ಬನಹಟ್ಟಿ : 60 ವರ್ಷ ಮೇಲ್ಪಟ್ಟ ಮತ್ತು 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆ ಇರುವ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ರೋಗದ ತೀವ್ರತೆ ಕಡಿಮೆಯಾಗಲಿದೆ. ನಿಧನ ಹೊಂದುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಜಿಲ್ಲೆಯ ಜನರಲ್ಲಿ ವಿನಂತಿ ಮಾಡಿಕೊಂಡರು.
ಅವರು ಬುಧವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು. ಕಳೆದ ಬಾರಿ ಕೋವಿಡ್-19 ಕುರಿತು ಕೈಗೊಳ್ಳಲಾದ ಮುಂಜಾಗ್ರತ ಕ್ರಮಗಳನ್ನು ಈ ಬಾರಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಲಾಗುತ್ತಿದೆ.
ಪ್ರತಿ ನಿತ್ಯ 10 ರಿಂದ 12 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ಒಂದು ಕಾರ್ಯಕ್ರಮದಲ್ಲಿ ಬುಧವಾರದಿಂದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸೇವೆಯನ್ನು ಬಳಸಿಕೊಳ್ಳಲಾಗಿದೆ.
ಪ್ರತಿ ನಿತ್ಯ ಕಾರ್ಯಕರ್ತೆಯರು ಹತ್ತು ಜನರಿಗೆ ಲಸಿಕೆ ಹಾಕಿಸಬೇಕು. ಅದೇ ರೀತಿಯಾಗಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಗೆ ಮಾಡಲಾಗುತ್ತಿದೆ. ಲಸಿಕೆ ಪಡೆಯಲು ಬಂದವರಿಗೂ ಹಾಗೂ ಆಸ್ಪತ್ರೆಗೆ ಬರುವ ಹೊರ ರೋಗಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಬುಧವಾರ ಮಧ್ಯಾಹ್ನದಿಂದ ಪ್ರತಿ ನಿತ್ಯ ಜಿಲ್ಲೆಯಲ್ಲಿ ಪ್ರತಿನಿತ್ಯ 3600 ಪರೀಕ್ಷೆಗಳ ಗುರಿ ಹಾಕಿಕೊಳ್ಳಲಾಗಿದೆ.
ಪಾಸಿಟಿವ್ ಪ್ರಕರಣಗಳು ಕಂಡು ಬರುವ ಪ್ರದೇಶದಲ್ಲಿ ಜನರ ಕೋವಿಡ್ ಪರೀಕ್ಷೆಗಳನ್ನು ಕೂಡ ನಡೆಸಲಾಗುತ್ತಿದೆ. ಪಾಸಿಟಿವ್ ಕೇಸ್ ಬಂದ ಸಂದರ್ಭದಲ್ಲಿ ಟ್ರ್ಯಾಕಿಂಗ್, ಟ್ರೇಸಿಂಗ್ ಮಿನಿ ಕಂಟೈನ್ಮೆಂಟ್ ಝೋನ್ ಮಾಡಲಾಗುವುದರ ಜೊತೆಗೆ ರೋಗದ ಲಕ್ಷಣಗಳು ಕಂಡು ಬಂದರೆ ಅಂಥವರಿಗೆ ಚಿಕಿತ್ಸೆಯನ್ನು ಕೊಡುವ ಕ್ರಮಗಳನ್ನು ಕೈಗೊಳ್ಳಾಗುವುದು ಎಂದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ್ ಪ್ರಶಾಂತ ಚನಗೊಂಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಗ್ರೇಡ್-2 ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನ್ಯಾಮಗೌಡ, ವೈದ್ಯಾಧಿಕಾರಿಳಾದ ವೀರೇಶ ಹುಡೇದಮನಿ ಮತ್ತು ಡಾ.ನದಾಫ್, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಸಹಾಯಕ ಆರೋಗ್ಯಾಧಿಕಾರಿ ಅಪ್ಪಾಜಿ ಹೂಗಾರ, ಶ್ರೀಶೈಲ ಬುರ್ಲಿ ಇದ್ದರು