ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ವೇಗ ಪಡೆದಿದ್ದು, ಒಂದು ವಾರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ಎರಡು ದಿನಗಳ ಜಿಲ್ಲೆಯ ಅಂಕಿ ಅಂಶದ ಪ್ರಕಾರ ಮಂಗಳೂರಿನಲ್ಲಿ ಅತೀ ಹೆಚ್ಚು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಮಂಗಳೂರಿನ 32,282 ಮಂದಿ ಲಸಿಕೆ ಪಡೆದುಕೊಂಡಿದ್ದು, ಬಂಟ್ವಾಳ ತಾಲೂಕಿನ 11,948 ಮಂದಿ, ಪುತ್ತೂರು ತಾಲೂಕಿನ 7,030, ಬೆಳ್ತಂಗಡಿ ತಾಲೂಕಿನ 7,025, ಸುಳ್ಯ ತಾಲೂಕಿನ 3,203 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಅದರಲ್ಲೂ ಜೂನ್ 21ರಂದು ಒಂದೇ ದಿನ 44,392 ಮಂದಿ ಲಸಿಕೆ ಪಡೆದು ಅತೀ ಹೆಚ್ಚು ಲಸಿಕೆ ನೀಡಿದ ರಾಜ್ಯದ 6ನೇ ಜಿಲ್ಲೆಯಾಗಿ ದ.ಕ. ಜಿಲ್ಲೆ ಗುರುತಿಸಿಕೊಂಡಿತ್ತು.
ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಲಸಿಕೆ ಪಡೆದವರಲ್ಲಿ ಮುಂಚೂಣಿ ಕಾರ್ಯಕರ್ತರೇ (ಫ್ರಂಟ್‌ಲೆçನ್ ವರ್ಕರ್) ಅಧಿಕ. ಮೊದಲನೇ ಡೋಸ್ ಲಸಿಕೆ ಪಡೆದುಕೊಳ್ಳಲು 12,392 ಮಂದಿಯ ಗುರಿಯನ್ನು ಆರೋಗ್ಯ ಇಲಾಖೆ ಇಟ್ಟುಕೊಂಡಿದ್ದು, ಗುರಿ ಮೀರಿ 14,129 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಶೇ.114.02 ಗುರಿ ಮುಟ್ಟಿದೆ. ಶೇ.52.19 ಮಂದಿ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಶೇ.93.90 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, ಶೇ.67.70 2ನೇ ಡೋಸ್ ಲಸಿಕೆ ಪಡೆದಿದ್ದಾರೆ. 18ರಿಂದ 44 ವರ್ಷದೊಳಗಿನ ಶೇ.12.34ರಷ್ಟು ಮಂದಿ ಮೊದಲ ಡೋಸ್, 45ರಿಂದ 60 ವರ್ಷದೊಳಗಿನ ಶೇ.47.62ರಷ್ಟು ಮಂದಿ ಮೊದಲ ಡೋಸ್, ಶೇ.15.20ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟವರು ಶೇ.77.36ರಷ್ಟು ಮಂದಿ ಮೊದಲ ಡೋಸ್, ಶೇ.38.52ರಷ್ಟು ಮಂದಿ 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಮೊದಲ ಕೆಲವು ದಿನಗಳ ಕಾಲ ಕೊವ್ಯಾಕ್ಸಿನ್ ನೀಡಲಾಗಿತ್ತು. ಬಳಿಕ ಕೊವಿಶೀಲ್ಡ್ ನೀಡಲಾಗಿದೆ. ಎರಡೂ ಲಸಿಕೆ ಹೋಲಿಸಿದರೆ ಜಿಲ್ಲೆಯಲ್ಲಿ ಕೊವಿಶೀಲ್ಡ್ ಲಸಿಕೆ ಪಡೆದವರೇ ಅಧಿಕ. ಜಿಲ್ಲೆಯಲ್ಲಿ ಈಗಾಗಲೇ 45 ವರ್ಷ ಮೇಲ್ಪಟ್ಟ 3,14,663 ಮಂದಿ ಕೊವಿಶೀಲ್ಡ್ ಮೊದಲ ಡೋಸ್, 58,858 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 39,011 ಮಂದಿ ಮೊದಲ ಡೋಸ್ ಕೊವ್ಯಾಕ್ಸಿನ್ ಮತ್ತು 31,153 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಕೋಟದಡಿಯಲ್ಲಿ ಹೆಚ್ಚಿನ ಲಸಿಕೆಗಳು ಬರುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ದೊರಕಿದೆ. ಹಿರಿಯ ನಾಗರಿಕರು ಹೆಚ್ಚಾಗಿ ಲಸಿಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ನಗರ ಪ್ರದೇಶದಲ್ಲಿ ಮಾತ್ರ ಲಸಿಕೆ ಅಭಿಯಾನಕ್ಕೆ ವೇಗ ದೊರಕುತ್ತಿತ್ತು. ಆದರೆ ಇದೀಗ ಗ್ರಾಮೀಣ ಭಾಗದ ಮಂದಿಯೂ ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ.
–ಡಾ| ರಾಜೇಶ್, ಆರ್‌ಸಿಎಚ್ ಅಧಿಕಾರಿ, ಆರೋಗ್ಯ ಇಲಾಖೆ ದ.ಕ.