ಹಾವೇರಿ: ಮಹಾಮಾರಿ ಕೊರೊನಾ ಆರ್ಭಟದಿಂದ ಆತಂಕಕ್ಕೀಡಾಗಿದ್ದ ಏಲಕ್ಕಿ ನಾಡು ಹಾವೇರಿಯಲ್ಲಿ ಕೋವಿಡ್-19 ಲಸಿಕಾರಣದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ಆದರೆ, ಸೋಂಕಿನ ವಿರುದ್ಧ ಜೀವರಕ್ಷಕ ಎನಿಸಿರುವ ಕೋವಿಡ್ ಲಸಿಕೆಗಳ ಅಭಾವ ತಲೆದೋರುತ್ತಿದ್ದು, ನಿತ್ಯ ಜನರು ಲಸಿಕೆಗಾಗಿ ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಜನವರಿ 16ರಿಂದಲೇ ಕೋವಿಡ್ ವ್ಯಾಕ್ಸಿನ್ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆರಂಭದಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದ ಜನರು ಎರಡನೇ ಅಲೆ ಆರಂಭವಾದ ಬಳಿಕ ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ. ಆದರೆ ಈಗ ಬೇಡಿಕೆಯಷ್ಟು ಲಸಿಕೆ ಪೂರೈಕೆಯಾಗದ ಕಾರಣ ಜನರು ಲಸಿಕಾ ಕೇಂದ್ರಗಳಿಗೆ ಎಡತಾಕುವಂತಾಗಿದೆ.
ಲಸಿಕಾ ಪ್ರಕ್ರಿಯೆ ನೀರಸ: ಜಿಲ್ಲೆಗೆ ಬೇಡಿಕೆಯಷ್ಟು ಲಸಿಕೆ ಪೂರೈಕೆಯಾಗದಿರುವ ಹಿನ್ನೆಲೆಯಲ್ಲಿ ಲಸಿಕಾಕರಣ ನಿಧಾನಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯಲ್ಲಿ 18 ಲಕÒ ಜನಸಂಖ್ಯೆಯಿದ್ದು, ಇದರಲ್ಲಿ ಸುಮಾರು 12 ಲಕ್ಷ ಜನರು 18 ವರ್ಷ ಮೇಲ್ಪಟ್ಟವರಾಗಿದ್ದು, ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಆದರೆ ಜು.9ರವರೆಗೆ 3,60,479 ಡೋಸ್ ಲಸಿಕೆ ನೀಡಲಾಗಿದೆ. ಅದರಲ್ಲಿ 2,02,124 ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದರೆ, 58,355 ಜನರಿಗೆ ಎರಡನೇ ಡೋಸ್ ಲಸಿಕೆ ದೊರೆತಿದೆ. ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆದವರು ಎರಡನೇ ಡೋಸ್ ಪಡೆಯಲು ಕೆಲ ತಿಂಗಳೇ ಕಾಯುವಂತಾಗಿದೆ. ಕೋವ್ಯಾಕ್ಸಿನ್ ಪೂರೈಕೆ ಜಿಲ್ಲೆಗೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಒಂದು ಕೇಂದ್ರದಲ್ಲಿ ಮಾತ್ರ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 228 ಲಸಿಕಾ ಕೇಂದ್ರಗಳಿದ್ದರೂ ಎಲ್ಲ ಕೇಂದ್ರಗಳಲ್ಲಿ ನಿತ್ಯ ಲಸಿಕೆ ನೀಡುತ್ತಿಲ್ಲ. ಬೆಳಗಾವಿ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ಜಿಲ್ಲೆಗೆ ಪೂರೈಕೆಯಾಗುವ ಡೋಸ್ ಆಧಾರದ ಮೇಲೆ ಲಸಿಕಾ ಕೇಂದ್ರಗಳನ್ನು ಮಾಡಲಾಗುತ್ತಿದೆ. ಅಲ್ಲದೇ ಗರಿಷ್ಠ 100 ಡೋಸ್ ಮಾತ್ರ ಪ್ರತಿ ಲಸಿಕಾ ಕೇಂದ್ರಕ್ಕೆ ನೀಡುತ್ತಿರುವುದರಿಂದ ಮೊದಲು ಟೋಕನ್ ಪಡೆದವರಿಗಷ್ಟೇ ಲಸಿಕೆ ಸಿಗುತ್ತಿದೆ. ಬೆಳಗ್ಗೆ ಬೇಗ ಬಂದು ಟೋಕನ್ ಪಡೆಯುವವರಿಗೆ ಲಸಿಕೆ ಲಭ್ಯವಾಗುತ್ತಿದೆ. ಇದರಿಂದ ಲಸಿಕಾ ಕೇಂದ್ರದ ಎದುರು ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದೆ. ಕೆಲವರು ನಾಲ್ಕಾರು ದಿನಗಳ ಕಾಲ ಅಡ್ಡಾಡಿದರೂ ಟೋಕನ್ ಪಡೆಯಲು ಸಾಧ್ಯವಾಗದೇ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.
