Advertisement

ಹೊಸ ಸ್ವರೂಪದ ವಿರುದ್ಧ ಲಸಿಕೆ ಸಮರ್ಥ

11:32 PM Dec 26, 2020 | mahesh |

ಬೆಂಗಳೂರು/ಹೊಸದಿಲ್ಲಿ: ರೂಪಾಂತರಿ ಸೋಂಕು ಭಯಾನಕವಲ್ಲ. ವೈರಸ್‌ ರೂಪಾಂತರ (ಮ್ಯುಟೇಶನ್‌) ಸಹಜ ಪ್ರಕ್ರಿಯೆ. ಕೋವಿಡ್ ವೈರಾಣು ಈವರೆಗೆ ಪ್ರತೀ ತಿಂಗಳಿಗೆ ಎರಡರಂತೆ ರೂಪಾಂತರಗೊಳ್ಳುತ್ತ ಬಂದಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ ಬಳಕೆ ಆರಂಭಿಸಲಾದ ಮತ್ತು ಪ್ರಯೋಗ ಹಂತದಲ್ಲಿರುವ ಲಸಿಕೆ ಗಳು ವೈರಸ್‌ನ ಹೊಸ ಸ್ವರೂಪಗಳನ್ನು ಎದುರಿಸಲು ಕೂಡ ಸಮರ್ಥವಾಗಿವೆ ಎಂದು ಅಭಯ ನೀಡಿದ್ದಾರೆ. ಎಚ್ಚರಿಕೆ ವಹಿಸಿದರೆ ಸಾಕು ಎಂದಿದ್ದಾರೆ.

Advertisement

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರೂ ಆಗಿರುವ ಏಮ್ಸ್‌ ನಿರ್ದೇಶಕ ರಣದೀಪ್‌ ಗುಲೇರಿಯಾ ಈ ಕುರಿತು ಹೇಳಿದ್ದಾರೆ. ರೂಪಾಂತರದಿಂದ ಸೋಂಕಿನ ಲಕ್ಷಣಗಳಲ್ಲಿ ಆಗಲೀ, ಚಿಕಿತ್ಸಾ ವಿಧಾನದಲ್ಲಿ ಆಗಲೀ ಬದಲಾವಣೆ ಆಗಿಲ್ಲ. ಈಗಿನ ಎಲ್ಲ ಲಸಿಕೆ ರೂಪಾಂತರಿತ ವೈರಸ್‌ ವಿರುದ್ಧ ಪರಿಣಾಮಕಾರಿ ಆಗಿವೆ ಎಂದಿದ್ದಾರೆ. ರೂಪಾಂತರಿ ವೈರಸ್‌ ಹೆಚ್ಚು ವೇಗವಾಗಿ ಹಬ್ಬುವುದರಿಂದ ಮಾಸ್ಕ್ ಧರಿಸುವ, ಕೈ ಸ್ವಚ್ಛವಾಗಿಟ್ಟುಕೊಳ್ಳುವ ಎಚ್ಚರಿಕೆ ಅನುಸರಿಸಿದರೆ ಹಾನಿ ತಪ್ಪಿಸಬಹುದು ಎನ್ನುತ್ತಾರೆ ತಜ್ಞರು.

ಮುಂದೆ ರೂಪಾಂತರಕ್ಕೆ ತಕ್ಕ ಲಸಿಕೆ
ಸಾಮಾನ್ಯ ಫ್ಲ್ಯೂ, ಇನ್‌ಫ್ಲ್ಯೂ ಯೆಂಜಾ (ವಿಷಮ ಶೀತಜ್ವರ) ಉಂಟು ಮಾಡುವ ವೈರಸ್‌ಗಳು ಕೂಡ ಪ್ರತೀ ವರ್ಷ ಬದಲಾಗುತ್ತವೆ. ಈ ಬದಲಾವಣೆಗಳಿಗೆ ತಕ್ಕಂತೆ ಔಷಧ ಕಂಪೆನಿಗಳು ಲಸಿಕೆಗಳಲ್ಲೂ ಬದಲಾವಣೆ ತರುತ್ತವೆ. ಮುಂದೆ ಕೊರೊನಾ ವೈರಸ್‌ ಹೆಚ್ಚು ರೂಪಾಂತರ ಹೊಂದಿದರೆ, ಅದಕ್ಕೆ ತಕ್ಕಂತೆ ಲಸಿಕೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಮಣಿಪಾಲ್‌ ಆಸ್ಪತ್ರೆಗಳ ಅಧ್ಯಕ್ಷ ಡಾ| ಸುದರ್ಶನ್‌ ಬಲ್ಲಾಳ್‌ ಹೇಳಿದ್ದಾರೆ.

