Advertisement

ವ್ಯಾಕ್ಸಿನೇಶನ್‌: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೇಂದ್ರ ಪ್ರಥಮ

07:58 PM Oct 24, 2021 | Team Udayavani |

ಉಡುಪಿ: ಜಿಲ್ಲೆಯ ಸುಮಾರು 150 ಕೇಂದ್ರಗಳಲ್ಲಿ ನಡೆಯು ತ್ತಿರುವ ಕೋವಿಡ್‌ ವ್ಯಾಕ್ಸಿನೇಶನ್‌ ವಿತರಣೆಯಲ್ಲಿ ಮಣಿಪಾಲದ ನಗರ ಆರೋಗ್ಯ ಕೇಂದ್ರ ಪ್ರಥಮ ಸ್ಥಾನದಲ್ಲಿದೆ.

Advertisement

ವರ್ಷಾರಂಭ ಜ. 16ರಂದು ಲಸಿಕೆ ವಿತರಿಸಲು ಆರಂಭವಾಯಿತು. ಮಣಿಪಾಲ ಕೇಂದ್ರದಲ್ಲಿ ಜ. 21ರಂದು ಆರಂಭಗೊಂಡಿತು. ಮೊದಲ ಕೆಲವು ದಿನ ಮಣಿಪಾಲ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿಯ ನಗರ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಆಗ ಸ್ಥಳಾಭಾವ ಉಂಟಾಯಿತು. ಬಳಿಕ ಪಕ್ಕದಲ್ಲಿರುವ ಮಾಹೆ ಅತಿಥಿಗೃಹದಲ್ಲಿ ಫೆಬ್ರವರಿ- ಮಾರ್ಚ್‌ ವೇಳೆ ಲಸಿಕೆಯನ್ನು ವಿತರಿಸಲಾಯಿತು. ಜನರು ಇನ್ನಷ್ಟು ಹೆಚ್ಚಿಗೆ ಬಂದ ಕಾರಣ ಮಣಿಪಾಲ ಮಾಧವಕೃಪಾ ಶಾಲೆಗೆ ಶಿಬಿರವನ್ನು ಸ್ಥಳಾಂತರಿಸಲಾಯಿತು. ಮಾಧವಕೃಪಾ ಶಾಲೆಯಲ್ಲದೆ ಸುಮಾರು 10 ಕಡೆಗಳಲ್ಲಿ ವಿವಿಧ ದಿನಗಳಲ್ಲಿ ಬೇಡಿಕೆಗೆ ಅನುಸಾರ ಶಿಬಿರಗಳನ್ನು ನಡೆಸಲಾಗಿತ್ತು. ಇನ್ನು 2-3 ದಿನಗಳಲ್ಲಿ ಮತ್ತೆ ಶಿಬಿರವನ್ನು ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ.

ಸುಮಾರು 75ಸಾವಿರ ಡೋಸ್‌ ಲಸಿಕೆ
ಮಣಿಪಾಲ ಕೇಂದ್ರದ ವ್ಯಾಪ್ತಿಯಲ್ಲಿ ಮಣಿಪಾಲ, ಕಡಿಯಾಳಿ, ಕಕ್ಕುಂಜೆ, ಕುಂಜಿಬೆಟ್ಟು, ಕರಂಬಳ್ಳಿ, ಸಗ್ರಿ, ಪೆರಂಪಳ್ಳಿ, ದೊಡ್ಡಣಗುಡ್ಡೆ, ಇಂದ್ರಾಳಿ ಹೀಗೆ 9 ವಾರ್ಡ್‌ಗಳಿವೆ. ಇಲ್ಲಿನ 18 ವರ್ಷ ಮೀರಿದ ಜನಸಂಖ್ಯೆ 40,990. ಜಿಲ್ಲೆಯಲ್ಲಿ ಇದುವರೆಗೆ ನಡೆದ ಒಟ್ಟು 13.89 ಲಕ್ಷ ಡೋಸ್‌ ಲಸಿಕೆ ವಿತರಣೆಯಲ್ಲಿ ಮಣಿಪಾಲ ಕೇಂದ್ರದಲ್ಲಿ ಪ್ರಥಮ ಮತ್ತು ದ್ವಿತೀಯ ಡೋಸ್‌ ಸೇರಿ ಒಟ್ಟು ಸುಮಾರು 75,000 ಡೋಸ್‌ ಲಸಿಕೆಯನ್ನು ನೀಡಲಾಗಿದೆ. ಒಂದು ದಿನದಲ್ಲಿ ಗರಿಷ್ಠ 1,400 ಡೋಸ್‌ ಲಸಿಕೆ ನೀಡಿದ್ದೂ ಇದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ಕೇಂದ್ರ ಇದೆನಿಸಿದೆ. 700-800 ಜನರು ಕುಳಿತುಕೊಳ್ಳುವಂತೆ ಸ್ಥಳಾವಕಾಶ, ಜನಸಾಂದ್ರತೆ, ಒಬ್ಬರು ವೈದ್ಯಾಧಿಕಾರಿ, ಸ್ಟಾಫ್ ನರ್ಸ್‌ ಇಬ್ಬರು, ಎಎನ್‌ಎಂ ಏಳು, ಆಶಾ ಕಾರ್ಯಕರ್ತರು 20 ಮಂದಿ ಇದ್ದು ಇವರೆಲ್ಲರ ಪರಿಶ್ರಮ ಈ ಸಾಧನೆಗೆ ಕಾರಣವಾಗಿದೆ.