18 ಮೇಲ್ಪಟ್ಟ 130 ಜನರಿಗೆ ಸೆಕೆಂಡ್ ಡೋಸ್: ಜಿಲ್ಲೆಯಲ್ಲಿ 18ರಿಂದ 44 ವರ್ಷ ವಯೋಮಿತಿಯ 130 ಜನರಿಗೆ ಮಾತ್ರ ಇದುವರೆಗೆ ಎರಡನೇ ಡೋಸ್ ಲಸಿಕೆ ಸಿಕ್ಕಿದೆ. ಬ್ಯಾಡಗಿ-6, ಹಾನಗಲ್ಲ-12, ಹಾವೇರಿ-72, ಹಿರೇಕೆರೂರು-2, ರಾಣಿಬೆನ್ನೂರು-11, ಸವಣೂರು-17, ಶಿಗ್ಗಾವಿ-10 ಜನರು ಸೇರಿ ಒಟ್ಟು 130 ಜನರಿಗೆ ಮಾತ್ರ ಎರಡನೇ ಡೋಸ್ ಲಸಿಕೆ ದೊರೆತಿದೆ. ಶೇ.85 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಾಗೂ ಶೇ.67 ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕಾಕರಣ ಪೂರ್ಣಗೊಂಡಿದೆ. ಮುಂಚೂಣಿ ವಾರಿಯರ್ಸ್ ಪೈಕಿ ಶೇ.84 ಜನರಿಗೆ ಮೊದಲ ಡೋಸ್, ಶೇ.47 ವಾರಿಯರ್ಸ್‌ಗೆ 2ನೇ ಡೋಸ್ ಲಸಿಕೆ ಹಾಕಲಾಗಿದೆ. 45ರಿಂದ 59 ವರ್ಷದವರಿಗೆ ಮೊದಲ ಡೋಸ್ ಶೇ.36, 2ನೇ ಡೋಸ್ ಶೇ.23 ಮಾತ್ರ ಪ್ರಗತಿಯಾಗಿದೆ.
ಇನ್ನು 60 ವರ್ಷ ಮೇಲ್ಪಟ್ಟವರಿಗೆ ಶೇ.59 ಮೊದಲ ಡೋಸ್ ಮತ್ತು ಶೇ.31 ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. 18ರಿಂದ 44ರೊಳಗಿನ ಶೇ.13 ಜನರಿಗೆ ಮಾತ್ರ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯಲು ಯುವ ಜನತೆ ಉತ್ಸುಕತೆ ತೋರುತ್ತಿದ್ದಾರೆ. ಆದರೆ ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ನೀಡಲಾಗುತ್ತಿಲ್ಲ. ಆದರೆ ಜಿಲ್ಲೆಗೆ ಪೂರೈಕೆಯಾದ ಲಸಿಕೆಗಳನ್ನು ಬಳಸಿಕೊಳ್ಳುವಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಇದುವರೆಗೆ ಜಿಲ್ಲೆಯಲ್ಲಿ 3.60 ಲಕÒ ಡೋಸ್ ನೀಡಲಾಗಿದ್ದು, ಶೇ.103 ಪ್ರಗತಿಯಾಗಿದೆ. ಪ್ರತಿ ವೈಯಲ್‌ನಲ್ಲಿ ಬರುವ ಹೆಚ್ಚುವರಿ ಹನಿಯನ್ನೂ ಬಳಸಿಕೊಂಡು ಈ ಪ್ರಗತಿ ಸಾಧಿಸಲಾಗಿದೆ.