ರೂಪಾಂತರ ಫ‌ಲಿತಾಂಶ ನಾಳೆ
ರೂಪಾಂತರಿತ ವೈರಸ್‌ ರಾಜ್ಯಕ್ಕೆ ಕಾಲಿಟ್ಟಿದೆಯೇ ಎಂಬುದು ಸೋಮವಾರ ಖಚಿತವಾಗಲಿದೆ. ಬ್ರಿಟನ್‌ನಿಂದ ರಾಜ್ಯಕ್ಕೆ ಆಗಮಿಸಿ ರುವ 2,127 ಪ್ರಯಾಣಿಕರ ಪೈಕಿ 23 ಮಂದಿಗೆ ಸೋಂಕು ದೃಢ ಪಟ್ಟಿದ್ದು, ಅವರಿಗೆ ತಗಲಿರುವುದು ರೂಪಾಂತರಿತ ವೈರಸ್‌ ಹೌದೇ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ವೈರಸ್‌ನ ವಂಶವಾಹಿ ಪರೀಕ್ಷೆ (ಜೆನೆಟಿಕ್‌ ಸೀಕ್ವೆನ್ಸಿಂಗ್‌) ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ನಡೆಯುತ್ತಿದೆ. ಇದರ ವರದಿ ಸೋಮವಾರ ಸಿಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮೂರನೇ ಹಂತದ ಪ್ರಯೋಗದಲ್ಲಿರುವ ಲಸಿಕೆಗಳು ಪೂರ್ಣ ಪ್ರಮಾಣ ದಲ್ಲಿ ವೈರಸ್‌ ವಿರುದ್ಧ ಹೋರಾಡುವ ಅಂಶ ಹೊಂದಿವೆ. ಬ್ರಿಟನ್‌ನ ರೂಪಾಂತರಿತ ವೈರಸ್‌ ವಿರುದ್ಧವೂ ಪರಿಣಾಮಕಾರಿಯಾಗಿವೆ. ಈ ವೈರಸ್‌ ರಾಜ್ಯ ಪ್ರವೇಶಿಸಿದರೂ ಹೆಚ್ಚು ಸಾವುನೋವು ಸಂಭವಿಸದು.
– ಡಾ| ಸಿ.ಎನ್‌. ಮಂಜುನಾಥ್‌, ಜಯದೇವ ಹೃದ್ರೋಗ ಸಂಶೋಧನ ಸಂಸ್ಥೆಯ ನಿರ್ದೇಶಕ

Advertisement

ಫೈಜರ್‌, ಆಸ್ಟ್ರಾಜೆನೆಕಾ, ಕೊವ್ಯಾಕ್ಸಿನ್‌ ಸಹಿತ ಸದ್ಯ ಅಭಿವೃದ್ಧಿಪಡಿಸಿರುವ ಲಸಿಕೆಗಳನ್ನು ರೂಪಾಂತರಿತ ವೈರಸ್‌ ವಿರುದ್ಧವೂ ಬಳಸಬಹುದೇ ಎಂಬ ಕುರಿತು ಸಾಕಷ್ಟು ವಿಚಾರ -ವಿಮರ್ಶೆಗಳಾಗಿವೆ. ವಂಶವಾಹಿಯಲ್ಲಿ ಹೆಚ್ಚು ರೂಪಾಂತರವಾಗದ ಕಾರಣ ಈಗಿರುವ ಲಸಿಕೆಯೇ ಪರಿಣಾಮಕಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
– ಡಾ| ಸುದರ್ಶನ್‌ ಬಲ್ಲಾಳ್‌, ಮಣಿಪಾಲ್‌ ಆಸ್ಪತ್ರೆಗಳ ಅಧ್ಯಕ್ಷ

ಹೊಸ ಸ್ವರೂಪದ ಸೋಂಕು ಅತ್ಯಂತ ಗಂಭೀರವೇ ಆಗಿದ್ದರೆ ಇಷ್ಟರಲ್ಲೇ ಅದು ನಮಗೆ ಅರಿವಿಗೆ ಬರುತ್ತಿತ್ತು. ಪ್ರಸ್ತುತ ಚಾಲ್ತಿಯಲ್ಲಿರುವ ಸೋಂಕಿನ ಬಹುತೇಕ ಸ್ವರೂಪಗಳ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಹೊಸ ರೂಪಾಂತರಗಳ ಮೇಲೂ ಈ ಲಸಿಕೆಗಳು ಪರಿಣಾಮ ಬೀರುತ್ತಿವೆ.
– ಇವಾನ್‌ ಬಿರ್ನೆ, ಐರೋಪ್ಯ ಮಾಲೆಕ್ಯುಲಾರ್‌ ಬಯಾಲಜಿ ಲ್ಯಾಬೊರೇಟರಿಯ ಉಪ ಪ್ರಧಾನ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next