ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಲಸಿಕೆ 2021ರ 2 ಅಥವಾ 3ನೇ ತ್ತೈಮಾಸಿಕದಲ್ಲಿ ಸಿಗುವ ಸಾಧ್ಯತೆ ಇದೆ. ಹೀಗೆಂದು ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಅದಾರ್ ಪೂನಾವಾಲಾ ಹೇಳಿದ್ದಾರೆ. ವರ್ಷಾಂತ್ಯಕ್ಕೆ ಲಸಿಕೆ ಸಿದ್ಧವಾಗಬಹುದಾದರೂ, 100 ಮಿಲಿಯ ಡೋಸ್‌ಗಳ ಲಸಿಕೆ ಮುಂದಿನ ವರ್ಷದ 2 , 3ನೇ ತ್ತೈಮಾಸಿಕದ ವೇಳೆಗೆ ಲಭ್ಯವಾಗಬಹುದು ಎಂದು ಹೇಳಿದ್ದಾರೆ.
ಆಕ್ಸ್‌ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಜಂಟಿಯಾಗಿ ಸಂಶೋಧನೆ ನಡೆಸುತ್ತಿರುವ ಕೊರೊನಾ ಲಸಿಕೆಯಲ್ಲಿ ಭಾರತದಲ್ಲಿ ಉತ್ಪಾದನೆಯ ಹೊಣೆಯನ್ನು ಪುಣೆಯ ಸೀರಂ ಇನ್ಸಿಟ್ಟಿಟ್ಯೂಟ್ ಆಫ್ ಇಂಡಿಯಾ ಹೊತ್ತುಕೊಂಡಿದೆ. “ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಲಸಿಕೆಯ ಪ್ರಯೋಗಗಳು ನಡೆಯುತ್ತಿವೆ. ಸದ್ಯದ ವರದಿಗಳು ಅದು ಸುರಕ್ಷಿತ ಎಂದು ದೃಢಪಡಿಸಿವೆ. ಬಳಿಕ ಭಾರತ ಸರಕಾರದ ಔಷಧ ಮಹಾನಿಯಂತ್ರಣಾಧಿಕಾರಿಗೆ ತುರ್ತು ಬಳಕೆಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ ಅಂತ್ಯಕ್ಕೆ ಲಸಿಕೆ ಸಿದ್ಧವಾದರೂ, 100 ಮಿಲಿಯ ಡೋಸ್‌ಗಳು 2021ರ 2 ಅಥವಾ 3ನೇ ತ್ತೈಮಾಸಿಕದಲ್ಲಿ ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ ಅದಾರ್ ಪೂನಾವಾಲಾ.
ಸದ್ಯ ಹೇಳಲಾಗದು: ಎರಡು ಡೋಸ್‌ಗಳ ನಡುವೆ 28 ದಿನಗಳ ಅವಧಿ ಬೇಕು ಎಂದು ಹೇಳಿರುವ ಅವರು, ಅದರ ಬೆಲೆಯ ಬಗ್ಗೆ ಸದ್ಯ ನಿರ್ಧರಿಸಲಾಗದು ಎಂದರು ಪೂನಾವಾಲಾ. ಈ ಬಗ್ಗೆ ಇನ್ನೂ ಸರಕಾರದ ಜತೆಗೆ ಮಾತುಕತೆಗಳು ನಡೆಯುತ್ತಿವೆ ಎಂದಿದ್ದಾರೆ.
ವಿಶ್ವದಲ್ಲಿಯೇ ಕನಿಷ್ಠ: ದೇಶದಲ್ಲಿ ಸೋಂಕು ಪತ್ತೆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ದೃಢಪಡುವ ಪ್ರಕರಣಗಳ ಸಂಖ್ಯೆ ಕಡಿಮೆ. ಅಮೆರಿಕ, ಬ್ರೆಜಿಲ್, ಫ್ರಾನ್ಸ್, ಯು.ಕೆ. ರಷ್ಯಾ, ದಕ್ಷಿಣ ಆಫ್ರಿಕಾಗಳಲ್ಲಿ ಈ ಅಂಶ ಹೆಚ್ಚು ಎಂದು ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ತಿಳಿಸಿದೆ.
45 ಸಾವಿರಕ್ಕಿಂತ ಕಡಿಮೆ: ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಬುಧವಾರ ಬೆಳಗ್ಗೆ 8 ಗಂಟೆ ವರೆಗಿನ ಅವಧಿಯಲ್ಲಿ 43, 893 ಕೇಸುಗಳು ದೃಢಪಟ್ಟಿವೆ ಮತ್ತು 508 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ ಮತ್ತೂಮ್ಮೆ 45 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದೃಢಗೊಂಡಿರುವುದು ಗಮನಾರ್ಹ. ಸೋಂಕಿನಿಂದಾಗಿ ಭಾರತದಲ್ಲಿ 1,20, 010 ಮಂದಿ ಅಸುನೀಗಿದ್ದಾರೆ. ದೇಶದ ಗುಣಪ್ರಮಾಣ ಶೇ.90.85 ಆಗಿದೆ.