ಭದ್ರಾವತಿ: ಹೊಸ ಕೊರೊನಾ ಅಲೆ ಆರಂಭವಾದ ದಿನದಿಂದ ಇಲ್ಲಿಯವರೆಗೂ 27 ಪ್ರಕರಣಗಳು ದಾಖಲಾಗಿವೆ. ಗ್ರಾಮಾಂತರ ಪ್ರದೇಶಗಳಿಗಿಂತ ನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೊರೊನಾ ಸೋಂಕತರ ಹೆಚ್ಚಿರುವುದು ಕಂಡು ಬಂದಿದೆ ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ| ಅಶೋಕ್ ಹೇಳಿದರು.
ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಪಂ ಅಧ್ಯಕ್ಷೆ ಲಕ್ಷ್ಮಿàದೇವಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ನಗರ ಪ್ರದೇಶದಲ್ಲಿ 15 ಪ್ರಕರಣಗಳು ದಾಖಲಾಗಿವೆ. ಅಂತರಗಂಗೆ,ಬಾರಂದೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಒಂದು ಎರಡು ಪ್ರಕರಣಗಳು ಮಾತ್ರ ಕಂಡುಬಂದಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ. ಈಗಾಗಲೇ 25 ಸಾವಿರ ವ್ಯಾಕ್ಸಿನೇಷನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ತಾಪಂ ಸದಸ್ಯ ಧರ್ಮೇಗೌಡ ಮಾತನಾಡಿ, ಮುಸಲ್ಮಾನರು ಹೆಚ್ಚಿರುವ ಗ್ರಾಮೀಣ ಭಾಗದಲಿ ವ್ಯಾಕ್ಸಿನೇಷನ್ ಕುರಿತು ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಬೇಕಾಗಿದೆ. ರಂಜಾನ್ ಹಬ್ಬ ಸಮೀಪಿಸುತ್ತಿರವುದರಿಂದ ಅವರು ಯಾವ ಸಂದರ್ಭದಲ್ಲಿ ವ್ಯಾಕ್ಸಿನೇಶನ್ ಹಾಕಿಸಿಕೊಳ್ಳಲು ಬಯಸುತ್ತಾರೆ ಎಂದು ತಿಳಿದು ಅದಕ್ಕೆ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಬೇಕು ಎಂದರು.ಇದಕ್ಕೆ ಉತ್ತರಿಸಿದ ಡಾ| ಅಶೋಕ್ ಮಸೀದಿಗಳಿಗೆ ಭೇಟಿ ನೀಡಿ ಈ ಬಗ್ಗೆ ಗಮನ ಹರಿಸಲಾಗುವುದು. ವ್ಯಾಕ್ಸಿನ್ ಹಾಕಿಸಿಕೊಂಡರೆ ಕೊರೊನಾ ಬರುವುದಿಲ್ಲೆಂಧು ಬಾವಿಸಬಾರದು ಎಂದರು.
ಕೃಷಿ ಅಧಿಕಾರಿ ಸಂದೀಪ್ ಮಾತನಾಡಿ, ರೈತರ ಬೆಳೆ ದೃಢೀಕರಣ ಕಾರ್ಯ ಕೃಷಿ ಇಲಾಖೆ ವತಿಯಿಂದ ನಡೆಯುತ್ತಿದೆ. ದಾಖಲಾಗಿರುವ ಬೆಳೆ ಸರ್ವೇಯಲ್ಲಿ ತಪ್ಪಾಗಿದ್ದರೆ ಬದಲಾವಣೆ ಮಾಡಲು ರೈತರಿಗೆ ಅವಕಾಶವಿದೆ ಎಂದು ಮಾಹಿತಿ ನೀಡಿದರು. ತಾಪಂ ಕಾರ್ಯ ನಿರ್ವಹಣಾ ಧಿಕಾರಿ ರಮೇಶ್ ಮಾತನಾಡಿ, ನಾನು ಹೊಸದಾಗಿ ಕರ್ತವ್ಯ ನಿರ್ವಹಿಸಲು ಬಂದಿದ್ದು ನಿಮ್ಮೆಲ್ಲರ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್, ಸದಸ್ಯರಾದ ಆಶಾ ಶ್ರೀಧರ್, ಸರೋಜಮ್ಮ, ಹಾಜ್ಯಾನಾಯ್ಕ, ಅಣ್ಣಾಮಲೆ ಮತ್ತಿತರರು ಇದ್ದರು