ಮಣಿಪಾಲದಲ್ಲಿ ಇನ್ನೊಂದೆಡೆ ಕಸ್ತೂರ್ಬಾ ಆಸ್ಪತ್ರೆಯಲ್ಲಿಯೂ 80,000 ಲಸಿಕೆ ವಿತರಣೆಯಾಗಿದೆ. ಇದರಲ್ಲಿ ಮಾಹೆ ವಿ.ವಿ.ಯಿಂದ ಸಿಬಂದಿ, ಸಿಬಂದಿಗಳ ಮನೆಯವರು ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಸುಮಾರು 30,000 ಲಸಿಕೆ ನೀಡಲಾಗಿತ್ತು.

ಇದನ್ನೂ ಓದಿ:ದ್ವಿಚಕ್ರ ವಾಹನಗಳ ಪೆಟ್ರೋಲ್ ಕಳ್ಳತನ: ಅಳಲು ತೋಡಿಕೊಳ್ಳುತ್ತಿರುವ ಸ್ಥಳೀಯರು

Advertisement

ಮಾದರಿ ಕೇಂದ್ರ
ಮಣಿಪಾಲ ಮಾಧವಕೃಪಾ ಶಾಲೆಯ ವಿಶಾಲ ಸಭಾಂಗಣದಲ್ಲಿ ಅತಿ ಹೆಚ್ಚು ಜನರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಲಸಿಕೆ ನೀಡಲು ಸಾಧ್ಯವಾದುದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗಮನಕ್ಕೆ ಬಂದಿದೆ. ಇದೊಂದು ಮಾದರಿ ಶಿಬಿರ ಎಂದು ಕೇಂದ್ರ, ರಾಜ್ಯ ಮಟ್ಟದಲ್ಲಿ ಗುರುತಿಸಿ ಇತರ ಭಾಗಗಳಲ್ಲಿಯೂ ವಿಶಾಲ ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಲಾಗಿದೆ.

ಸಮೂಹ ಪ್ರಯತ್ನ- ಸ್ಪಂದನೆ
ಮಣಿಪಾಲ ಆರೋಗ್ಯ ಕೇಂದ್ರದಿಂದ ಉತ್ತಮ ಸಮೂಹ ಪ್ರಯತ್ನ ನಡೆದಿದೆ. ಯೋಜನಾಬದ್ಧ ಸೆಶನ್‌ ನಡೆಸಲಾಗಿದೆ. ಸಮಯ ಪಾಲನೆಯಲ್ಲಿಯೂ ಉತ್ತಮ ಸಾಧನೆ ನಡೆದಿದೆ. ಜನರ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸಿದ್ದಾರೆ.
-ಡಾ| ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ.

ಎಲ್ಲರ ಸಹಕಾರದಿಂದ ಸಾಧನೆ
ಮಣಿಪಾಲ ನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಉತ್ತಮ ಪ್ರಮಾಣದಲ್ಲಿ ಲಸಿಕಾಕರಣ ನಡೆಯಲು ಕೇಂದ್ರದ ಎಲ್ಲ ಸಿಬಂದಿ, ಆಶಾ ಕಾರ್ಯಕರ್ತರು, ಸ್ವಯಂಸೇವಕರು, ಜನಪ್ರತಿನಿಧಿಗಳು, ಮಾಧವಕೃಪಾ ಶಾಲೆ, ಮಾಹೆ ಆಡಳಿತ ಮಂಡಳಿ, ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತದ ನಿರಂತರ ಸಹಕಾರ, ಪ್ರಯತ್ನವೇ ಕಾರಣವಾಗಿದೆ.
-ಡಾ| ಶಾಮಿನಿ ಕುಮಾರ್‌, ವೈದ್ಯಾಧಿಕಾರಿ, ನಗರ ಆರೋಗ್ಯ ಕೇಂದ್ರ, ಮಣಿಪಾಲ.

 

Advertisement

Udayavani is now on Telegram. Click here to join our channel and stay updated with the latest news.

Next