್ಲಿ ವಾಂತಿ ಭೇದಿಯೊಂದಿಗೆ ಕಾಣಿಸಿಕೊಳ್ಳುವ ಜ್ವರದ ಕಾಯಿಲೆಗೆ ಅತ್ಯಂತ ಮಾರಕವಾದ ರೋಟಾ ವೈರಸ್‌ ವೈರಾಣು ಕಾರಣವಾಗಿದ್ದು, ಈ ಬಗ್ಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ತಿಳಿಸಿದರು.

Advertisement

ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಸಹಾಯಕರು ಹಾಗೂ ಶುಶ್ರೂಷಕರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಆರೋಗ್ಯಭಾಗ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರ ಸದುಪಯೋಗವಾಗಬೇಕಾದರೆ ಆರೋಗ್ಯ ಇಲಾಖೆಯ ಸಹಾಯಕರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದ ಜನರಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ರೋಟಾ ವೈರಸ್‌ಗೆ ಶೇ.10ರಷ್ಟು ಮಕ್ಕಳು ಬಲಿ: ಸುಮಾರು 5 ವರ್ಷದೊಳಗಿನ ಮಕ್ಕಳಲ್ಲಿ ಕಂಡು ಬರುವ ವಾಂತಿಭೇದಿಯೊಂದಿಗೆ ಜ್ವರಕ್ಕೆ ರೋಟಾ ವೈರಸ್‌ ವೈರಾಣು ಕಾರಣವಾಗಿದ್ದು, ಶೇ.40ರಷ್ಟು ಮಕ್ಕಳು ಪ್ರತಿವರ್ಷ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಈ ಪೈಕಿ ಶೇ.10 ರಷ್ಟು ಮಕ್ಕಳು ಪೋಷಕರು ಸಕಾಲಕ್ಕೆ ಚಿಕಿತ್ಸೆ ಕೊಡಿಸದ ಕಾರಣ ಮರಣ ಅಪ್ಪುತ್ತಿದ್ದಾರೆ. ಆದಕಾರಣ ಸರ್ಕಾರ ಈ ರೋಗವನ್ನು ಸಮರೋಪಾದಿಯಲ್ಲಿ ತಡೆಗಟ್ಟಲು ಮಕ್ಕಳು ಹುಟ್ಟಿದ 6 ವಾರದಲ್ಲಿ ಮತ್ತು 10 ವಾರದಲ್ಲಿ, 14ನೇ ವಾರದಲ್ಲಿ ಮೂರು ಹಂತದಲ್ಲಿ ಉಚಿತವಾಗಿ ಲಸಿಕೆಯನ್ನು ಹಾಕಲು ಆರೋಗ್ಯ ಸಹಾಯಕರಿಗೆ ಮತ್ತು ಶುಶ್ರೂಷಕರಿಗೆ ತರಬೇತಿ ಕಾರ್ಯಾಗಾರವನ್ನು ನೀಡುತ್ತಿದ್ದು, ಆಗಸ್ಟ್‌ ತಿಂಗಳಲ್ಲಿ ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದರು.

ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ವೈದ್ಯರೊಂದಿಗೆ ಸಹಾಯಕ ಸಿಬ್ಬಂದಿ, ಆಶಾ ಕಾರ್ಯಕರ್ತೆರು ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಸಹಕಾರ ನೀಡುವ ಮೂಲಕ ಈ ಜನಪರ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕೆಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ ಮಾತನಾಡಿ ಇತ್ತೀಚಿನ ದಿನಗಳಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ವಾಂತಿ ಭೇದಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಇದೊಂದು ರೋಟಾ ವೈರಸ್‌ ವೈರಾಣು ಮೂಲಕ ಹರಡುವ ಗಂಭೀರ ಸ್ವರೂಪದ ಸಾಂಕ್ರಾಮಿಕ ರೋಗವಾಗಿದೆ ಎಂದರು.

Advertisement

ಲಸಿಕೆ ಸರಬರಾಜು: ಸಣ್ಣಮಕ್ಕಳಲ್ಲಿ ವಾಂತಿ, ಭೇದಿ, ಜ್ವರ ಅಥವಾ ವಿಪರೀತ ಹೊಟ್ಟೆ ನೋವು, ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದು, ರೋಗದ ಲಕ್ಷಣವಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದೇ ಮಕ್ಕಳ ಸಾವು ಸಂಭವಿಸುತ್ತಿರುವ ಕಾರಣ ಇಂತಹ ಮಾರಕ ರೋಗವನ್ನು ನಿಯಂತ್ರಿಸಲು ಸರ್ಕಾರ ರೋಟಾ ಸಿಲ್ ಎಂಬ ಸ್ವದೇಶಿಯ ಲಸಿಕೆಯನ್ನು ಸರಬರಾಜು ಮಾಡುತ್ತಿದ್ದು, ಇದನ್ನು ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ಹೇಗೆ ಹಾಕಬೇಕೆಂಬ ಬಗ್ಗೆ 135 ಮಂದಿ ಆರೋಗ್ಯ ಸಹಾಯಕರು ಮತ್ತು ಶುಶ್ರೂಷಕರಿಗೆ 2 ಹಂತದಲ್ಲಿ ಇಂದು ತರಬೇತಿ ಕಾರ್ಯಗಾರವನ್ನು ನಡೆಸುತ್ತಿದ್ದು, ಮುಂದಿನ ಆಗಸ್ಟ್‌ ತಿಂಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ ಇದರ ಸದುಪಯೋಗ ವನ್ನು ತಪ್ಪದೇ ಉಪಯೋಗಿಸಿ ಕೊಳ್ಳಬೇಕೆಂದು ಮಕ್ಕಳ ಪೋಷಕರಲ್ಲಿ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಹಿರೇಸಾದರಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಸುಹಾಸ್‌, ಶಶಿವಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ನೀತಿನ್‌ ಹಾಗೂ ಹಿರಿಯ ಆರೋಗ್ಯ ಸಹಾಯಕರಾದ ಜಬ್ಬೀರ್‌ ಪಾಷಾ, ಮಾಲತಿ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next