ಜೆರುಸಲೆಂ: ಗುಣಪಡಿಸುವುದಕ್ಕೇ ಆಗದು ಎನ್ನಲಾಗುವ ಎಚ್‌ಐವಿ-ಏಡ್ಸ್ ಕಾಯಿಲೆಯನ್ನು ಗುಣಪಡಿಸಲು ಇದೀಗ ಇಸ್ರೇಲ್‌ನ ವಿಜ್ಞಾನಿಗಳು ಹೊಸದೊಂದು ಲಸಿಕೆ ಕಂಡು ಹಿಡಿದಿದ್ದಾರೆ.
ಕೇವಲ ಒಂದೇ ಡೋಸ್ ಲಸಿಕೆ ಪಡೆದರೂ ಸೋಂಕಿತರು ಸೋಂಕಿನಿಂದ ಚೇತರಿಸಿಕೊಳ್ಳಬಹುದು ಎಂದು ಇಸ್ರೇಲ್‌ನ ಟೆಲ್ ಅವೀವ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ನ್ಯೂರೋ ಬಯಾಲಜಿ, ಬಯೋಕೆಮಿಸ್ಟ್ರಿ ಮತ್ತು ಬಯೋಫಿಸಿಕ್ಸ್‌ನ ವಿಜ್ಞಾನಿಗಳು ತಿಳಿಸಿದ್ದಾರೆ.
ಮನುಷ್ಯನ ಮೂಳೆಗಳಲ್ಲಿರುವ ಅಸ್ಥಿಮಜ್ಜೆಯೊಳಗಿನ “ಟೈಪ್-ಬಿ’ ಬಿಳಿರಕ್ತಕಣಗಳನ್ನು ಮಾರ್ಪಾಟುಗೊಳಿಸಿ, ಎಚ್‌ಐವಿ ವೈರಾಣುಗಳು ದೇಹ ಪ್ರವೇಶಿಸುವುದಕ್ಕೆ ತಡೆಯೊಡ್ಡುವಂಥ ಪ್ರತಿಕಾಯಗಳನ್ನು ಸೃಷ್ಟಿಸಿ, ಈ ಲಸಿಕೆಯನ್ನು ತಯಾರಿಸಲಾಗಿದೆ. ಈ ಕುರಿತ ವರದಿಯನ್ನು ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ “ನೇಚರ್’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.
ಹೇಗೆ ಕೆಲಸ ಮಾಡುತ್ತದೆ?: “ಟೈಪ್ ಬಿ’ ಬಿಳಿ ರಕ್ತ ಕಣಗಳು ದುಗ್ಧ ನಾಳ, ರಕ್ತ ಸೇರಿ ವಿವಿಧ ಭಾಗಗಳಿಗೆ ತಲುಪುತ್ತದೆ. ಎಚ್‌ಐವಿ ವೈರಸ್‌ನೊಂದಿಗೆ ಹೋರಾಡುವ ಈ ಕಣಗಳು, ವೈರಸ್ ಅನ್ನು ತಡೆಯುವಲ್ಲಿ ಯಶಸ್ವಿ ಯಾಗುತ್ತದೆ. ಒಬ್ಬ ಮನುಷ್ಯನಿಗೆ ಈ ಲಸಿಕೆಯ ಒಂದು ಡೋಸ್ ಸಾಕು ಎಂದು ವೈದ್ಯರು ತಿಳಿಸಿದ್ದಾರೆ.
ಹಲವು ಸೋಂಕನ್ನೂ ತಡೆಗಟ್ಟಬಲ್ಲದು!: ಅದಷ್ಟೇ ಅಲ್ಲದೆ ಈ ಲಸಿಕೆಯು ಕೇವಲ ಎಚ್‌ಐವಿ ಸೋಂಕಿಗೆ ಪರಿಣಾಮಕಾರಿಯಾಗದೆ, ಕ್ಯಾನ್ಸರ್‌ನಂತಹ ಕೆಲವು ದೊಡ್ಡ ಕಾಯಿಲೆ ಗಳಿಗೂ ಹಾಗೂ ಸಾಂಕ್ರಾಮಿಕ ಕಾಯಿಲೆಗಳಿಗೂ ಪರಿಣಾಮಕಾರಿ ಎಂದು ನೇಚರ್‌ನಲ್ಲಿ ಪ್ರಕಟಿಸಲಾಗಿರುವ ವರದಿಯಲ್ಲಿ ತಿಳಿಸಲಾಗಿದೆ.