Advertisement

ಕಾಯಿಲೆಗಳ ಕಾಟ : ಲಸಿಕೆ ಕಾರ್ಯಕ್ರಮಗಳ ಸ್ಥಗಿತದಿಂದ ಮಕ್ಕಳ ಜೀವಕ್ಕೇ ಅಪಾಯ!

02:18 PM Jun 05, 2020 | mahesh |

ಲಂಡನ್‌: ವಿವಿಧ ಕಾಯಿಲೆಗಳನ್ನು ತಡೆಯಲು ಹಾಕುತ್ತಿದ್ದ ಲಸಿಕೆ ಕಾರ್ಯಕ್ರಮಗಳು ವಿಶ್ವಾದ್ಯಂತ ಸ್ಥಗಿತಗೊಂಡಿದ್ದು, ಇದು ಮಕ್ಕಳ ಬದುಕಿಗೇ ತೀರ ಅಪಾಯವನ್ನು ತಂದೊಡ್ಡಿದೆ.
ಸುಮಾರು 68 ದೇಶಗಳಲ್ಲಿ ಇದರ ಪರಿಣಾಮ ತೀವ್ರವಾಗಿದೆ. ಕೋವಿಡ್‌-19 ಅನ್ನು ತಡೆಯಲು ಲಸಿಕೆ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಅದರಂತೆ ದೇಶಗಳು ಅವುಗಳನ್ನು ಸ್ಥಗಿತಗೊಳಿಸಿದ್ದವು. ಆದರೆ ಇದರಿಂದ ದೀರ್ಘಾವಧಿಯಲ್ಲಿ ಸಮಸ್ಯೆಯಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ವಿಶ್ವಸಂಸ್ಥೆ ಮಕ್ಕಳ ನಿಧಿ (ಯುನಿಸೆಫ್), ದಿ ಸಾಬಿನ್‌ ಲಸಿಕಾ ಸಂಸ್ಥೆ-ಗವಿ, ಲಸಿಕಾ ಒಕ್ಕೂಟಗಳು ಲಸಿಕೆ ಸರಿಯಾಗಿ ಹಾಕದಿದ್ದರೆ ಸರಿಯಾಗಿ ಮಕ್ಕಳು ನಿತ್ಯವೂ ಸಾವಿಗೀಡಾಗಬಹುದು ಎಂದು ಹೇಳಿವೆ.

Advertisement

ಪ್ರಮುಖವಾಗಿ ಲಸಿಕಾ ಕಾರ್ಯಕ್ರಮಗಳು ಸ್ಥಗೊತಗೊಳ್ಳಲು ಕಾರಣವಾದ ಅಂಶಗಳು ಹಲವಿವೆ. 
– ಮನೆಯಿಂದ ಹೊರಗೆ ಹೋದರೆ ಕೋವಿಡ್‌ ತಗುಲಬಹುದು ಎಂಬ ಭೀತಿಯಿಂದ ಮಕ್ಕಳನ್ನು ಹೆತ್ತವರು ಹೊರಗೆ ಕರೆತರುತ್ತಿಲ್ಲ

– ಆರೋಗ್ಯ ಕಾರ್ಯಕರ್ತರನ್ನು ಲಸಿಕಾ ಕಾರ್ಯಕ್ರಮಗಳಿಂದ ಕೋವಿಡ್‌ ವಿರುದ್ಧ ಹೋರಾಟಕ್ಕೆ ನಿಯೋಜಿಸಲಾಗಿದೆ.

– ಕ್ಲಿನಿಕ್‌ಗಳಿಗೆ ಲಸಿಕೆಗಳ ಲಭ್ಯತೆ ಕಡಿಮೆಯಾಗಿದ್ದು.

ದಡಾರ, ಕಾಲರಾ, ಡಿಫ್ತಿರಿಯಾಗಳು ಹೆಚ್ಚುತ್ತಿವೆ. ಇದು ನಿಜವಾದ ಸಮಸ್ಯೆ, ಇಂತಹ ಕಾಯಿಲೆಗಳನ್ನು ನಾವು ಸಾಕಷ್ಟು ನಿಯಂತ್ರಣಕ್ಕೆ ತಂದಿದ್ದೆವು. ಈಗ ಅದೆಲ್ಲವೂ ನೀರಿನಲ್ಲಿ ಮಾಡಿದ ಹೋಮದಂತಾಗಲಿದೆ ಎಂಬ ಆತಂಕ ಕಾಡುತ್ತಿದೆ ಎಂದು ಯುನಿಸೆಫ್ನ ನಿರ್ದೇಶಕ ಹೆನ್ರಿಟಾ ಫೋರ್‌ ಹೇಳುತ್ತಾರೆ.

Advertisement

ಸಾಮಾನ್ಯವಾಗಿ ನೈಜೀರಿಯಾದ ರಾಜಧಾನಿಯಲ್ಲಿ ಲಸಿಕೆಗಳನ್ನು ಹಾಕಿಸಲು ಕ್ಲಿನಿಕ್‌ಗಳಲ್ಲಿ ಜನರ ದಂಡೇ ನೆರೆದಿರುತ್ತದೆ. ಸದ್ಯ ಅಲ್ಲಿ ಯಾರೂ ಇಲ್ಲ. ಆ ದೇಶದಲ್ಲಿ 1 ಸಾವಿರಕ್ಕೂ ಹೆಚ್ಚು ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿವೆ.

