ಲಂಡನ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೋವಿಡ್ ಸೋಂಕಿತ ಕೋತಿಗಳ ಮೇಲೆ ನಡೆಸಿದ ಲಸಿಕೆ ಪ್ರಯೋಗ ಪ್ರಾಥಮಿಕ ಹಂತದಲ್ಲಿ ಯಶಸ್ವಿಯಾಗಿದೆ.
ಈ ಸಫಲತೆ ಆಧರಿಸಿ, ಮನುಷ್ಯರ ಮೇಲೆ ಔಷಧ ಪ್ರಯೋಗಕ್ಕೆ ಮುಂದಾಗಿದೆ. ಮನುಷ್ಯನಲ್ಲಿನ ಕೋವಿಡ್ ಸೋಂಕನ್ನು, 6 ರೀಸಸ್ ಮಕಾಕ್‌ಗಳಿಗೆ ದಾಟಿಸಿ, ಪ್ರಯೋಗ ನಡೆಸಲಾಗಿತ್ತು.
ಭಾರತೀಯ ಮೂಲದ ಈ ಕೋತಿಗಳು ತಮ್ಮ ಹೆಚ್ಚಿನ ಜೀನ್‌ಗಳನ್ನು ಮನುಷ್ಯನೊಂದಿಗೆ ಹಂಚಿಕೊಂಡಿವೆ. ಮನುಷ್ಯನಿಗೆ ನೀಡುವ ಲಸಿಕೆಯ ಅರ್ಧ ಪ್ರಮಾಣವನ್ನು ತಜ್ಞರು ಕೋತಿಗಳಿಗೆ ನೀಡಿದ್ದರು.
ಲಸಿಕೆ ಪಡೆದ 14 ದಿನಗಳ ಬಳಿಕ, ಕೋತಿಗಳ ದೇಹದಲ್ಲಿ ಪ್ರತಿಕಾಯಗಳ ಸಂಖ್ಯೆ ಹೆಚ್ಚಾಗಿದ್ದವು. ಅಲ್ಲದೆ ನ್ಯುಮೋನಿಯಾ, ಶ್ವಾಸಕೋಶದಲ್ಲಿನ ಉಸಿರಾಟದ ತೊಂದರೆಯೂ ನಿರ್ಮೂಲನೆಯಾಗಿತ್ತು.
‘ಕೋವಿಡ್ ಲಸಿಕೆ ಯಶಸ್ವಿಯಾಗಿದೆ ಎಂದು ಈಗಲೇ ಹೇಳಲಾಗದು. ಇನ್ನು ಇದನ್ನು ಮನುಷ್ಯರ ಮೇಲೆ ಪ್ರಯೋಗಿಸಬೇಕಿದೆ. ಜೂನ್ ವೇಳೆಗೆ ನಿಖರ ಫಲಿತಾಂಶ ಸಿಕ್ಕರೆ, ಸೆಪ್ಟಂಬರ್‌ಗೆ ನಾವು ಮಾರುಕಟ್ಟೆಗೆ ಬಿಡಲು ನಿರ್ಧರಿಸುತ್ತೇವೆ’ ಎಂದು ವಿವಿಯ ತಜ್ಞರು ಹೇಳಿದ್ದಾರೆ.