ರಾಮನಗರ: ಮತದಾನ ದಿನ ಮೇ 12ರಂದು ಅರ್ಹರೆಲ್ಲರೂ ಮತದಾನ ಮಾಡಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಅಂದು ವೇತನ ಸಹಿತ ರಜೆ ಘೋಷಿಸಲಾಗಿದ್ದು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೆ ಮುಹಿಲನ್ ಸಲಹೆ ನೀಡಿದ್ದಾರೆ.
ತಾಲೂಕಿನ ಹಾರೋಹಳ್ಳಿಯ ಸ್ಟೌವ್‌ಕ್ರಾಫ್ಟ್ ಕಾರ್ಖಾನೆಯ ಕಾರ್ಮಿಕರಿಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವತ್ರಿಕ ರಜೆ: ವಿವಿಧ ವ್ಯಾಪಾರ, ವಹಿವಾಟು ಸಂಸ್ಥೆಗಳು ಸೇರಿದಂತೆ ಕೈಗಾರಿಕಾ ಸಂಸ್ಥೆಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಪ್ರಜಾಪ್ರತಿನಿಧಿ ಕಾಯ್ದೆ 1954ರ ಸೆಕ್ಷನ್ 135 (ಬಿ)ರ ಅಡಿಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಮೇ 12ರಂದು ವೇತನ ಸಹಿತ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಕಾರ್ಮಿಕರು ಮತಗಟ್ಟೆಗಳಿಗೆ ತೆರಳಿ ಮತ ದಾನ ಮಾಡುವ ಸಲುವಾಗಿಯೇ ಈ ರಜೆ ಘೋಷಿಸಲಾಗಿದೆ. ನೀವು ಚಲಾಯಿಸುವ ಹಕ್ಕು ಪ್ರಜಾ ಪ್ರಭುತ್ವದ ಅಡಿಗಲ್ಲು. ಈ ಅವಕಾಶ ಬಳಸಿಕೊಂಡು ಉತ್ತಮರನ್ನು ಆಯ್ಕೆ ಮಾಡಿ, ಆ ಮೂಲಕ ಉತ್ತಮ ಸರ್ಕಾರದ ರಚನೆಗೆ ಕಾರಣರಾಗಬೇಕು ಎಂದರು.
ತಪ್ಪದೇ ಮತದಾನ ಮಾಡಿ: ಮೇ 12ರಂದು ಕಾರ್ಮಿಕರು ಮತದಾನ ಮಾಡುವುದಲ್ಲದೇ ತಮ್ಮ ಸ್ನೇಹಿತರು, ಕುಟುಂಬ ವರ್ಗದವರು ಹಾಗೂ ತಮ್ಮ ಪರಿಸರದಲ್ಲಿನ ಎಲ್ಲಾ ಅರ್ಹ ಮತದಾರರಿಗೆ ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಮತದಾನದ ಪ್ರಮಾಣ ಕಳೆದ ಬಾರಿಗಿಂತಲೂ ಹೆಚ್ಚಾಗಬೇಕು ಎಂದರು.
ಈ ಬಾರಿ ಚುನಾವಣಾ ಆಯೋಗ ವಿವಿಪ್ಯಾಟ್ ಎಂಬ ಯಂತ್ರವನ್ನು ಅನ್ನು ನೂತನವಾಗಿ ಪರಿಚಯಿಸಿದೆ. ಮತಚಲಾಯಿಸಿದ ನಂತರ ತಾವು ಯಾರಿಗೆ ಮತ ಚಲಾಯಿಸಿದ್ದೀರಿ ಎಂಬುದನ್ನು ಈ ಯಂತ್ರ 7 ಸೆಕೆಂಡ್‌ಗಳ ಕಾಲ ತಾವು ಮತ ಚಲಾಯಿಸಿದ್ದು ಯಾರಿಗೆ ಎಂಬುದನ್ನು ತೋರಿಸುತ್ತದೆ ಎಂದರು.
ಪ್ರತಿಜ್ಞಾ ವಿಧಿ: ಯಾವುದೇ ಆಮೀಷಕ್ಕೆ ಒಳಗಾಗದೆ ಮತ ಚಲಾಯಿಸುವುದಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಕಾರ್ಖಾನೆ ಯಲ್ಲಿದ್ದ 1500ಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಎಡಗೈ ತೋರುಬೆರಳನ್ನು ಎತ್ತಿ ಮೇ 12ರಂದು ಮತದಾನ ಮಾಡುವುದಾಗಿ ಪ್ರಮಾಣೀಕರಿಸಿದರು.
ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹೊನಮನೆ, ಕನಕಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಿವರಾಮ್, ಸ್ಟೌವ್ ಕ್ರಾಪ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಗಾಂಧಿ, ಕೋಳಗಾನಹಳ್ಳಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಇತರರು ಉಪಸ್ಥಿತರಿದ್ದರು.
ಟಯೋಟಾ ಕಂಪನಿಯಲ್ಲಿ ಮತದಾನ ಜಾಗೃತಿ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಯೋಟಾ ಮೋಟಾರ್ ಕಂಪನಿಯಲ್ಲಿ ಇದೇ ದಿನ ಅಲ್ಲಿನ ಕಾರ್ಮಿಕರಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಕಂಪನಿಯ ಎಚ್.ಆರ್. ಸುಧೀಂದ್ರ ಹಾಗೂ ಇತರರು ಉಪಸ್ಥಿತರಿದ್ದರು.