ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜ.28 ರಿಂದ ಫೆ.16ರವರೆಗೂ 15ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಗ್ರಾಮಗಳಿಗೆ ಲಸಿಕಾ ಹಾಕಲು ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಆಗಮಿಸುವ ವೇಳೆ ರೈತರು ಸಹಕಾರ ನೀಡುವುದರ ಮೂಲಕ ಕಾಲುಬಾಯಿ ರೋಗವನ್ನು ನಿಯಂತ್ರಿಸಲು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮನವಿ ಮಾಡಿದರು.
ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಸುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಪಶು ಸಂಗೋಪನಾ ಇಲಾಖೆ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.
ಪಶುಪಾಲನಾ ಇಲಾಖೆ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದೊಂದಿಗೆ 15ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಒಟ್ಟು 20 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟು 2.21 ಲಕ್ಷ ರಾಸುಗಳಿಗೆ ಲಸಿಕೆ: ಜಿಲ್ಲೆಯಲ್ಲಿ ದನ, ಎಮ್ಮೆ, ಹಂದಿ ಸೇರಿ ಒಟ್ಟು 2,21,671 ಜಾನುವಾರುಗಳಿದ್ದು, ಲಸಿಕೆ ಹಾಕಲು 26 ತಂಡ ರಚಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಜ.28 ರಿಂದ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಬಾಗೇಪಲ್ಲಿ ತಾಲೂಕಿಗೆ 04 ತಂಡಗಳು ಭೇಟಿ ನೀಡಲಿದ್ದು, ಜ.28 ರಿಂದ ಫೆ.11 ರವರೆಗೆ ಹಾಗೂ ಚಿಕ್ಕಬಳ್ಳಾಪುರಕ್ಕೆ 05 ತಂಡಗಳು ಭೇಟಿ ನೀಡಲಿದ್ದು, ಫೆ.13 ರವರೆಗೆ, ಚಿಂತಾಮಣಿ ತಾಲೂಕಿಗೆ ಒಟ್ಟು 5 ತಂಡ, ಶಿಡ್ಲಘಟ್ಟಕ್ಕೆ 4 ತಂಡ ಭೇಟಿ ನೀಡಲಿದ್ದು, ಫೆ.16 ರವರೆಗೆ ಲಸಿಕೆ ಹಾಕಲಿದ್ದಾರೆ. ಗುಡಿಬಂಡೆ ತಾಲೂಕಿಗೆ 2 ತಂಡ ಭೇಟಿ ನೀಡಲಿದ್ದು, ಫೆ.11 ರವರೆಗೆ ಲಸಿಕೆ ಹಾಕಲಿದ್ದಾರೆ ಎಂದು ತಿಳಿಸಿ ದರು. ಸುದ್ದಿಗೋಷ್ಠಿಯಲ್ಲಿ ಕೋಲಾರ-ಚಿಕ್ಕಬಳ್ಳಾ ಪುರ ಹಾಲು ಒಕ್ಕೂಟದ ವ್ಯವಸ್ಥಾಪಕರು ಸೇರಿದಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
14ನೇ ಸುತ್ತಿನಲ್ಲಿ ಶೇ.94 ರಷ್ಟು ಪ್ರಗತಿ ಸಾಧನೆ
ಪಶುಪಾಲನಾ ಇಲಾಖೆ ಉಪನಿರ್ದೇಶಕ ಮಧುರನಾಥ್‌ರೆಡ್ಡಿ ಮಾತನಾಡಿ, ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ವಾಕ್ ಇನ್ ಕೂಲರ್‌ನಲ್ಲಿ 1.07 ಲಕ್ಷ ಡೋಸ್ ಲಸಿಕೆ ಹಾಗೂ ಚಿಂತಾಮಣಿ ತಾಲೂಕಿನಲ್ಲಿ 1.07 ಲಕ್ಷ ಡೋಸ್ ಲಸಿಕೆ ಸೇರಿ ಒಟ್ಟು 2.14 ಲಕ್ಷ ಡೋಸ್ ಲಸಿಕೆಯನ್ನು ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು. ಲಸಿಕಾದಾರರು ಸೇರಿ ಒಟ್ಟು 208 ತಾಂತ್ರಿಕ ಮತ್ತು ಅರೆ ತಾಂತ್ರಿಕ ಸಿಬ್ಬಂದಿಯನ್ನು ತೊಡಗಿಸಲಾಗಿದೆ. 14ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮದಲ್ಲಿ 2,07 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಶೇ.94ರಷ್ಟು ಪ್ರಗತಿ ಸಾಧಿಸಲಾಗಿತ್ತು. ಈ ಕಾರ್ಯಕ್ರಮವು ಆಗಸ್ಟ್ 2011 ರಿಂದ ಚಾಲ್ತಿಯಲ್ಲಿದ್ದು, ಇದುವರೆಗೆ 14 ಸುತ್ತು ಲಸಿಕಾ ಕಾರ್ಯಕ್ರಮ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.