ದೇಶದಲ್ಲಿ ಕೋವಿಡ್ ನಿರೋಧಕ ಲಸಿಕಾ ಅಭಿಯಾನಕ್ಕೆ ರವಿ ವಾರ ವರ್ಷ ತುಂಬಿದೆ. ಕೋವಿಡ್ ಸಾಂಕ್ರಾಮಿಕ ಇನ್ನಿಲ್ಲದಂತೆ ಜನರನ್ನು ಕಾಡುತ್ತಿರುವಾಗಲೇ ವೈದ್ಯಕೀಯ ಸಂಶೋಧಕರು ನಿರಂತರವಾಗಿ ಅಧ್ಯಯನ ನಡೆಸಿ ಲಸಿಕೆಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಹಲವು ಹಂತದ ಪರೀಕ್ಷೆಯ ಬಳಿಕ ಅಂತಿಮವಾಗಿ ಲಸಿಕೆಯನ್ನು ಜನರಿಗೆ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. 2021ರ ಜ.16ರಂದು ಆರಂಭವಾದ ಲಸಿಕಾ ಅಭಿಯಾನವನ್ನು ಅತ್ಯಂತ ವ್ಯವಸ್ಥಿತವಾಗಿ ಹಂತಹಂತವಾಗಿ ನಡೆಸುವ ಮೂಲಕ ಅಲ್ಪ ಅವಧಿಯಲ್ಲಿ ದೇಶ ಅಮೋಘ ಸಾಧನೆಗೈದಿದೆ.
ಲಸಿಕಾ ಅಭಿಯಾನ ಒಂದು ವರ್ಷ ಪೂರ್ಣಗೊಳಿಸಿದ ವೇಳೆ ದೇಶದ ವಯಸ್ಕ ಜನಸಂಖ್ಯೆಯಲ್ಲಿ ಶೇ.93ರಷ್ಟು ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದರೆ ಶೇ.69.8ಕ್ಕೂ ಅಧಿಕ ಮಂದಿ ನಿಗದಿತ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಮುಂದುವರಿದ ಮತ್ತು ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದಲ್ಲಿ ದೇಶ ಲಸಿಕೆ ನೀಡಿಕೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. 130 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಭಾರತದಂತಹ ದೇಶದಲ್ಲಿ ವರ್ಷವೊಂದರಲ್ಲಿ ಇಷ್ಟೊಂದು ಬೃಹತ್ ಸಂಖ್ಯೆಯ ಜನರಿಗೆ ಲಸಿಕೆ ನೀಡಿರುವುದು ಚರಿತ್ರಾರ್ಹ ಸಾಧನೆಯೇ ಸರಿ. ಇದರ ಸವಿನೆನಪಿಗಾಗಿ ಕೇಂದ್ರ ರವಿವಾರ ಅಂಚೆಚೀಟಿಯೊಂದನ್ನು ಬಿಡುಗಡೆ ಮಾಡಿದೆ.
ಎ.1ರವರೆಗೆ 10 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾದರೆ ಜೂ. 25ರ ವೇಳೆಗೆ ಇದು 25 ಕೋಟಿ, ಆ.6ಕ್ಕೆ 50 ಕೋಟಿ ಮತ್ತು ಸೆ.13ಕ್ಕೆ 75 ಕೋಟಿ ಡೋಸ್‌ಗಳ ಗಡಿಯನ್ನು ದಾಟಿತು. 9 ತಿಂಗಳುಗಳಿಗೂ ಕಡಿಮೆ ಅವಧಿಯಲ್ಲಿ ಅಂದರೆ ಕಳೆದ ವರ್ಷದ ಅಕ್ಟೋಬರ್ 21ರಂದು ಶತಕೋಟಿ ಡೋಸ್ ಗಳ ಗಡಿಯನ್ನು ದಾಟುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಇಂಥ ಮಹತ್ತರ ಸಾಧನೆಗೈದ ಅಭೂತಪೂರ್ವ ದಾಖಲೆಗೆ ದೇಶ ಪಾತ್ರವಾಯಿತು. ಈ ವರ್ಷದ ಜ.3ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಮೊದಲ ಡೋಸ್ ನೀಡಿಕೆಗೆ ಚಾಲನೆ ನೀಡಲಾಗಿದ್ದು ಈವರೆಗೆ 3.39 ಕೋಟಿ ಪ್ರಥಮ ಡೋಸ್ ಲಸಿಕೆ ನೀಡಲಾಗಿದೆ. ಜ.10ರಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ವಿಧಾನ ಸಭೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಚುನಾವಣ ಕರ್ತವ್ಯದಲ್ಲಿ ಭಾಗಿಗಳಾಗುವ ಅಧಿಕಾರಿಗಳು ಮತ್ತು ಸಿಬಂದಿ ಹಾಗೂ ಇತರ ಕಾಯಿಲೆಪೀಡಿತ 60 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಸಲಹೆ ಮೇರೆಗೆ ಮುನ್ನೆಚ್ಚರಿಕೆ ಡೋಸ್(3ನೇ ಡೋಸ್) ನೀಡಲಾಗುತ್ತಿದ್ದು ಅದರಂತೆ 43.19 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ. ಈ ಬೃಹತ್ ಲಸಿಕಾ ಅಭಿಯಾನದ ಸಂದರ್ಭದಲ್ಲಿ ಒಂದೇ ದಿನ 2.51 ಕೋಟಿ ಡೋಸ್ ಲಸಿಕೆಯನ್ನು ನೀಡಿದ್ದು ಈ ಅಭಿಯಾನದ ಯಶೋಗಾಥೆಯ ಇನ್ನೊಂದು ಮೈಲಿಗಲ್ಲು.
ಇದೇ ವೇಳೆ ಕೊರೊನಾ ಸೋಂಕಿನ ಹರಡುವಿಕೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸದ್ಯ ದೇಶದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ವ್ಯಾಪಕ ವಾಗಿ ಹರಡುತ್ತಿದೆಯಾದರೂ ಬಹುಸಂಖ್ಯೆಯಲ್ಲಿ ಜನರು ಕೊರೊನಾ ನಿರೋಧಕ ಲಸಿಕೆ ಪಡೆದಿರುವುದರಿಂದ ಹೆಚ್ಚೇನೂ ಪ್ರಭಾವ ಬೀರಿಲ್ಲ ಎಂಬುದು ಸಮಾಧಾನದ ವಿಷಯ.
ಕೊರೊನಾ ಲಸಿಕಾ ಅಭಿಯಾನದ ಈ ಮಹತ್ಸಾಧನೆ ಸರಕಾರದ ಇಚ್ಛಾಶಕ್ತಿ ಮತ್ತು ಬದ್ಧತೆ ಹಾಗೂ ಜನತೆಯ ಸಹಕಾರವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕೊರೊನಾ ಸೋಂಕಿನ ವಿರು ದ್ಧದ ಹೋರಾಟದಲ್ಲೂ ಇದೇ ಇಚ್ಛಾಶಕ್ತಿ ತೋರಿಸಬೇಕಾಗಿದೆ.