ಇದರೊಂದಿಗೆ ಪೋಲಿಯೋ, ಪಾರ್ಶ್ವವಾಯು ಸಮಸ್ಯೆಯಗಳೂ ಮತ್ತೆ ವಕ್ಕರಿಸಿಕೊಂಡಿದ್ದು, ಫೆಬ್ರವರಿಯಿಂದೀಚೆಗೆ ವರದಿಯಾಗುತ್ತಿವೆ.

ಲಕ್ಷಾಂತರ ಮಕ್ಕಳಿಗೆ ಲಸಿಕೆ ಹಾಕಿಲ್ಲ
ಕೋವಿಡ್‌ನಿಂದಾಗಿ ವಿವಿಧ ದೇಶಗಳಲ್ಲಿ ಲಕ್ಷಾಂತರ ಮಕ್ಕಳಿಗೆ ಲಸಿಕೆ ಹಾಕಿಲ್ಲ. ಆಗ್ನೇಯ ಏಷ್ಯಾದಲ್ಲಿ 3.48 ಕೋಟಿ ಮಕ್ಕಳಿಗೆ ಲಸಿಕೆ ಹಾಕಿಲ್ಲ. ಆಫ್ರಿಕಾದಲ್ಲಿ 2.29 ಕೋಟಿ ಮಕ್ಕಳಿಗೆ ಬಾಕಿ ಇದೆ. ಇದರ ಮಧ್ಯೆ ನೇಪಾಳ ಮತ್ತು ಕಾಂಬೋಡಿಯಾದಲ್ಲಿ ದಡಾರ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದರೆ, ಇಥಿಯೋಪಿಯಾದಲ್ಲಿ ಕಾಲರಾ, ದಡಾರ, ಅರಸಿನ ಕಾಯಿಲೆಗಳು ಮರುಕಳಿಸಿವೆ.

ನಿತ್ಯ 6 ಸಾವಿರ ಸಾವು?
ಲಸಿಕೆ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ನಡೆಯದಿರುವುದರಿಂದ ಮುಂದಿನ ದಿನಗಳಲ್ಲಿ ವಿಶ್ವಾದ್ಯಂತ ಸುಮಾರು 6 ಸಾವಿರ ಮಂದಿ ಮಕ್ಕಳು ನಿತ್ಯವೂ ವಿವಿಧ ಕಾಯಿಲೆಗಳಿಂದ ಸಾವಿಗೀಡಾಗಬಹುದು ಎಂದು ಬ್ಲೂಮ್‌ರ್‍ಯಾಂಗ್‌ ಸ್ಕೂಲ್‌ ಸಾರ್ವಜನಿಕ ಆರೋಗ್ಯ ವಿಭಾಗದ ಜಾನ್ಸ್‌ ಹಾಪ್‌ಕಿನ್ಸ್‌ ಅವರು ಹೇಳಿದ್ದಾರೆ. ಲಸಿಕೆ ಕಾರ್ಯಕ್ರಮಗಳು ನಿಂತಿದ್ದೇ ಆದಲ್ಲಿ ಇವುಗಳು ಮರುಕಳಿಸುವುದನ್ನೇ ನಿರೀಕ್ಷಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಲಸಿಕೆ ಮತ್ತು ರೋಗನಿರೋಧಕ ವಿಭಾಗದ ಮುಖ್ಯಸ್ಥರಾದ ಕೇಟ್‌ ಒಬ್ರಿಯಾನ್‌ ಅವರು ಹೇಳುತ್ತಾರೆ. ಜತೆಗೆ ಇತ್ತೀಚಿನ ದಿನಗಳಲ್ಲಿ ನಾವು ನೋಡದಷ್ಟು ಪ್ರಮಾಣದಲ್ಲಿ ಮಕ್ಕಳ ಸಾವು ಸಂಭವಿಸಬಹುದು ಎಂದೂ ಹೇಳುತ್ತಾರೆ.

ಇದಷ್ಟೇ ಸಮಸ್ಯೆಯಲ್ಲ ಕೋವಿಡ್‌ ವೈರಸ್‌ ವಿರುದ್ಧ ಹೋರಾಟದಲ್ಲಿ ದೇಶಗಳು ನಿರತವಾಗಿರುವಂತೆಯೇ, ಬಡ ದೇಶಗಳಿಗೆ ಇತರ ಲಸಿಕೆ ಕಾರ್ಯಕ್ರಮಗಳನ್ನು ಮುಂದುವರಿಸುವಷ್ಟು ಶಕ್ತಿಯೂ ಇಲ್ಲವಾಗಿದೆ. ಅವುಗಳು ಇದೀಗ ಸಹಾಯಕ್ಕಾಗಿ ಬೇರೆ ದೇಶಗಳನ್ನು ಮತ್ತು ವಿಶ್ವ ಆರೋಗ್ಯ ಸಂಸ್ಥೆಯನ್ನು ಎದುರು ನೋಡುತ್ತಿವೆ ಎಂದು ಆರೋಗ್ಯ ಪರಿಣತರು ಹೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next